ಪಾಪದ ಸರ್ಕಾರದ ಪಾಪದ ಮಂತ್ರಿ ಕಾರಜೋಳ: ಎಂ.ಬಿ.ಪಾಟೀಲ
* ಸಿಂದಗಿಯಲ್ಲಿ ಯಾರನ್ನೇ ಕಣಕ್ಕಿಳಿಸಿದರೂ ಗೆಲುವಿಗೆ ಶ್ರಮ
* ನೋಟಿಫಿಕೇಶನ್ ಮಾಡಿಸಲು ಕಾರಜೋಳ ಮುಂದಾಗಲಿ
* ತುಂಗಭದ್ರಾ, ಹಿಡಕಲ್ ಡ್ಯಾಂ ಕೂಡ ಕಾಂಗ್ರೆಸ್ ಕೊಡುಗೆ
ವಿಜಯಪುರ(ಸೆ.30): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೈತಿಕವಾಗಿ ಅಧಿಕಾರಕ್ಕೆ ಬಂದ ಪಾಪದ ಸರ್ಕಾರ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪಾಪದ ಸರ್ಕಾರದ ಪಾಪದ ಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ(MB Patil) ಅವರು ಸಚಿವ ಕಾರಜೋಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಅವರು ಬಾಗಲಕೋಟೆಯಲ್ಲಿ(Bagalkot) ಪತ್ರಿಕಾಗೋಷ್ಠಿ ನಡೆಸಿ ಯುಕೆಪಿ ಕಾಂಗ್ರೆಸ್ ಪಕ್ಷದ ಪಾಪದ ಕೂಸು ಎಂದು ಹೇಳಿಕೆ ನೀಡಿದ್ದಾರೆ. ನಿಜವಾಗಿಯೂ ಯುಕೆಪಿ ಯೋಜನೆ ಪಾಪದ ಕೂಸಲ್ಲ. ಸದ್ಯ ಅಧಿಕಾರದಲ್ಲಿರುವ ಬಿಜೆಪಿ(BJP) ಸರ್ಕಾರ ಅನೈತಿಕವಾಗಿ ಅಧಿಕಾರಕ್ಕೆ ಬಂದ ಪಾಪದ ಸರ್ಕಾರ. ಗೋವಿಂದ ಕಾರಜೋಳ ಅವರು ಪಾಪದ ಸರ್ಕಾರದ ಪಾಪದ ಮಂತ್ರಿಯಾಗಿದ್ದಾರೆ. ಯೋಜನೆ ಬಗ್ಗೆ ಪಾಪದ ಕೂಸು ಎಂದು ಹೇಳುವುದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಹಿರಿಯ ಸಚಿವರಿಗೆ ಶೋಭೆಯಲ್ಲ ಎಂದರು.
ಬಾಯಿ ಚಪಲಕ್ಕಾಗಿ ಸಚಿವ ಗೋವಿಂದ ಕಾರಜೋಳ ಅವರು ಇಂತಹ ಹೇಳಿಕೆ ನೀಡುವುದು ಅವರ ಘನತೆ, ಗೌರವಕ್ಕೆ ಶೋಭೆ ತರುವುದಿಲ್ಲ ಎಂದ ಅವರು, ಆಗಿನ ಪ್ರಧಾನಿ ಲಾಲಬಹದ್ದೂರ ಶಾಸ್ತ್ರಿ ಅವರು 1964ರಲ್ಲಿ ಆಲಮಟ್ಟಿಯಲ್ಲಿ ಅಣೆಕಟ್ಟೆ ಶಂಕು ಸ್ಥಾಪನೆ ಮಾಡದೇ ಹೋಗಿದ್ದರೆ ಇಂದು ಆಲಮಟ್ಟಿ ಅಣೆಕಟ್ಟೆ ಇರುತ್ತಿರಲಿಲ್ಲ. ವಿಜಯಪುರ(Vijayapura) ಹಾಗೂ ಇತರೆ ಜಿಲ್ಲೆಗಳು ನೀರಾವರಿಗೆ ಒಳಪಡುತ್ತಿರಲಿಲ್ಲ. ಇದು ಕಾಂಗ್ರೆಸ್ ಕೊಡುಗೆ. ಅದನ್ನು ಸಚಿವ ಗೋವಿಂದ ಕಾರಜೋಳ ಮರೆಯಬಾರದು. ತುಂಗಭದ್ರಾ, ಹಿಡಕಲ್ ಡ್ಯಾಂ ಕೂಡ ಕಾಂಗ್ರೆಸ್(Congress) ಕೊಡುಗೆ. ಪಕ್ಷ ಯಾವುದೇ ಇರಲಿ. ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯದನ್ನು ಮಾಡಿದ್ದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಎಂಬಿಪಾ, ಜಾಮದಾರ್ ವಿರುದ್ಧ ಶಾಮನೂರು ಕಿಡಿ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಗೋವಿಂದ ಕಾರಜೋಳ ಅವರು ಯುಕೆಪಿ ಬಗ್ಗೆ ಬಹಳಷ್ಟು ಕಾಳಜಿ, ಕನಿಕರದ ಮಾತುಗಳನ್ನು ಆಡಿದ್ದಾರೆ. ಆದರೆ ಈಗ ಅದನ್ನು ಕಾಂಗ್ರೆಸ್ ಪಾಪದ ಕೂಸು ಎಂದು ಹೇಳುವುದು ಸಮಂಜಸವಲ್ಲ. ಗೋವಿಂದ ಕಾರಜೋಳ ಅವರು ಸದನದಲ್ಲಿ 6 ವರ್ಷಗಳವರೆಗೆ ಜಿಲ್ಲೆಯ ಯುಕೆಪಿ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಈಗ ಅವರದೇ ಸರ್ಕಾರವಿದೆ. ಅವರೇ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಕಾಂಗ್ರೆಸ್ ಮಾಡದಿದ್ದರೆ ಈಗ ತಾವೇ ಮಾಡಿ ತೋರಿಸಲಿ. ಅವರು ನೀರಾವರಿ ಯೋಜನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಏಕೆಂದರೆ ಅವರು ವಿಜಯಪುರ ಜಿಲ್ಲೆಯವರೇಯಾಗಿದ್ದಾರೆ ಎಂದರು.
ನೋಟಿಫಿಕೇಶನ್ ಮಾಡಿಸಲು ಕಾರಜೋಳ ಮುಂದಾಗಲಿ:
ಕಳೆದ 2 ವರ್ಷ 1 ತಿಂಗಳು ಬಿಜೆಪಿ ರಾಜ್ಯದಲ್ಲಿ ರಾಜಭಾರ ಮಾಡುತ್ತಿದೆ. 2010ರಲ್ಲಿ ಕೃಷ್ಣಾ ನ್ಯಾಯಾಧಿಕರಣ ತೀರ್ಪು ಬಂದಿದೆ. 2013ರಲ್ಲಿ ಸ್ಪಷ್ಟೀಕರಣ ಅರ್ಜಿ ಬಂದಿದೆ. ಈ ಬಗ್ಗೆ ಇನ್ನೂ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಗೆಜೆಟ್ ನೋಟಿಫಿಕೇಶನ್ ಮಾಡುತ್ತಿಲ್ಲ. ಮಹಾದಾಯಿ ನೋಟಿಫಿ ಕೇಶನ್ ಮಾಡಲು ಬರುತ್ತದೆ. ಆದರೆ ಯುಕೆಪಿ ನೋಟಿಫಿಕೇಶನ್ ಮಾಡಲು ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಹಾಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಯುಕೆಪಿ ಕುರಿತು ನೋಟಿಫಿಕೇಶನ್ ಮಾಡಿಸುವ ನಿಟ್ಟಿನಲ್ಲಿ ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದೆ. ನೋಟಿಫಿಕೇಶನ್ ನೆಪ ಹೇಳದೆ ಹೆಡ್ ವರ್ಕ್, ಸ್ಥಾವರ, ಕೆನಾಲ್, ವಿದ್ಯುತ್ ಸಂಪರ್ಕ ಕಲ್ಪಿಸಿ ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡಿದ್ದೇನೆ. ಹೀಗಾಗಿ ಈಗ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಕೃಷಿ ಭೂಮಿ 2 ಲಕ್ಷ ಎಕರೆ ಇದ್ದದ್ದು 20 ಲಕ್ಷಗಳಿಗೆ ಏರಿಕೆಯಾಗಿದೆ. ರೈತರು ತಮ್ಮ ಹೊಲಕ್ಕೆ ನೀರು ಬಂದಿದ್ದರಿಂದ ಉತ್ತಮ ಬೆಳೆ ಬೆಳೆದು ಸಂತೋಷದಿಂದ ಇದ್ದಾರೆ ಎಂದು ತಿಳಿಸಿದರು.
17,623 ಕೋಟಿ ಗಳಿದ್ದ ಪುನರ್ವಸತಿ, ಪುನರ್ ನಿರ್ಮಾಣ ಕಾರ್ಯ ಕಾಂಗ್ರೆಸ್ ಸರ್ಕಾರದ ವಿಳಂಬ ನೀತಿಯಿಂದ ಹೆಚ್ಚಳವಾಗಿದೆ. ಅದು ಈಗ 51, 148 ಕೋಟಿಗೆ ತಲುಪಿದೆ ಎಂದು ಆಧಾರ ರಹಿತ, ವಿವೇಚನಾ ರಹಿತ ಹೇಳಿಕೆ ನೀಡುತ್ತಿದ್ದಾರೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಹೆಚ್ಚುವರಿಯಾಗಿ ಹಣ ನೀಡಬೇಕಾಗಿರುವುದರಿಂದ ಯೋಜನಾ ವೆಚ್ಚ ಅಧಿಕವಾಗಿದೆ ಹೊರತು, ವಿಳಂಬವಾಗಿರುವುದಕ್ಕೆ ಅಲ್ಲ ಎಂಬ ವಾಸ್ತವ ಸತ್ಯ ಅರಿತುಕೊಂಡರೂ ದುರುದ್ದೇಶದಿಂದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಹಿಂದೆ ಸರಿದ ಎಂ ಬಿ ಪಾಟೀಲ್
ನಮ್ಮ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಭೂಸ್ವಾಧೀನಕ್ಕಾಗಿ 31,613 ಕೋಟಿ ಮೀಸಲಿಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಮೀಸಲಿಟ್ಟಿರುವುದು ಕೇವಲ 6450 ಕೋಟಿ ಮಾತ್ರ. ಅತ್ಯಂತ ಕಡಿಮೆಪ್ರಮಾಣದಲ್ಲಿ ಹಣ ತೆಗೆದಿಟ್ಟು ಈಗ ಕಾಂಗ್ರೆಸ್ ಸರ್ಕಾರದ ಮೇಲೆಯೇ ಆರೋಪ ಮಾಡುವುದು ಸರಿಯಲ್ಲ. ಎಲ್ಲ ದಾಖಲೆಯೂ ನನ್ನ ಬಳಿ ಇದೆ. ಅವರೆ ಒತ್ತಾಯಿಸಿರುವ ಕೆಲಸಗಳನ್ನು ಈಗ ಅವರೇ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಬದಲು ತಾವೇ ಆ ಕೆಲಸ ಮಾಡಿ ತೋರಿಸಲಿ ಎಂದು ಒತ್ತಾಯಿಸಿದರು.
ಇತಿಹಾಸ ತಿರುಚುವುದು ಸಲ್ಲದು:
ನೀರಾವರಿ ಯೋಜನೆಗಳಿಗಾಗಿ ವಿಜಯಪುರ ಜನತೆ ದಿ.ಇಂದಿರಾಗಾಂಧಿ ಹಾಗೂ ದಿ.ಎಸ್. ನಿಜಲಿಂಗಪ್ಪ ಅವರನ್ನು ಬಂಗಾರದಿಂದ ತೂಗಿದ್ದರು ಎಂದು ಕಾರಜೋಳ ಅವರು ಹೇಳಿಕೆ ನೀಡಿದ್ದಾರೆ. ಆದರೆ ಆಗ ಯುದ್ಧ ಸಂದರ್ಭದಲ್ಲಿ ದೇಶಕ್ಕೆ ನೆರವಾಗಲು ವಿಜಯಪುರ ಜನತೆ ಇಬ್ಬರು ಮಹನೀಯರನ್ನು ಬಂಗಾರದಿಂದ ತೂಗಿದ್ದಾರೆ. ಇದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಕಾರಜೋಳ ಮಾತ್ರ ಇತಿಹಾಸ ತಿರು ಚುವ ಪ್ರಯತ್ನ ಮಾಡುತ್ತಿರುವುದು ಸಮಂಜಸವಲ್ಲ ಎಂದರು. ಜವಾಬ್ದಾರಿ ಅರಿತು ಮಾತಾಡಲಿ ಸಚಿವ ಕಾರಜೋಳ ವಿರುದ್ಧ ಮಾಜಿ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ
ಸಿಂದಗಿಯಲ್ಲಿ ಯಾರನ್ನೇ ಕಣಕ್ಕಿಳಿಸಿದರೂ ಗೆಲುವಿಗೆ ಶ್ರಮ
ಸಿಂದಗಿ, ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ನಾಯಕರು ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ. ಪಾಟೀಲ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಅಶೋಕ ಮನಗೂಳಿ ಅವರನ್ನು ಘೋಷಣೆ ಮಾಡಲಾಗಿತ್ತು. ಈಗ ಮತ್ತೆ ಪಕ್ಷದ ವರಿಷ್ಠರು ಮರು ಪರಿಶೀಲಿಸಿ ಅಶೋಕ ಮನಗೂಳಿ ಅವರನ್ನು ಅಭ್ಯರ್ಥಿಯನ್ನಾಗಿಸಬೇಕೋ ಅಥವಾ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಎಂಬುವುದರ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ. ಪಕ್ಷ ಯಾವುದೇ ಅಭ್ಯರ್ಥಿ ಕಣಕ್ಕಿಳಿಸಿದರೆ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆ ಎಂದರು.
ಸದನದಲ್ಲಿ ಸಿದ್ದರಾಮಯ್ಯನವರ ಪಂಚೆ ಕಳಚಿದ್ದು ಕ್ಷುಲ್ಲಕ ವಿಚಾರ. ಇದನ್ನು ಬಿಜೆಪಿ ಅವರು ವಿಷಯ ಮಾಡಲು ಹೊರಟಿದ್ದು ಸರಿಯಲ್ಲ ಎಂದು ತಿಳಿಸಿದರು. ಔರಾದಕರ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ತಾವು ಈಗಾಗಲೇ ಸದನದಲ್ಲಿ ಪ್ರಸ್ತಾಪಿಸಿದ್ದು, ಖುದ್ದಾಗಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಹೇಳಿದರು.