G-23: ಆಜಾದ್ ಮನೆಯಲ್ಲಿ 2ನೇ ಸಾರಿ ಸಭೆ ಸೇರಿದ ನಾಯಕರು, ಕೈ ಪಟ್ಟ ಬದಲು?
* ಮತ್ತೆ ಜಿ-23 ನಾಯಕರ ಸಭೆ: ನಾಯಕತ್ವ ಬದಲಾವಣೆಗೆ ಪಟ್ಟು
* ಪಕ್ಷ ವಿಭಜಿಸುವ ಉದ್ದೇಶ ಇಲ್ಲ, ಬಲವರ್ಧನೆ ಉದ್ದೇಶವಷ್ಟೇ
* ಸೋನಿಯಾ ಮನವರಿಕೆಗೆ ಇಂದು ಪ್ರಯತ್ನ* ಸೋನಿಯಾ ಭೇಟಿ ಮಾಡಲಿರುವ ಗುಲಾಂ ನಬಿ
ನವದೆಹಲಿ(ಮಾ. 18) ಪಂಚರಾಜ್ಯ ಚುನಾವಣೆಯ (5 State Result) ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ (Congress) ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಜಿ-23 ಬಂಡಾಯ ನಾಯಕರು ಗುರುವಾರ ಮತ್ತೊಮ್ಮೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ನಾಯಕತ್ವ ಬದಲಾವಣೆ ಅತ್ಯಗತ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಶುಕ್ರವಾರ ಸೋನಿಯಾ ಗಾಂಧಿ (Sonia Gandhi)ಅವರನ್ನು ಜಿ-23 ನಾಯಕ ಗುಲಾಂ ನಬಿ ಆಜಾದ್ ಭೇಟಿ ಮಾಡಲಿದ್ದಾರೆ.
ಅಲ್ಲದೆ ಪಕ್ಷ ಸಂಘಟನೆಯಷ್ಟೇ ಜಿ-23 ಬಣದ ಉದ್ದೇಶ, ಪಕ್ಷ ವಿಭಜನೆಯಲ್ಲ ಎಂದು ಮನವರಿಕೆ ಮಾಡಲು ನಿರ್ಧರಿಸಲಾಯಿತು. ನಾಯಕತ್ವದ ಮೇಲೆ ಒತ್ತಡ ಹೇರಲು ಇನ್ನು ಮುಂದೆ ನಿರಂತರವಾಗಿ ಸಭೆ ನಡೆಸಲೂ ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗುಲಾಂ ನಬಿ ಅವರು ಶುಕ್ರವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಜಿ-23 ಬಣದ ನಿಲುವಿನ ಬಗ್ಗೆ ಮನವರಿಕೆ ಮಾಡಲಿದ್ದಾರೆ.
Karnataka Politics: ರಾಜ್ಯಕ್ಕೆ ಬರಲಿದ್ದಾರೆ ಅಮಿತ್ ಶಾ...ಅವರ ಮುಂದೆಯೇ ಸಂಪುಟ ಫೈನಲ್
ಈ ಮಧ್ಯೆ ಜಿ-23 ನಾಯಕರ ಸಭೆಗೂ ಮುನ್ನ ಬಂಡಾಯ ನಾಯಕರಲ್ಲಿ ಒಬ್ಬರಾದ ಭೂಪಿಂದರ್ ಸಿಂಗ್ ಹೂಡಾ ಜೊತೆ ರಾಹುಲ್ ಗಾಂಧಿ ಗುರುವಾರ ಮಾತುಕತೆ ನಡೆಸಿದರು. ಈ ವೇಳೆ ಭೂಪಿಂದರ್ ಸಿಂಗ್ ಸಹ, ಜಿ-23 ಬಣ ಪಕ್ಷವನ್ನು ವಿಭಜಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಸಮಗ್ರ ನಾಯಕತ್ವ ಪಕ್ಷಕ್ಕೆ ಬೇಕು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ 5 ರಾಜ್ಯಗಳಲ್ಲಿ ಸೋತ ಕಾರಣ ಮರುಸಂಘಟನೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ‘ರಾಹುಲ್ ಮೇಲೆ ನಂಬಿಕೆ ಇಲ್ಲ. ಗಾಂಧಿಗಳ ನಾಯಕತ್ವ ಬದಲಾವಣೆ ಆಗಲೇಬೇಕು’ ಎಂದು ಜಿ-23 ನಾಯಕ ಶಂಕರಸಿಂಗ್ ವಘೇಲಾ ಹಾಗೂ ಪಟ್ಟು ಹಿಡಿದು ಆಗ್ರಹಿಸಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ನಂತರ ಜಿ-23 ಬಂಡಾಯ ನಾಯಕರು ಸರಣಿ ಸಭೆ ನಡೆಸುತ್ತಿದ್ದು, ಬುಧವಾರ ಸಹ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ಸೇರಲಾಗಿತ್ತು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಗಾಂಧಿ ಕುಟುಂಬ ದೂರ ಇರಬೇಕು, ರಾಹುಲ್ ಗಾಂಧಿ ನಾಯಕತ್ವದಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಉನ್ನತಿ ಕಾಣಬೇಕೆಂದರೆ, ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಪಡೆಯಬೇಕೆಂದರೆ ಸಮರ್ಥ ನಾಯಕತ್ವದ ಅಗತ್ಯವಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಈ ಹಿಂದೆ ಸಹ ನಾಯಕರು ನಾಯಕತ್ವ ಬದಲಾವಣೆಗೆ ಪತ್ರ ಬರೆದಿದ್ದರು ಎಂಬುದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಆಂತರಿಕ ವಲಯದಲ್ಲಿ ಸಮೀಕ್ಷೆಯನ್ನು ನಡೆಸಿತ್ತು. ಎರಡು ಅವಧಿಯಲ್ಲಿ ಸಚಿರಾದವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು.