* ಎಲ್ಲ ವಿಷಯಗಳಲ್ಲೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯ * ಕರ್ನಾಟಕದ ಎಲ್ಲ ಬಿಜೆಪಿ ಸಂಸದರೂ ಇದ್ದೂ ವ್ಯರ್ಥ* ಬೆಳಗಾವಿ ಜಿಲ್ಲೆಯ ನಾಲ್ವರು ಮಂತ್ರಿಗಳು ಸಮರ್ಥರಿಲ್ಲವೇ?  

ಬೆಳಗಾವಿ(ಮೇ.10): ಕೊರೋನಾ ಕರ್ಫ್ಯೂ ನಗೆಪಾಟಲಿಗೀಡಾಗಿದೆ. ಸರ್ಕಾರ ನಿರ್ಲಕ್ಷದಿಂದ ಆಕ್ಸಿಜನ್‌ ಇಲ್ಲದೆ ಜನ ಸಾಯುತ್ತಿದ್ದಾರೆ. ಹೆಣದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರಿಗೆಲ್ಲ ಎಂದು ಕೆಪಿಸಿಸಿ ವಕ್ತಾರೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತು ಹೇಳಿಕೆ ನೀಡಿರುವ ಅವರು, ಯಾವ ಮಂತ್ರಿಗಳು ಏನು ಕೆಲಸ ಮಾಡುತ್ತಿದ್ದಾರೆ? ಯಾರಿಗೆ ಯಾವ ಜವಾಬ್ದಾರಿ ಇದೆ? ಎಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿರುವ ಅವರು, ಕೊರೋನಾ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇಡೀ ದೇಶದಲ್ಲಿ ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಚೇ ದಿನ್‌? ನಮಗೆ ಅಚ್ಚೇ ದಿನ್‌ ಬೇಡ. 2013ರಲ್ಲಿದ್ದಂತಹ ದಿನಗಳೇ ಇದ್ದರೆ ಸಾಕು ಎಂದು ರಾಷ್ಟ್ರದ ಜನರು ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ.

"

ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ .20 ಲಕ್ಷ ಕೋಟಿ ಪ್ಯಾಕೇಜ್‌ಗೆ ಜನ ಕಾಯ್ತಾ ಇದ್ದಾರೆ. ಅದಿನ್ನೂ ಬಂದಿಲ್ಲ. ಈ ಸಂದರ್ಭದಲ್ಲಿ 2ನೇ ಅಲೆ ಬಂದಿದೆ. ಇನ್ನು 3ನೇ ಅಲೆ ಬರಲಿದೆ. ಆದರೆ ಹೆಣದಲ್ಲೂ ರಾಜಕಾರಣ ಮಾಡುವುದನ್ನು ಬಿಜೆಪಿಯಿಂದ ಕಲಿಯಬೇಕು ಎನ್ನುವಂತಾಗಿದೆ ಎಂದಿದ್ದಾರೆ.

ನೀರಿಗಾಗಿ ಕೊರೋನಾ ಸೋಂಕಿತರ ಪರದಾಟ..!

ನಾಲ್ವರು ಮಂತ್ರಿಗಳು ಸಮರ್ಥರಿಲ್ಲವೇ?:

ಬೆಳಗಾವಿ ಜಿಲ್ಲೆಯ ಮಂತ್ರಿಗಳು ಇಲ್ಲೇ ಇದ್ದು ಕ್ರಮ ತೆಗೆದುಕೊಳ್ಳಬೇಕಿತ್ತು. ಜಿಲ್ಲೆಗೆ ಬಾಗಲಕೋಟೆಯ ಗೋವಿಂದ ಕಾರಜೋಳ ಅವರನ್ನು ಉಸ್ತುವಾರಿ ಮಂತ್ರಿ ಮಾಡಲಾಗಿದೆ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಅವರಿಗೆ ಜಿಲ್ಲೆಯ ಬಗ್ಗೆ ಮಾಹಿತಿಯೇ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಯಾರೊಬ್ಬರೂ ಸಮರ್ಥರಿಲ್ಲ ಎಂದು ಬೇರೆ ಜಿಲ್ಲೆಯವರನ್ನು ಮಾಡಿದಂತಿದೆ. ಜಿಲ್ಲೆಯ ಪರಿಸ್ಥಿತಿ ಕೈ ಮೀರಿ ಹೋಗಿದೆ. ಕೆಎಲ…ಇ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಬೆಡ್‌ಗಳನ್ನು 20ರಿಂದ 50ಕ್ಕೆ ಹೆಚ್ಚಿಸುತ್ತೇವೆ ಎಂದರೆ ಸರಕಾರ ಅನುಮತಿ ನೀಡುತ್ತಿಲ್ಲ. ಅದಕ್ಕೆ ಆಕ್ಸಿಜನ್‌ ಪೂರೈಸುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಟ್ಟು ಮನೆಗೆ ಹೋದ್ರು ನಷ್ಟವಿಲ್ಲ:

ಕೇಂದ್ರ ಸರ್ಕಾರ ಎಲ್ಲ ವಿಷಯಗಳಲ್ಲೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತ ಬಂದಿದೆ. ಜಿಎಸ್ಟಿ ವಿಷಯದಲ್ಲಿ ಅನ್ಯಾಯ, ಪ್ರವಾಹ ಸಂದರ್ಭದಲ್ಲಿ ಸತ್ತಿದ್ದಾರಾ, ಬದುಕಿದ್ದಾರಾ ನೋಡಲಿಲ್ಲ. ಈಗ ಕೊರೋನಾ ವಿಷಯದಲ್ಲಿ ಸಹ ಅನ್ಯಾಯವಾಗುತ್ತಿದೆ. ಆಕ್ಸಿಜನ್‌ ಪೂರೈಸುವಂತೆ ಹೈಕೋರ್ಟ್‌ ಹೇಳಿದರೆ ತಡೆಯಾಜ್ಞೆ ತರಲು ಸುಪ್ರಿಂ ಕೋರ್ಟ್‌ಗೆ ಹೋಗುತ್ತಾರೆ. ಇದನ್ನೆಲ್ಲ ಸರಿಪಡಿಸುವವರು ಯಾರು? 26 ಜನ ಸಂಸದರನ್ನು ಏನೆಂದು ಕರೆಯುವುದು? ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ನಿರ್ವಹಿಸಲು ಆಗಲಿಲ್ಲ ಎಂದರೆ ಈ ಎಲ್ಲ ಸಂಸದರೂ ಇದ್ದೂ ವ್ಯರ್ಥ. ಇವರೆಲ್ಲ ರಾಜೀನಾಮೆ ನೀಡಿ ಮನೆಗೆ ಹೋದರೂ ಏನೂ ನಷ್ಟ ವಾಗುವುದಿಲ್ಲ. ಇವರಿಗೆ ಗಟ್ಟಿತನವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ ಕಟೀಲು ಗಾಂಧಿ ಕುಟುಂಬ, ಕಾಂಗ್ರೆಸ್‌ ನಾಯಕರನ್ನು ಹೀಯಾಳಿಸಿ ಮಾತನಾಡುತ್ತಿದ್ದರು. ಈಗ ಎಲ್ಲಿ ಅಡಗಿಕೊಂಡಿದ್ದಾರೆ? ಈಗ ಅವರ ಧ್ವನಿ ಎಲ್ಲಿ ಅಡಗಿ ಹೋಗಿದೆ. ಈ ಸಂದರ್ಭದಲ್ಲಿ ಧ್ವನಿ ಎತ್ತಿ ನೀವು ಜೀವಂತ ಇದ್ದೀರೆನ್ನುವುದನ್ನು ಕರ್ನಾಟಕದ ಜನರಿಗೆ ತೋರಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona