ಶಿರಾ (ಅ.14):  ಬಿಜೆಪಿ ಪಕ್ಷದವರು ಮೀಸಲಾತಿ ವಿರೋಧಿಗಳು. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ತುಳಿತಕ್ಕೆ ಒಳಗಾಗಿದ್ದ ಸಮುದಾಯಗಳ ಅಭಿವೃದ್ಧಿಗೆ ನೀಡಿದಂತಹ ಮೀಸಲಾತಿಯನ್ನು ಬಿಜೆಪಿ ಕಿತ್ತುಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಆರೋಪಿಸಿದರು.

ನಗರದ ಕಾಡುಗೊಲ್ಲರ ಸಮುದಾಯ ಭವನದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಪಕ್ಷದವರಿಗೆ ಈಗ ಶಿರಾ ತಾಲೂಕು ನೆನಪಾಗಿದೆ. ಮದಲೂರು ಕೆರೆಗೆ ನೀರು ಹರಿಸಬೇಡಿ ಎಂದು ಪತ್ರ ಬರೆದಿದ್ದವರೇ ಇಂದು ನೀರು ಹರಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಅನ್ನಭಾಗ್ಯ ಯೋಜನೆಯು ಇಂದು ಕೋಟ್ಯಾಂತರ ಜನರ ಹಸಿವನ್ನು ನೀಗಿಸಿದೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ಯಾರಿಗೂ ಆಹಾರದ ಸಮಸ್ಯೆಯಾಗದಂತೆ ಕಾಪಾಡಿದೆ ಎಂದರು.

ಶಿರಾ ಬೈಎಲೆಕ್ಷನ್ ಅಖಾಡ; ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ..

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್‌ ಪಕ್ಷದ 15 ಜನ ಶಾಸಕರನ್ನು ಕರೆದುಕೊಂಡು ಹೋಗಿ ಬಿಜೆಪಿ ಸರಕಾರ ಮಾಡಿದ್ದಾರೆ. ಸರಕಾರ ಬಂದು ಒಂದುವರೆ ವರ್ಷವಾಗುತ್ತಾ ಬಂದರೂ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದೀರಿ, ಕಳೆದ 11 ತಿಂಗಳಿಂದ ವೃದ್ಧಾಪ್ಯ ವೇತನ ನೀಡಿಲ್ಲ. ಕೋರೊನಾ ಚಿಕಿತ್ಸೆ ನೆಪದಲ್ಲಿ 4000 ಕೋಟಿ ರೂಪಾಯಿಗಳಷ್ಟುಖರ್ಚು ಮಾಡಿದ್ದೀರಿ ಇದರಲ್ಲಿ ಎಷ್ಟುಕೋಟಿ ಲೂಟಿ ಹೊಡೆದಿದ್ದೀರಿ ಎಂದರು.

ಶಿರಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಅವರು ಕಾಂಗ್ರೆಸ್‌ ಕಾರ್ಯಕರ್ತರು ನಮ್ಮ ಅಧಿಕಾರಾವಧಿಯಲ್ಲಿ ಆಗಿರುವಂತಹ 2500 ಕೋಟಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕ್ಷೇತ್ರದ ಜನರ ಮನೆ ಮನೆಗೂ ತಲುಪಿಸುವ ಕೆಲಸ ಮಾಡಿ. ಅಭಿವೃದ್ಧಿ ಕೆಲಸಗಳು ಎಲ್ಲರ ಕಣ್ಮುಂದೆಯೇ ಇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಜಯಶಾಲಿಯನ್ನಾಗಿ ಮಾಡುವ ಮೂಲಕ ಶಿರಾದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಿ ಎಂದರು.