ಹಾವೇರಿ: ಮೊದಲಿನಷ್ಟು ರುಚಿ ಇಲ್ಲಾರೀ', ಇಂದಿರಾ ಕ್ಯಾಂಟಿನ್ ಶುರುವಿದ್ದರೂ ಅತ್ತ ಸುಳಿಯುತ್ತಿಲ್ಲ ಮಂದಿ!
ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಯಲ್ಲೊಂದಾದ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲೆಯಲ್ಲಿ ಜನರೇ ಬರುತ್ತಿಲ್ಲ. ಜಿಲ್ಲೆಯ ಮೂರು ನಗರ ಪ್ರದೇಶಗಳಲ್ಲಿ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದು, ಮಂಜೂರಾಗಿರುವ ಇನ್ನೂ 5 ಕಡೆ ಕ್ಯಾಂಟೀನ್ ಶುರುವೇ ಆಗಿಲ್ಲ.
ನಾರಾಯಣ ಹೆಗಡೆ
ಹಾವೇರಿ (ಮೇ.29) : ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಯಲ್ಲೊಂದಾದ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲೆಯಲ್ಲಿ ಜನರೇ ಬರುತ್ತಿಲ್ಲ. ಜಿಲ್ಲೆಯ ಮೂರು ನಗರ ಪ್ರದೇಶಗಳಲ್ಲಿ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದು, ಮಂಜೂರಾಗಿರುವ ಇನ್ನೂ 5 ಕಡೆ ಕ್ಯಾಂಟೀನ್ ಶುರುವೇ ಆಗಿಲ್ಲ.
ಈ ಹಿಂದಿನ ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ(Congress government) ಜಾರಿಗೆ ತಂದಿದ್ದ ಜನಪ್ರಿಯ ಇಂದಿರಾ ಕ್ಯಾಂಟೀನ್(Indira canteen) ಯೋಜನೆಯ ಸದ್ಯದ ಪರಿಸ್ಥಿತಿ ಬಗ್ಗೆ ಕನ್ನಡಪ್ರಭ ನಡೆಸಿದ ರಿಯಾಲಿಟಿ ಚೆಕ್ ವೇಳೆ ಈ ಅಂಶ ಬೆಳಕಿಗೆ ಬಂದಿದೆ. 2013ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ರಾಜ್ಯಾದ್ಯಂತ ಜಾರಿಗೆ ಬಂದಿತ್ತು. ಜಿಲ್ಲೆಯಲ್ಲಿ ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ ಮಾಡುತ್ತಿರುವ ವೇಳೆಗೆ ಚುನಾವಣೆ ಬಂದಿತ್ತು. ಆ ಬಳಿಕ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಆರಂಭದಲ್ಲಿ ಕ್ಯಾಂಟೀನ್ ಶುರುವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾರ್ಮಿಕರು, ರೋಗಿಗಳು ಸೇರಿದಂತೆ ಬಡ ವರ್ಗಕ್ಕೆ ಕಡಿಮೆ ಬೆಲೆಯಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಲಭ್ಯವಾಗಿತ್ತು. ದೈನಂದಿನ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಊಟ, ತಿಂಡಿ ನೀಡಲಾಗುತ್ತಿತ್ತು. ಆದರೆ, ಬರುಬರುತ್ತ ಕೆಲವೆಡೆ ಕ್ಯಾಂಟೀನ್ ಬಂದ್ ಆದರೆ, ಕೆಲವೆಡೆ ನಿರ್ವಹಣೆ ಸರಿಯಿಲ್ಲದೇ ಜನರೇ ಬರುವುದನ್ನು ನಿಲ್ಲಿಸಿದರು. ಈಗ ಯೋಜನೆ ಆರಂಭಿಸಿದ ಸಿದ್ದರಾಮಯ್ಯನವರೇ ರಾಜ್ಯದ ಚುಕ್ಕಾಣಿ ಹಿಡಿದಿದ್ದು, ಮತ್ತೆ ಕ್ಯಾಂಟೀನ್‌ಗೆ ಶುಕ್ರದೆಸೆ ಆರಂಭವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸದ್ಯ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ ಹೇಗಿದೆ, ಜನರು ಏನಂತಾರೆ ಎಂಬುದನ್ನು ನಾವು ತೆರೆದಿಡುತ್ತಿದ್ದೇವೆ.
ಸಿದ್ದು ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆ: ಧಾರವಾಡ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ
3 ಕಡೆ ಚಾಲು ಇರುವ ಕ್ಯಾಂಟೀನ್:
ಜಿಲ್ಲಾ ಕೇಂದ್ರ ಹಾವೇರಿಯಲ್ಲಿ 5 ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆ ಎದುರಿನ ಪಶುಸಂಗೋಪನಾ ಇಲಾಖೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಶುರುವಾಗಿತ್ತು. ಆರಂಭದ ಒಂದೆರಡು ವರ್ಷ ಜನರು ಸಾಲುಗಟ್ಟಿನಿಂಟು ಟೋಕನ್ ಪಡೆದು ಊಟ, ಉಪಾಹಾರ ಮಾಡುತ್ತಿದ್ದರು. ಆದರೆ, ಬರುಬರುತ್ತ ಕ್ಯಾಂಟೀನ್ ನಿರ್ವಹಣೆ ಕುಟುಂತ್ತ ಸಾಗಿ 6 ತಿಂಗಳ ಹಿಂದೆ ಬಾಗಿಲು ಬಂದ್ ಆಗಿತ್ತು. ಕಳೆದ ಫೆಬ್ರವರಿಯಲ್ಲಿ ಮತ್ತೆ ಬೇರೆ ಗುತ್ತಿಗೆದಾರು ಟೆಂಡರ್ ಪಡೆದು ಕ್ಯಾಂಟೀನ್ ಆರಂಭಿಸಿದ್ದಾರೆ. ಆದರೆ, ಜನರೇ ಬರುತ್ತಿಲ್ಲ ಎಂಬುದು ರಿಯಾಲಿಟಿ ಚೆಕ್ ವೇಳೆ ಕಂಡುಬಂದಿದೆ.
ರಾಣಿಬೆನ್ನೂರು ನಗರಸಭೆ ವಾಪ್ತಿಯಲ್ಲಿರುವ ಕ್ಯಾಂಟೀನ್ ಕೂಡ ಇದೇ ಸ್ಥಿತಿಯಲ್ಲಿದೆ. ಹಿರೇಕೆರೂರಿನಲ್ಲಿ ಕೂಡ ಮೂರು ತಿಂಗಳು ಬಾಗಿಲು ಹಾಕಿದ್ದ ಕ್ಯಾಂಟೀನ್ ಕಳೆದ ನವೆಂಬರ್ ಅಂತ್ಯದಲ್ಲಿ ಆರಂಭಗೊಂಡಿದೆ. ಈಗ ಚಾಲೂ ಇದ್ದರೂ ಬರುವ ಜನರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿಂದೆ . 5ಗೆ ನೀಡುವ ಬೆಳಗಿನ ಉಪಾಹಾರಕ್ಕೆ 500 ಟೋಕನ್ ನೀಡಲಾಗುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆ . 10ರ ದರದಲ್ಲಿ 250 ಊಟ ನಿಗದಿಯಾಗಿತ್ತು. ಆರಂಭದಲ್ಲಿ ನಿಗದಿಯಷ್ಟುಟೋಕನ್‌ಗಳು ಹೋಗುತ್ತಿದ್ದವು. ಆದರೆ, ಈಗ ಬೆಳಗ್ಗೆ 200 ಜನರೂ ಉಪಾಹಾರ ಮಾಡುತ್ತಿಲ್ಲ. ಮಧ್ಯಾಹ್ನ 100 ರಿಂದ 150 ಊಟ ಹೋದರೆ ಹೆಚ್ಚು. ಇನ್ನು ರಾತ್ರಿ 100 ಊಟವೂ ಹೋಗುವುದಿಲ್ಲ ಎಂಬ ಪರಿಸ್ಥಿತಿ ಜಿಲ್ಲೆಯಲ್ಲಿ ಚಾಲು ಇರುವ ಮೂರೂ ಕ್ಯಾಂಟೀನ್‌ಗಳಲ್ಲಿದೆ.
5 ಕಡೆ ಆರಂಭವೇ ಆಗಿಲ್ಲ:
ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ. ರಾಣಿಬೆನ್ನೂರಿಗೆ ಮಂಜೂರಾಗಿರುವ 2 ಕ್ಯಾಂಟೀನ್‌ಗಳ ಪೈಕಿ ಒಂದು ಶುರುವಾಗಿದ್ದರೆ, ಇನ್ನೊಂದು ಆರಂಭವೇ ಆಗಿಲ್ಲ. ಹಾವೇರಿ ಮತ್ತು ಹಿರೇಕೆರೂರಲ್ಲಿ ತಲಾ ಒಂದು ಕ್ಯಾಂಟೀನ್ ನಡೆಯುತ್ತಿದೆ. ಬ್ಯಾಡಗಿ ಪುರಸಭೆ ವ್ಯಾಪ್ತಿಯಲ್ಲಿ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಾಣಿಬೆನ್ನೂರಿನ ಇನ್ನೊಂದು ಕ್ಯಾಂಟೀನ್‌ಗೆ ಸ್ಥಳ ಗುರುತಿಸಿದ್ದೇ ಸಾಧನೆಯಾಗಿದೆ. ಹಾನಗಲ್ಲಿನಲ್ಲಿ ಸ್ಥಳ ಗುರುತಿಸಲಾಗಿದ್ದರೆ, ಶಿಗ್ಗಾಂವಿ ಮತ್ತು ಸವಣೂರಿನಲ್ಲಿ ಇದುವರೆಗೆ ಜಾಗ ಗುರುತಿಸುವ ಕಾರ್ಯವೂ ಆಗಿಲ್ಲ.
ಈಗ ಮತ್ತೆ ಸಿದ್ದರಾಮಯ್ಯನವರೇ ಸಿಎಂ ಆಗಿರುವುದರಿಂದ ಅವರದೇ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೆ ಶುಕ್ರದೆಸೆ ಶುರುವಾಗುವ ನಿರೀಕ್ಷೆಯಿದೆ.
ಮೊದಲಿನ ರುಚಿಯಿಲ್ಲ
ಮೊದಲು ರುಚಿ ಮತ್ತು ಪ್ರಮಾಣ ಎರಡರಲ್ಲೂ ಚೆನ್ನಾಗಿತ್ತು. ಈಗ ರುಚಿಯೂ ಇಲ್ಲ, ಪ್ರಮಾಣವೂ ಕಡಿಮೆಯಾಗಿದೆ ಎಂಬುದು ಕ್ಯಾಂಟೀನ್ ಬಳಕೆದಾರರ ಅಭಿಪ್ರಾಯವಾಗಿದೆ. ಮೊದಲು ಬೆಳಗ್ಗೆ ತಿಂಡಿ ರುಚಿ ಇರುತ್ತಿತ್ತು. ಮಧ್ಯಾಹ್ನ ಅನ್ನ, ಸಾಂಬಾರ ರುಚಿಯಾಗಿರುತ್ತಿತ್ತು. ಈಗ ಎರಡು ಟೋಕನ್ ಪಡೆದರಷ್ಟೇ ಸ್ವಲ್ಪ ಮಟ್ಟಿಗೆ ಹೊಟ್ಟೆತುಂಬುತ್ತದೆ. ರಿಯಾಯಿತಿ ದರ ಎಂದು ಹೇಳಿ ಪ್ರಮಾಣ ಕಡಿಮೆ ಮಾಡಿರುವುದರಿಂದ ಬಡವರಿಗೆ ಸಮಸ್ಯೆಯಾಗಿದೆ ಎಂದು ಕೂಲಿ ಕಾರ್ಮಿಕ ರಾಮಪ್ಪ ಹಡಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ಸಿದ್ಧತೆ..!
ಜಿಲ್ಲೆಯಲ್ಲಿ ಮೂರು ಕಡೆ ಇಂದಿನಾ ಕ್ಯಾಂಟೀನ್ ನಡೆಯುತ್ತಿದೆ. ಯಾದಗಿರಿ ಜಿಲ್ಲೆ ಶಹಾಪುರದ ವಿಶ್ವನಾಥರೆಡ್ಡಿ ದರ್ಶನಾಪುರ ಎಂಬವರು ಜಿಲ್ಲೆಯ ಮೂರು ಕ್ಯಾಂಟೀನ್ ಟೆಂಡರ್ ಪಡೆದಿದ್ದಾರೆ. ಇನ್ನುಳಿದ 5 ಕಡೆ ಕ್ಯಾಂಟೀನ್ ಆರಂಭಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಗೀತಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ