ಬೆಳಗಾವಿ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ: ಶಾಸಕಿ ಹೆಬ್ಬಾಳಕರ
* ಸಾವು ನೋವಿಗೆ ಯಾರು ಹೊಣೆ, ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತೆ
* ಬೆಳಗಾವಿ ಸ್ಮಾರ್ಟ್‌ಸಿಟಿ ಸಂಪೂರ್ಣ ವಿಫಲ
* ಲೈಟ್‌ಕಂಬ ಬದಲಾವಣೆ ಮಾಡೋದೇ ಸ್ಮಾರ್ಟ್‌ಸಿಟಿ ಸಾಧನೆ ಆಗಿದೆ
ಬೆಳಗಾವಿ(ಜು.21): ಬೆಂಗಳೂರು ಹಾಗೂ ಮೈಸೂರು ಹೇಗೆ ನಮ್ಮ ಕಣ್ಣಿಗೆ ಕಾಣಿಸುತ್ತದೆಯೋ ಆ ರೀತಿ ನಮ್ಮ ಬೆಳಗಾವಿ ಸ್ಮಾರ್ಟ್‌ಸಿಟಿ ಕಾಣಿಸುತ್ತಿಲ್ಲ. ಬೆಳಗಾವಿ ಸ್ಮಾರ್ಟ್‌ಸಿಟಿ ಸಂಪೂರ್ಣ ವಿಫಲವಾಗಿದ್ದು, ಇದರಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಟ್‌ಕಂಬ ಬದಲಾವಣೆ ಮಾಡುವುದೇ ಸ್ಮಾರ್ಟ್‌ಸಿಟಿ ಸಾಧನೆ ಆಗಿದೆ. ಎರಡು ವರ್ಷಗಳ ಹಿಂದೆ ಅಳವಡಿಸಿದ್ದ ಪೇವರ್ಸ್ ತೆಗೆದು ಬೇರೆ ಪೇವರ್ಸ್ ಹಾಕುತ್ತಿದ್ದಾರೆ. ಗುಂಡಿ ಮುಚ್ಚುತ್ತಿಲ್ಲ, ರೋಡ್ ಕ್ವಾಲಿಟಿ ಚೆನ್ನಾಗಿಲ್ಲ. ಎಷ್ಟು ಕೋಟಿಯ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಇದರಲ್ಲಿ ಯ್ಯಾವ್ಯಾವ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂಬುದನ್ನು ನಾನು ಚರ್ಚೆ ಮಾಡಲ್ಲ. ಆದರೆ ಬೆಳಗಾವಿ ಸ್ಮಾರ್ಟ್‌ಸಿಟಿ ಸಂಪೂರ್ಣ ವಿಫಲ ಆಗಿದೆ ಎಂದು ಕಿಡಿಕಾರಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ
ಅರೆ ಬರೆ ಸ್ಮಾರ್ಟ್‌ಸಿಟಿ ಕಾಮಗಾರಿ ಸ್ಥಳದಲ್ಲಿ ಸಾರ್ವಜನಿಕರ ಸಾವಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ, ಸಾವು ನೋವಿಗೆ ಯಾರು ಹೊಣೆ, ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ. ಅವರಿಗೆ ಪರಿಹಾರ ಕೊಟ್ಟರೆ ಸಾಲದು, ಏಕೆಂದರೆ ಜೀವ ಮತ್ತೆ ತಿರುಗಿ ಬರುವುದಿಲ್ಲ. ಇನ್ನು ಸ್ಮಾರ್ಟ್‌ಸಿಟಿ ಎಂದರೆ ಬೆಂಗಳೂರು ಹಾಗೂ ಮೈಸೂರು ಹೇಗೆ ನಮ್ಮ ಕಣ್ಣಿಗೆ ಕಾಣಿಸುತ್ತದೆಯೋ ಆ ರೀತಿ ನಮ್ಮ ಬೆಳಗಾವಿ ಕಾಣಿಸುತ್ತಿಲ್ಲ. ಅಧಿಕಾರಿಗಳಿಗೆ ಏನೂ ಜವಾಬ್ದಾರಿ ಇಲ್ಲ. ಜನಪ್ರತಿನಿಧಿಗಳು ಬೋರ್ಡ್ ಹಾಕುವುದನ್ನು ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.