'ದೇಶ ಹಾಳು ಮಾಡುತ್ತಿರುವ ಪ್ರಧಾನಿ ಮೋದಿ, ಅಮಿತ್ ಶಾ'
* ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದ ಜೆ.ಟಿ.ಪಾಟೀಲ
* ಇಂತಹ ಭ್ರಷ್ಟ ಸರ್ಕಾರ ಬೇಕೆ?
* ಸರ್ಕಾರಗಳ ಹಣದಾಹದ ಹಪಾಹಪಿಗೆ ಹಿಡಿಶಾಪ ಹಾಕುತ್ತಿರುವ ಜನಸಾಮಾನ್ಯರು
ಕೆರೂರ(ಜೂ.16): ಮೋದಿ ಮತ್ತು ಅಮಿತ್ ಶಾ ಜನರ ಧಾರ್ಮಿಕ ಮನೋಭಾವನೆಗಳನ್ನು ಕೆರಳಿಸಿ ದೇಶವನ್ನು ಹಾಳುಮಾಡಲು ಹೊರಟಿದ್ದಾರೆಂದು ಬೀಳಗಿ ಮಾಜಿ ಶಾಸಕ ಜೆ.ಟಿ. ಪಾಟೀಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಹರಿಹಾಯ್ದಿದ್ದಾರೆ.
ಅವರು ಮಂಗಳವಾರ ಬಾದಾಮಿ ತಾಲೂಕಿನ ಬೀಳಗಿ ಮತಕ್ಷೇತ್ರದ ಯರಗೊಪ್ಪ (ಇನಾಂ)ದ ಕ್ರಾಸ್‌ನಲ್ಲಿರುವ ಸಪ್ತಗಿರಿ ಪೆಟ್ರೋಲ್ ಬಂಕ್ ಆವರಣದಲ್ಲಿ ಕಲಾದಗಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಆಯೋಜಿಸಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಸಮಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ. ಇಂಧನ ಬೆಲೆ ಇಳಿಸುತ್ತೇವೆ. ವಿದೇಶದಿಂದ ಕಪ್ಪುಹಣ ತಂದು ಬಡಜನರ ಖಾತೆಗೆ ಹಾಕುತ್ತೇವೆಂದು ಹೇಳಿದ ಮೋದಿ ಇದರಲ್ಲಿ ಒಂದನ್ನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಈಗ ಸರ್ವ ಜನಾಂಗಕ್ಕೂ ಅಗತ್ಯವಿರುವ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಸೇರಿದಂತೆ ದಿನನಿತ್ಯದ ದಿನಸಿ ಬೆಲೆಗಳನ್ನು ಗಗನಕ್ಕೇರಿಸಿದೆ. ಇಂತಹ ಭ್ರಷ್ಟ ಸರ್ಕಾರ ಬೇಕೆ ಎಂಬ ಚಿಂತನೆ ಶಹರ,ಪಟ್ಟಣ ಪ್ರತಿ ಗ್ರಾಮಗಳಲ್ಲೂ ನಡೆದು ಹೋರಾಟ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.
ಚುನಾವಣೆ ಸ್ಪರ್ಧೆ ವಿಚಾರ: ಗುರು ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದ ಶಿಷ್ಯ..!
ರಾಜ್ಯ ಕೆ.ಪಿ.ಸಿ.ಸಿ. ಪದವೀಧರ ಹಾಗೂ ಶಿಕ್ಷಕರ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಬನ್ನೂರ ಮಾತನಾಡಿ, ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ (ಯು.ಪಿ.ಎ) ಸರ್ಕಾರ ಒಂದು ಬಾರಿ ಮಾತ್ರ ಪೆಟ್ರೋಲ್ ಬೆಲೆಯನ್ನು ಒಂದು ರುಪಾಯಿ ಹೆಚ್ಚಿಸಿದಾಗ ಬಿಜೆಪಿಗರು ದೇಶವ್ಯಾಪಿ ಹೋರಾಟ ಮಾಡಿ ಪ್ರತಿಭಟಿಸಿದರು. ಆದರೆ, ಇದೀಗ ನೂರರ ಗಡಿದಾಟುತ್ತಿದೆ. ಈಗೇಕೆ ವಿರೋಧ ಮಾಡುತ್ತಿಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ ಮಾತನಾಡಿ, 16 ಬಾರಿ ತೈಲ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಬಡವರ ರಕ್ತ ಹಿಂಡಿದೆ. ತೈಲ ಬೆಲೆಗಿಂತ ಮೋದಿ ತೆರಿಗೆ ದರ ದುಪ್ಪಟ್ಟಾಗಿದೆ. ಸರ್ಕಾರಗಳ ಹಣದಾಹದ ಹಪಾಹಪಿಗೆ ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಕುರ್ಚಿ ಕಳೆದುಕೊಳ್ಳುವುದು ಖಚಿತವೆಂದು ಹೇಳುತ್ತಾ ತೈಲಬೆಲೆ ಏರಿಕೆಯ ಹೋರಾಟ ಬ್ರಹ್ಮಾಸ್ತ್ರವಿದ್ದಂತೆ. ಕಾಂಗ್ರೆಸಿಗರು ಈ ಬ್ರಹ್ಮಾಸ್ತ್ರದ ಸದ್ಬಳಕೆ ಮಾಡಿಕೊಂಡು ಮತ್ತೆ ರಾಜ್ಯ ಹಾಗೂ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಲು ಮುಂದಾಗಬೇಕೆಂದರು.
ಕಲಾದಗಿ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಬಸವರಾಜ ಸಂಶಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಸೂಳಿಕೇರಿ ಗ್ರಾಪಂ ಅಧ್ಯಕ್ಷ ತುಳಸಪ್ಪ ಕಬಾಡದ, ತಾಪಂ ಸದಸ್ಯೆ ಸವಿತಾ ನಾರಪ್ಪನವರ ಧುರೀಣರಾದ ಹನಮಂತ ನಾಗನೂರ, ಹನಮಂತ ಮುಗಳೊಳ್ಳಿ, ಗಿರೀಶ ನಾಡಗೌಡ್ರ, ಕುಮಾರ ಕಕರಡ್ಡಿ, ರೇಣುಕಾ ಛತ್ರಕೋಟಿ ಡಾ.ಬಿ.ಕೆ.ಕೋವಳ್ಳಿ ವೆಂಕಣ್ಣ ಹೊಸಮನಿ ಧರ್ಮಣ್ಣ ಭಗವತಿ ಯಮನಪ್ಪ ಬಸರಿ, ಅಶೋಕ, ಕೊಪ್ಪದ ಕಂಠೇಶ ಕತ್ತಿ, ಹೊಳೆಬಸು ಚಿಕ್ಕೂರ, ಶೇಖರ ಪಮ್ಮಾರ, ಚನ್ನಯ್ಯ ಜಾಬಿನ, ಲಕ್ಕಪ್ಪ ತಳವಾರ, ಲಚ್ಚಪ್ಪ ಅರಿಕೇರಿ ಮೊದಲಾದವರಿದ್ದರು.