ಸಿದ್ಧಗಂಗಾ ಮಠಕ್ಕೆ ಗುರುವಾರ ರಾಹುಲ್ ಗಾಂಧಿ ಭೇಟಿ: ಸ್ವಾಗತಕ್ಕೆ ಕಾಂಗ್ರೆಸ್ ಸಜ್ಜು
ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನದ ಅಂಗವಾಗಿ ಮಾರ್ಚ್ 31ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರು (ಮಾ.30): ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ (Dr Shivakumara Swamiji) ಅವರ 115ನೇ ಜನ್ಮದಿನದ ಅಂಗವಾಗಿ ಮಾರ್ಚ್ 31ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ (Dr G Parameshwar) ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 4ಕ್ಕೆ ಆಗಮಿಸಲಿದ್ದು ಶ್ರೀಗಳ ಗದ್ದುಗೆಗೆ ನಮಿಸಿ, ಪ್ರಸ್ತುತ ಮಠಾಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿ ಅವರ ಆಶೀರ್ವಾದ ಪಡೆಯಲಿದ್ದಾರೆಂದರು.
ರಾಜಕೀಯ ಉದ್ದೇಶವಿಲ್ಲ: ಬಿಜೆಪಿಯ (BJP) ಅಮಿತ್ ಶಾ (Amit Shah) ಬರುತ್ತಿದ್ದಾರೆಂಬ ಕಾರಣಕ್ಕೆ ರಾಹುಲ್‌ಗಾಂಧಿ ಭೇಟಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಡಾ.ಜಿ.ಪರಮೇಶ್ವರ ಅವರು ಇಲ್ಲಿನ ಶ್ರೀಗಳ ಮೇಲಿದ್ದ ಗೌರವ ಭಕ್ತಿಯಷ್ಟೇ ಕಾರಣ. ಶ್ರೀಮಠವಾಗಲೀ, ಕೆಪಿಸಿಸಿಯಾಗಲೀ ಆಮಂತ್ರಿಸಿಲ್ಲ. ಸ್ವತಃ ರಾಹುಲ್ ಅವರೇ ಸ್ವ ಇಚ್ಚೆಯಿಂದ ಈ ಭೇಟಿ ಹಮ್ಮಿಕೊಂಡಿದ್ದಾರೆ ಎಂದು ಪುನರುಚ್ಚರಿಸಿದರು.
ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಆಗಮಿಸುವ ರಾಹುಲ್‌ಗಾಂಧಿ ಅವರನ್ನು ನಗರ ಪ್ರವೇಶದ್ವಾರ ಟೋಲ್‌ಬಳಿಯೇ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ರಾಹುಲ್ ಗಾಂಧಿ ಆಗಮನಕ್ಕೆ ಒಂದು ದಿನ ಮುಂಚೆಯೇ ಎಐಸಿಸಿ ರಾಜ್ಯ ಉಸ್ತುವಾರಿ ರಣ್‌ದೀಪ್‌ಸಿಂಗ್ ಸುರ್ಜೇವಾಲಾ ಆಗಮಿಸುತ್ತಿದ್ದು, ಏ.1ರಂದು ರಾಹುಲ್‌ಗಾಂಧಿ ಅವರು ಕೆಪಿಸಿಸಿ ಕಾರ್ಯಕಾರಿಣಿ ಸಭೆಯುದ್ದೇಶಿಸಿ ಮಾತನಾಡುವ ಮಾಹಿತಿಯಿದೆ. ರಾಹುಲ್‌ಗಾಂಧಿ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು, ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿರುವರು ಎಂದರು.
ದ್ವೇಷದಲ್ಲಿ ಭಾರತ ಶೀಘ್ರದಲ್ಲೇ ಮೊದಲ ಸ್ಥಾನಕ್ಕೆ, ಮೋದಿ ಸರ್ಕಾರ ಕುಟುಕಿದ ರಾಹುಲ್ ಗಾಂಧಿ!
ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಅವರಿಗಾಗಲೀ ಕಾಂಗ್ರೆಸ್ ನಾಯಕರಿಗಾಗಲೀ ಮಠಾಧೀಶರ ಬಗ್ಗೆ ಅಪಾರಗೌರವವಿದೆ. 2ನೇ ದೇವರಾಗಿ ಧರ್ಮಗುರುಗಳನ್ನು ಹಿಂದೂ ಸಮಾಜ ಗುರುತಿಸಿಕೊಂಡು ಬಂದಿದೆ. ನಮ್ಮದು ಗಾಂಧಿ ಹಿಂದುತ್ವ, ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಎಂಎಲ್ಸಿ ಆರ್.ರಾಜೇಂದ್ರ, ಮಾಜಿ ಶಾಸಕರಾದ ಎಸ್.ಷಫಿ ಅಹಮದ್, ಡಾ.ರಫೀಕ್ ಅಹಮದ್, ಪಾಲಿಕೆ ವಿಪಕ್ಷ ನಾಯಕ ಕುಮಾರ್, ಮುಖಂಡರಾದ ಎಚ್.ವಿ.ವೆಂಕಟೇಶ್, ಇಕ್ಬಾಲ್ ಅಹಮದ್, ಟಿ.ಎಸ್.ನಿರಂಜನ್, ಮರಿಚೆನ್ನಮ್ಮ ಮತ್ತಿತರರು ಹಾಜರಿದ್ದರು.
ರಾಹುಲ್ ಗಾಂಧಿ ರಾಜ್ಯಕ್ಕೆ, ಸಭೆ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಮಾ.31ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲ ದಿನ ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ತೆರಳಿ ಅಲ್ಲಿಯೇ ಪ್ರಸಾದ ಸ್ವೀಕರಿಸಲಿದ್ದಾರೆ. ಎರಡನೇ ದಿನ ಪಕ್ಷದ ಸಭೆಗಳಲ್ಲಿ ಭಾಗವಹಿಸಿ ಎಲ್ಲಾ ಹಂತದ ನಾಯಕರು, ಎಲ್ಲಾ ಘಟಕಗಳ ಮುಖ್ಯಸ್ಥರೊಂದಿಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ’ ಎಂದು ಹೇಳಿದರು.
ಗುರುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್‌ಗಾಂಧಿಯವರು ಅಲ್ಲಿಂದ ನೇರವಾಗಿ ಸಿದ್ಧಗಂಗಾ ಮಠಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 3.30 ಗಂಟೆಗೆ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಪ್ರಯುಕ್ತ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಂಗಳೂರಿಗೆ ಆಗಮಿಸಿ ಕಚೇರಿಯಲ್ಲಿ ಸಭೆ ನಡೆಸಿ ಬಿಬಿಎಂಪಿ ವ್ಯಾಪ್ತಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ ಏ.1 ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018ರ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಂಸತ್ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಜ್ಯೂಮ್ ಮೂಲಕ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಸಕ್ರಿಯರಾಗಿರುವವರ ಜತೆ ಸಂಪರ್ಕ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಆಜಾದ್ ಮನೆಯಲ್ಲಿ 2ನೇ ಸಾರಿ ಸಭೆ ಸೇರಿದ ನಾಯಕರು, ಕೈ ಪಟ್ಟ ಬದಲು?
ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಹೋರಾಟಗಳು ಮುಂದುವರೆಯಲಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ದಿನನಿತ್ಯ ಜನಸಾಮಾನ್ಯರ ಜೇಬು ಪಿಕ್ ಪಾಕೆಟ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ 31 ರಂದು ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ತಮ್ಮ ಮನೆಯ ಮುಂದೆ ತಮ್ಮ ವಾಹನ, ಗ್ಯಾಸ್ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಜಾಗಟೆ ಬಾರಿಸಬೇಕು. ನಂತರ ಅದರ ವಿಡಿಯೋ, ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಹಾಕಬೇಕು ಎಂದು ಸೂಚಿಸಲಾಗಿದೆ. ಇನ್ನು ಏ. 7 ರಂದು ಜಿಲ್ಲಾ ಮಟ್ಟದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾರಯಲಿ ಹಮ್ಮಿಕೊಳ್ಳಲು ಸೂಚನೆ ನೀಡಿದ್ದೇವೆ. ಮುಂದೆ ರಾಜ್ಯ ಮಟ್ಟದಲ್ಲೂ ಪ್ರತಿಭಟನೆ ನಡೆಸಲಿದ್ದು, ಈ ಬಗ್ಗೆ ಚರ್ಚಿಸಿ ದಿನಾಂಕ ಪ್ರಕಟಿಸಲಾಗುವುದು ಎಂದರು.