ಮೈಸೂರು- ಕೊಡಗು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪ್ರಣಾಳಿಕೆ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯ ಹಾಗೂ ಜಾರಿಗೊಳಿಸಲು ನಿರ್ಧರಿಸುವ ಯೋಜನೆಗಳ ಚಿತ್ರಣವುಳ್ಳ ಪ್ರಣಾಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಬಿಡುಗಡೆಗೊಳಿಸಿದರು.

Congress Manifesto for Comprehensive Development of Mysore Kodagu Constituency snr

 ಮೈಸೂರು :  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯ ಹಾಗೂ ಜಾರಿಗೊಳಿಸಲು ನಿರ್ಧರಿಸುವ ಯೋಜನೆಗಳ ಚಿತ್ರಣವುಳ್ಳ ಪ್ರಣಾಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಬಿಡುಗಡೆಗೊಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.

ಕಳೆದ 10 ವರ್ಷಗಳಿಂದ ಈ ಕ್ಷೇತ್ರವನ್ನು ಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸಲಾಗಿತ್ತು. ಆದರೆ, ಈಗ ಕ್ಷೇತ್ರದಲ್ಲಿ ಆಗಬೇಕಾದ ಕೆಲಸವನ್ನು ಗುರುತಿಸಿ ಪಟ್ಟಿ ಮಾಡಿದ್ದಾರೆ. ಯಾವೆಲ್ಲಾ ಯೋಜನೆ ಜಾರಿಗೆ ತರಬೇಕು ಎಂದು ನಿರ್ಧರಿಸಿ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದು ಒಳ್ಳೆ ಬೆಳವಣಿಗೆ. ಕಳೆದ 10 ವರ್ಷದಿಂದ ಯಾವುದೇ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹಲವು ಶಾಶ್ವತ ಯೋಜನೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಜನರ ಸೇವೆ ಮಾಡಲು ಮುಂದಾಗಿದ್ದು, ಕ್ಷೇತ್ರದ ಜನತೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರು ಮೈಸೂರು-ಕೊಡಗು ಜಿಲ್ಲೆಗಳಲ್ಲಿ ಮಾಡಲು ಉದ್ದೇಶಿಸಿರುವ ಅನೇಕ ಕಾರ್ಯಕ್ರಮ, ಯೋಜನೆಗಳ ಕುರಿತ ದೂರದೃಷ್ಟಿಯ ಪ್ರಣಾಳಿಕೆಯನ್ನು ಹೊರತಂದಿರುವುದು ಶ್ಲಾಘನೀಯ. ಕ್ಷೇತ್ರದ ಮತದಾರರು ಕಾಂಗ್ರೆಸ್ ಬೆಂಬಲಿಸುವಂತೆ ಅವರು ಕೋರಿದರು.

ಕಳೆದ 10 ವರ್ಷಗಳಿಂದ ಮೈಸೂರು- ಕೊಡಗಿಗೆ ಅಪಾರ ನಷ್ಟವಾಗಿದೆ. ಹಿಂದಿನ ಸಂಸದರು, ಚುನಾವಣೆಗೆ ಮುನ್ನ ನೀಡಿದ್ದ ಯಾವುದೇ ಆಶ್ವಾಸನೆಗಳ ಬಗ್ಗೆ ಮಾತನಾಡಲೇ ಇಲ್ಲ. ನೀಡಿದ್ದ ಭರವಸೆ ಅನುಷ್ಠಾನಗೊಳಿಸಲೂ ಇಲ್ಲ. ಮೈಸೂರು ಹಾಗೂ ಕೊಡಗು ಜಿಲ್ಲೆ ಸಾಂಸ್ಕೃತಿಕ, ಪರಂಪರೆ ಹಾಗೂ ಪ್ರವಾಸೋದ್ಯಮದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಇದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.

ಈ ಕಾರಣದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ತಮ್ಮದೇ ಆದ ದೂರದೃಷ್ಟಿ ಮೂಲಕ ಪ್ರಣಾಳಿಕೆಯನ್ನು ಜನರಿಗೆ ನೀಡಿದ್ದಾರೆ. ಇದು ರಾಜ್ಯದಲ್ಲಿಯೇ ಪ್ರಥಮ, ನಮ್ಮ ಅಭ್ಯರ್ಥಿ ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಪಕ್ಷವು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಾವು ವಿಧಾನಸಭೆ ಚುನಾವಣೆಗೆ ಮುನ್ನ ನೀಡಿದ್ದ ಪಂಚ ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಮುಂದೆ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಪ್ರಣಾಳಿಕೆಯಲ್ಲಿ ನಾವು ತಿಳಿಸಿದ್ದೇವೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಲಕ್ಷ್ಮಣ್ಅವರು ಹಲವು ದಶಕಗಳಿಂದ ಬಹಳಷ್ಟು ಜನಪರ ಹೋರಾಟ ನಡೆಸಿದ್ದಾರೆ. ಜನರೊಂದಿಗೆ ಒಡನಾಟದಲ್ಲೇ ಇರುವುದರಿಂದ ದೂರದೃಷ್ಟಿ ಹೊಂದಿದ್ದಾರೆ. ಕಳೆದ 25 ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೈಸೂರು-ಕೊಡಗು ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದೆ ಎಂದರು.

ಯಾವುದೇ ಪ್ರಾಣಾಳಿಕೆಯನ್ನೂ ಬಿಡುಗಡೆಗೊಳಿಸದ ಬಿಜೆಪಿಯವರು ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಬಿಜೆಪಿ ಮುಖಂಡರಿಗೆ ಅಭಿವೃದ್ಧಿ ಕೆಲಸಗಳು ಬೇಕಿಲ್ಲ. ಅವರ ಪ್ರಣಾಳಿಕೆ ಏನಿದ್ದರೂ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಜನರ ನಡುವೆ ದ್ವೇಷ ಬಿತ್ತುವುದು. ಆದ್ದರಿಂದ ಜನರ ಬೆಂಬಲ ನಮಗೆ ಸಿಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಶಾಸಕ ಕೆ. ಹರೀಶ್ ಗೌಡ, ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ. ಪುಷ್ಪಾವತಿ ಅಮರನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್. ಗೌಡ, ಎಂ. ಶಿವಣ್ಣ, ಈಶ್ವರ ಚಕ್ಕಡಿ, ಆರ್. ನಾಗೇಶ್, ಮಾಜಿ ಮೇಯರ್ ಗಳಾದ ಬಿ.ಕೆ. ಪ್ರಕಾಶ್, ಪುರುಷೋತ್ತಮ್, ನಗರ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್ ಕುಮಾರ್, ಜೆ.ಜೆ. ಆನಂದ, ಡೈರಿ ವೆಂಕಟೇಶ್, ಮೊಗಣ್ಣಾಚಾರ್ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios