ವಿಜಯಪುರದಲ್ಲಿ ಕೈ-ಕಮಲ ನಾಯಕರ ಕಿತ್ತಾಟ, ಎಲ್ಲವೂ ಮುಗಿದಿಲ್ಲ ಎಂಬ ಸೂಚನೆ ಕೊಟ್ಟ ವಿಜುಗೌಡ
ನವೆಂಬರ್ 9 ರಂದು ಜಿಲ್ಲೆಯ ಬಬಲೇಶ್ವರ ತಹಸೀಲ್ದಾರ್ ಕಚೇರಿ ಬಳಿ ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಗಲಾಟೆಯ ಬಗ್ಗೆ ನವೆಂಬರ್ 10ರಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಸುದ್ದಿಗೋಷ್ಟಿ ನಡೆಸಿದ್ದು, ಇಲ್ಲಿಗೆ ಎಲ್ಲವೂ ಮುಗಿದಿಲ್ಲ ಎನ್ನುವ ಸೂಚನೆಗಳು ಸಿಕ್ಕಿವೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ನ.10): ನವೆಂಬರ್ 9ರಂದು ಜಿಲ್ಲೆಯ ಬಬಲೇಶ್ವರ ತಹಸೀಲ್ದಾರ್ ಕಚೇರಿ ಬಳಿ ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಜಗಳ ನಡೆದಿತ್ತು. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕಿತ್ತಾಟಕ್ಕೆ ಬ್ರೇಕ್ ಹಾಕಿದ್ದರು. ಆದ್ರೆ ಇಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಸುದ್ದಿಗೋಷ್ಟಿ ನಡೆಸಿದ್ದು, ಇಲ್ಲಿಗೆ ಎಲ್ಲವೂ ಮುಗಿದಿಲ್ಲ ಎನ್ನುವ ಸೂಚನೆಗಳು ಸಿಕ್ಕಿವೆ. ಕಾಂಗ್ರೆಸ್ ಎಂಎಲ್ ಸಿ ಸುನೀಲಗೌಡ ಪಾಟೀಲ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ನಡುವೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಏಕವಚನ ಬಳಕೆಯ ಜಗಳ ನಡೆದಿತ್ತು. ಇಂದು ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಿಜುಗೌಡ ಪಾಟೀಲ, ತಳವಾರ ಪರಿವಾರ ಜಾತಿ ಪ್ರಮಾಣ ಪತ್ರ ಆ ಸಮುದಾಯದ ಜನರಿಗೆ ಕೊಡಿಸಲು ಹೋದಾಗ ಎಂಎಲ್ ಸಿ ಅವರು ಬಂದು ಪ್ರೋಟೋ ಕಾಲ ಪ್ರಕಾರ ನಡೆದು ಕೊಳ್ಳಬೇಕು ಎಂದು ಹೇಳಿ ನಾನೊಬ್ಬ ನಿಗಮ ಮಂಡಳಿ ಅಧ್ಯಕ್ಷನೆಂದು ಗೊತ್ತಿದ್ದರೂ ನನ್ನ ಬದಲಿಗೆ ತನ್ನ ಬೆಂಬಲಿಗರನ್ನು ಒಳಗೆ ಕರೆದುಕೊಂಡಿದ್ದಾರೆ. ಶಾಸಕರು ಈ ಪ್ರಮಾಣ ಪತ್ರ ವಿತರಿಸುತ್ತಾರೆ, ಬೇರೆಯವರು ನೀಡುವ ಹಾಗಿಲ್ಲ ಎಂದು ಹೇಳಿದರಲ್ಲದೇ, ನಂತರ ಹೊರ ಗಂಟೆ ತಮ್ಮ ವಿರುದ್ಧ ಏಕವಚನ ಪ್ರಯೋಗ ಮಾಡಿ, ಜಗಳ ತೆಗೆದಿದ್ದಾರೆ ಎಂದು ಆರೋಪಿಸಿದರು. ಇದನ್ನು ಜನರೆಲ್ಲ ನೋಡಿದ್ದಾರೆ ಎಂದರು. ವಿಜುಗೌಡ ಮಾತಿನಲ್ಲಿ ಇಲ್ಲಿಗೆ ಎಲ್ಲವೂ ಮುಗಿದಿಲ್ಲ ಎನ್ನುವ ದಾಟಿ ಇತ್ತು..
ಪಿಕ್ಚರ್ ಅಭೀ ಬಾಕಿ ಹೈ ; ವಿಜುಗೌಡ ಪಾಟೀಲ್..!
ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿ ಈ ಘಟನೆ ಬಗ್ಗೆ ಕಾನೂನು ಹೋರಾಟ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು. ಇವರು ಹೆದರಿಸಿ ಬಬಲೇಶ್ವರ ಕ್ಷೇತ್ರದೊಳಗೆ ಬರದಂತೆ ನೋಡಿಕೊಳ್ಳಲು ಆಗುವದಿಲ್ಲ, ನಾನು ಮೂರು ಬಾರಿ ಈ ಕ್ಷೇತ್ರದಲ್ಲಿ ಸೋತಿರ ಬಹುದು, ಆದರೆ ಜನರ ಹೃದಯದಲ್ಲಿದ್ದೇನೆ, ಬಬಲೇಶ್ವರ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಯಾಗಿದೆ ಎನ್ನುವದನ್ನು ಅಂಕಿ ಅಂಶಗಳ ಮೂಲಕ ಮುಂದಿನ ದಿನದಲ್ಲಿ ಬಿಡುಗಡೆ ಮಾಡುವೆ ಎನ್ನುವ ಮೂಲಕ ಅಭಿ ಪಿಚ್ಷರ್ ಬಾಕಿ ಹೈ ಎಂದರು.
ಕಾಂಗ್ರೆಸ್ ಸರ್ವನಾಶವಾಗಲಿದೆ..!
ಈ ಹಿಂದೆ ಧರ್ಮ ಒಡೆಯಲು ಒಬ್ಬರು ಹೋಗಿದ್ದರು ಎಂದು ಹೆಸರು ಹೇಳದೇ ಶಾಸಕ ಎಂ.ಬಿ.ಪಾಟೀಲ ವಿಷಯ ಪ್ರಸ್ತಾಪಿಸಿ ಅವರ ಜತೆ ಈಗ ಮತ್ತೊಬ್ಬರು ಸೇರಿ ಕೊಂಡಿದ್ದಾರೆ. ಅವರು ಸತೀಶ ಜಾರಕಿಹೊಳಿ ಅವರಿಂದ ಕಾಂಗ್ರೆಸ್ ಸರ್ವನಾಶವಾಗುತ್ತಿದೆ. ಕೊಡ ತುಂಬಿದೆ, ಅದು ಚೆಲ್ಲಲೇ ಬೇಕು ಎಂದು ಮಾರ್ಮಿಕವಾಗಿ ನುಡಿದರು.
'ಬಿಜೆಪಿ ಬಿರುಗಾಳಿಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ'
ಮುಂದೆನಾಗುತ್ತೋ ಎಂದು ಕಾದು ಕುಳಿತ ಜನ..!
ಉಭಯ ನಾಯಕರ ಕಾದಾಟ, ಕಿತ್ತಾಟವನ್ ಹಗುರವಾಗಿ ತೆಗೆದುಕೊಳ್ಳುವಂತದ್ದಲ್ಲ. ಇಬ್ಬರು ಪಾಟೀಲ್‌ರ ನಡುವೆ ವೈಷಮ್ಯ ಇರೋದು ಇಂದು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸವಿದೆ. ಈ ವಿಚಾರ ಬಬಲೇಶ್ವರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಜನರಿಗೆ ಗೊತ್ತಿರುವ ವಿಚಾರ. ಇನ್ನು ವಿಧಾನಸಭೆ ಚುನಾವಣೆಗೆ ಕೆಲವೆ ತಿಂಗಳು ಬಾಕೀ ಇರುವಾಗ ಇಬ್ಬರು ನಾಯಕರ ನಡುವಿನ ಈ ಬೆಳವಣಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.
ವಿಜಯಪುರ: ಬಬಲೇಶ್ವರದಲ್ಲಿ ಕಾಂಗ್ರೆಸ್- ಬಿಜೆಪಿ ಘಟಾನುಗಟಿ ನಾಯಕರ ಕಿತ್ತಾಟ..!
ಹಿಂದೆಯೂ ಇಬ್ಬರು ನಾಯಕ ನಡುವೆ ನಡೆದಿದ್ದ ಕದನ..!
ಈ ಹಿಂದೆಯೂ ಕಾಂಗ್ರೆಸ್ ಎಮ್ಎಲ್‌ಸಿ ಸುನೀಲಗೌಡ ಪಾಟೀಲ್ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ನಡುವೆ ಮಾತಿನ ಕದನ ನಡೆದಿತ್ತು. ಬಬಲೇಶ್ವರ ತಾಲೂಕಿನ ಜೈನಾಪೂರ ಗ್ರಾಮವೊಂದಲ್ಲಿ ಪ್ರತ್ಯೇಕ ಕಾರ್ಯಕ್ರಮಗಳು ನಡೆದಾಗ ಇಬ್ಬರ ನಡುವೆ ಟಾಕ್ ವಾರ್ ನಡೆದಿತ್ತು. ಮೊದಲು ನಡೆದ ಕಾರ್ಯಕ್ರಮದಲ್ಲಿ ವಿಜುಗೌಡ ಪಾಟೀಲ್ ನಾವೆಲ್ಲ ಸ್ಕೂಲು, ಕಾಲೇಜು ಸಮಯದಲ್ಲೆ ಗೂಂಡಾಗಿರಿ ಮಾಡಿದವರು, ಇವರ ಗೂಂಡಾಗಿರಿಗೆ ಹೆದರಲ್ಲ ಎನ್ನುವ ಮೂಲಕ ಸುನೀಲಗೌಡ ಪಾಟೀಲರ ಹೆಸರು ಬಳಸದೆ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಅದೇ ಜೈನಾಪುರ ಗ್ರಾಮದಲ್ಲಿ ನಡೆದಿದ್ದ ನಾಟಕ ಕಾರ್ಯಕ್ರಮ ಉದ್ಘಾಟನೆ ವೇಳೆ ಸುನೀಲಗೌಡ ಪಾಟೀಲ್ ವಿಜುಗೌಡ ಹೇಳಿಕೆಯನ್ನ ಪ್ರಸ್ತಾಪಿಸಿ ಜೈನಾಪುರದಲ್ಲಿ ಬ್ರಿಟಿಷರೆ ಗೂಂಡಾಗಿರಿ ಮಾಡಲಿಕ್ಕಾಗಲಿಲ್ಲ, ಇನ್ನೂ ಇವ್ರೆಲ್ಲ ಮಾಡ್ತಾರಾ ನೋಡೋಣ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದರು.. ಈಗ ಮತ್ತೆ ಇದೆ ರೀತಿಯ ವಾಗ್ದಾಳಿ ಮುಂದುವರೆದಿವೆ.. ಇದು ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣಿಸ್ತಿಲ್ಲ..