ಲಕ್ಷ್ಮೇಶ್ವರ(ಫೆ.19): ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಿ ಈಗಾಗಲೇ ಕೈಗೊಂಡ ನಿರ್ಣಯಕ್ಕೆ ಮಠದ ಮಠಾಧೀಶರು, ಕಮೀಟಿಯರು ಬದ್ಧರಾಗಿ ದಿಂಗಾಲೇಶ್ವರ ಶ್ರೀಗಳನ್ನೆ ಶ್ರೀಮಠದ ಉತ್ತರಾಧಿಕಾರಿಗಳು ಎಂಬ ಸತ್ಯವನ್ನು ನಾಡಿನ ಜನತೆಗೆ ಬಹಿರಂಗಪಡಿಸಬೇಕು ಎಂದು ಮಂಗಳವಾರ ಪಟ್ಟಣದಲ್ಲಿ ಸೇರಿದ್ದ ಭಕ್ತರು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಭೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಸೋಮಣ್ಣ ಬೆಟಗೇರಿ ಮಾತನಾಡಿ, ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ಮೂರುಸಾವಿರ ಮಠಕ್ಕೆ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಪೀಠಾಧಿಪತಿಗಳಾಗಬೇಕು. ದಿಂಗಾಲೇಶ್ವರ ಶ್ರೀಗಳನ್ನು ಹೇಗಾದರೂ ಮಾಡಿ ಉತ್ತರಾಧಿಕಾರಿಯಾಗದಂತೆ ತಡೆಯವ ನಿಟ್ಟಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹೂಡಿರುವ ಹುನ್ನಾರ ಕೈಗೂಡಲು ಭಕ್ತರು ಬಿಡುವುದಿಲ್ಲ. ವಿನಾಕಾರಣ ಶ್ರೀಗಳ ಮೇಲೆ ಇಲ್ಲಸಲ್ಲದ ಆಧಾರ ರಹಿತ ಆರೋಪ ಮಾಡುವುದನ್ನು ಭಕ್ತ ಸಮೂಹ ಒಪ್ಪುವದಿಲ್ಲ. ಉತ್ತರ ಕರ್ನಾಟಕದ ಪ್ರತಿಷ್ಠಿತ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ದಿಂಗಾಲೇಶ್ವರ ಶ್ರೀಗಳನ್ನು ಮಾಡುವುದರಿಂದ ಶ್ರೀಮಠದಲ್ಲಿ ತ್ರಿವಿಧ ದಾಸೋಹ ನಡೆದು ಗತವೈಭವ ಮೆರೆಯಲಿದೆ ಮತ್ತು ಈ ನಾಡಿಗೆ ಮತ್ತು ಸಮಾಜಕ್ಕೆ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. 

ಮೂರುಸಾವಿರ ಮಠದ ಉತ್ತರಾಧಿಕಾರಿ: 'ಮಲ್ಲಿಕಾರ್ಜುನ ಶ್ರೀ ನನ್ನ ಮುಂದೆ ಬೆಳೆದ ಕೂಸು'

ಶಂಕರ ಬಾಳಿಕಾಯಿ ಮಾತನಾಡಿ, ನಮ್ಮ ಶ್ರೀಗಳೇನೂ ಮಠದ ಶ್ರೀಮಂತಿಕೆ ನೋಡಿ ಉತ್ತರಾಧಿಕಾರಿ ಆಗಬೇಕೆಂದು ಆಸೆ ಪಟ್ಟಿರಲಿಲ್ಲ. ಹುಬ್ಬಳ್ಳಿಯಲ್ಲಿ ಜರುಗಿದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಂದರ್ಭದಲ್ಲಿಯೇ ಶ್ರೀಗಳ ಸಾಮರ್ಥ್ಯ, ಪ್ರಬುದ್ಧತೆ ಅರಿತು ಕಮೀಟಿಯ ಬಹುತೇಕ ಸದಸ್ಯರು ಅವರ ದುಂಬಾಲು ಬಿದ್ದು ಒಪ್ಪಿಸಿರುವ ಸತ್ಯವನ್ನು ಆತ್ಮಸಾಕ್ಷಿಯಿಂದ ಒಪ್ಪಿಕೊಳ್ಳಬೇಕು. 2014 ರಲ್ಲಿ ಮೂಜಗು ಸೇರಿ ಎಲ್ಲರೂ ಒಪ್ಪಿಕೊಂಡು ಈಗ ವಿರೋಧ ವ್ಯಕ್ತಪಡಿಸುತ್ತಿರುವ ಹಿಂದೆ ಕೆಲ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಮತ್ತು ಮಠದ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಹೂಡಿರುವ ಕುತಂತ್ರವಾಗಿದೆ. 

ಇದು ಭಕ್ತರಿಗೆ ಗೊತ್ತಿರದ ಸಂಗತಿಯೇನಲ್ಲ. ಸತ್ಯಕ್ಕೆ ಎಂದಿಗೂ ಜಯ ಸಿಗಲಿದೆ ಎಂಬ ವಿಶ್ವಾಸ ಭಕ್ತರದ್ದಾಗಿದ್ದು ಫೆ. 23 ರಂದು ನಮ್ಮ ಶ್ರೀಗಳು ಕರೆದಿರುವ ಸತ್ಯದರ್ಶನದ ಬಹಿರಂಗ ಸಭೆಗೆ ಆಗಮಿಸಿ ಕರ್ತೃ ಗದ್ದುಗೆಯ ಸಾಕ್ಷಿಯಾಗಿ ಸತ್ಯದ ಪ್ರಮಾಣ ಮಾಡಲಿ ಎಂಬುದು ಭಕ್ತರ ಒತ್ತಾಸೆಯಾಗಿದೆ ಎಂದರು. 

ಪುರಸಭೆ ಸದಸ್ಯ ಮುಸ್ತಾಕ ಅಮ್ಮದ ಶಿರಹಟ್ಟಿ, ವಿಜಯ ಕರಡಿ ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ತಮ್ಮದೇ ಆದ ಸಾಮಾಜಿಕ ಕಳಕಳಿಯ ಮೂಲಕ ಸಮಾಜ ಸುಧಾರಣೆಗಾಗಿ ತಮ್ಮನ್ನೆ ಸಮರ್ಪಿಸಿಕೊಂಡಿದ್ದಾರೆ. ಶ್ರೀಗಳು ಸರ್ವಧರ್ಮ ಸಹಿಷ್ಣುಗಳಾಗಿದ್ದು ಸಮಾಜದಲ್ಲಿ ದುಶ್ಚಟಗಳಿಗೆ ಬಲಿಯಾಗಿ ಕುಟುಂಬಗಳು ಬೀದಿಗೆ ಬೀಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದುಶ್ಚಟಗಳ ಭಿಕ್ಷೆ- ಸದ್ಗುಣಗಳ ದೀಕ್ಷೆ ಎಂಬ ಸಾಮಾಜಿಕ ಜಾಗೃತಿಯನ್ನುಂಟು ಮೂಡಿಸುವ ಸಮಾಜ ಸುಧಾರಕರಾಗಿದ್ದಾರೆ. ಆದ್ದರಿಂದ ದೊಡ್ಡ ಮಠ ನಡೆಸುವ ಎಲ್ಲ ಸಾಮರ್ಥ್ಯ ಹೊಂದಿರುವ ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸಬೇಕೆಂದು ಪಕ್ಷಾತೀತ, ಜಾತ್ಯತೀತವಾಗಿ ಆಗ್ರಹಿಸುತ್ತೇವೆ. 

ನಾನೇ ಮೂರು ಸಾವಿರ ಮಠದ ಉತ್ತರಾಧಿಕಾರಿ: ದಿಂಗಾಲೇಶ್ವರ ಸ್ವಾಮೀಜಿ

ಚನ್ನಪ್ಪ ಜಗಲಿ, ಶರಣು ಗೋಡಿ, ರಾಜು ಅರಳಿ, ಶಂಕರಣ್ಣ ಬಾಳಿಕಾಯಿ, ಪದ್ಮರಾಜ ಪಾಟೀಲ, ಗಂಗಾಧರ ಮೆಣಸಿನಕಾಯಿ, ಪ್ರಕಾಶ ಮಾದನೂರ ಮಾತನಾಡಿ,ದಿಂಗಾಲೇಶ್ವರ ಶ್ರೀಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಂತಹ ಹೋರಾಟಕ್ಕೂ ಬದ್ಧರಾಗಿದ್ದು ಇಡೀ ತಾಲೂಕಿನ ಜನತೆ ಅವರ ಬೆಂಬಲಕ್ಕಿದೆ. ಫೆ.23 ರಂದು ಗದಗ ಜಿಲ್ಲೆಯಿಂದ ಅಪಾರ ಸಂಖ್ಯೆಯ ಭಕ್ತ ಸಮೂಹದ ನಡೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಕಡೆ ಎಂದರು. 

ಈ ಸಂದರ್ಭದಲ್ಲಿ ಜಾಕೀರ ಹುಸೇನ ಹವಾಲ್ದಾರ, ಬಸಣ್ಣ ಹಂಜಿ, ಮಾಲತೇಶ ಬಸಾಪುರ, ವೆಂಕಟೇಶ ಪಾಟೀಲ, ಪ್ರವೀಣ ಬೋಮಲೆ, ವಿರೂಪಾಕ್ಷ ಆದಿ, ವಿಜಯ ಕುಂಬಾರ, ಬಸವರಾಜ ಚಕ್ರಸಾಲಿ, ಸಂಗಮೇಶ ಬೆಳವಲಕೊಪ್ಪ, ಗಿರೀಶ ಸಜ್ಜನ, ಗಂಗಾಧರ ಕರ್ಜೆಕಣ್ಣವರ, ಈರಣ್ಣ ಅಣ್ಣಿಗೇರಿ, ವಿಜಯ ಆಲೂರ, ಅರುಣ ಪಾಟೀಲ, ಶಿವು ಲಮಾಣಿ, ರಾಜು ಯತ್ತಿನಮನಿ ಸೇರಿ ಅನೇಕರು ಇದ್ದರು.

ಮೂರುಸಾವಿರ ಮಠದ ಉತ್ತರಾಧಿಕಾರಿ ದಿಂಗಾಲೇಶ್ವರ ಶ್ರೀಗಳೇ ಸೂಕ್ತ:ಶ್ರೀಗಳು

ಉತ್ತರಾಧಿಕಾರಿಯಾಗಲು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಅತ್ಯಂತ ಸಮರ್ಥರಾಗಿದ್ದಾರೆ. ಪ್ರಖಂಡ ವಾಗ್ಮಿಗಳು, ಪ್ರವಚನ ಪ್ರವೀಣರು ಆಗಿರುವ ದಿಂಗಾಲೇಶ್ವರ ಯೋಗ್ಯರಾಗಿದ್ದಾರೆ ಎಂದು ಅಖಿಲ ಭಾರತ ಶಿವಾಚಾರ್ಯ ಸಂಘದ ಅಧ್ಯಕ್ಷರು, ಮುಕ್ತಿಮಂದಿರ ಧರ್ಮಕ್ಷೇತ್ರದ ಪೀಠಾಧಿಪತಿ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು. 

ಮಂಗಳವಾರ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮೂರುಸಾವಿರ ಮಠದ ಉತ್ತರಾಧಿಕಾರಿಗಳ ನೇಮಕದಲ್ಲಿ ಎದ್ದಿರುವ ವಿವಾದದಲ್ಲಿ ಯಾವುದೇ ಹುರುಳಿಲ್ಲ. ದಿಂಗಾಲೇಶ್ವರ ಶ್ರೀಗಳು ಮೂರು ಸಾವಿರಮಠದ ಉತ್ತರಾಧಿಕಾರಿಗಳಾಗಿ ಪೀಠಾಸೀ ನರಾಗುವುದರಲ್ಲಿ ಯಾವುದೇ ಅನುಮಾ ನವಿಲ್ಲ, ಅವರು ಶ್ರೀಮಠದ ಗೌರವವನ್ನು ಎತ್ತಿ ಹಿಡಿದು ಗತವೈಭವ ಮರಕಳಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಮೂರುಸಾವಿರ ಮಠದ ಉತ್ತರಾಧಿಕಾರಿಗಳ ನೇಮಕದಲ್ಲಿ ಕೆಲವರು ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಶ್ರೀಗಳ ಗೌರವಕ್ಕೆ ಚ್ಯುತಿ ತರುವ ಕಾರ್ಯ ಗಣ್ಯರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. 

ದಿಂಗಾಲೇಶ್ವರ ಶ್ರೀಗಳು ಮೂರು ಸಾವಿರ ಮಠದ ಉತ್ತರಾಧಿಕಾರಿಯಾಗುವಲ್ಲಿ ಸಮರ್ಥರಾಗಿದ್ದಾರೆ. ತಮ್ಮ ಪ್ರಖರ ಪ್ರವಚನಗಳ ಮೂಲಕ ನಾಡಿನ ಮನೆ ಮನೆ ಮಾತಾಗಿದ್ದಾರೆ, ಇಂತವರು ಉತ್ತರಾಧಿಕಾರಿಗಳಾದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಶ್ರೀಮಠವನ್ನು ಮತ್ತೇ ಉತ್ತುಂಗಕ್ಕೆ ಕೊಂಡೊಯ್ಯುವರು. ಅದಕ್ಕಾಗಿ ದಿಂಗಾಲೇಶ್ವರ ಶ್ರೀಗಳು ಮೂರುಸಾವಿರ ಮಠಕ್ಕೆ ಯೋಗ್ಯ ಮತ್ತು ಪ್ರಬುದ್ಧ ಸ್ವಾಮಿಗಳಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಮಾಜಿ ಸಂಸದ ವಿಜಯ ಸಂಕೇಶ್ವರ ಅವರು ದಿಂಗಾಲೇಶ್ವರ ಶ್ರೀಗಳು ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾಗಬೇಕು ಎಂಬ ಹೇಳಿಕೆಯಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ದಿಂಗಾಲೇಶ್ವರ ಶ್ರೀಗಳ ಸಾಮಾಜಿಕ ಕಳಕಳಿ, ಜನಸಾಮಾನ್ಯರ ಬಗ್ಗೆ ಇರುವ ಜನಪರ ನಿಲುವು ಅವರನ್ನು ಉತ್ತಮ ಮಠಾಧೀಶರನ್ನಾಗಿ ಮಾಡಿದ್ದು ಸಂಕೇಶ್ವರ ಅವರ ನಿಲುವಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದರು.

* ಉತ್ತರಾಧಿಕಾರಿಯನ್ನಾಗಿ ದಿಂಗಾಲೇಶ್ವರ ಶ್ರೀಗಳನ್ನು ಮಾಡುವುದರಿಂದ ಶ್ರೀಮಠದಲ್ಲಿ ತ್ರಿವಿಧ ದಾಸೋಹ ನಡೆದು ಗತವೈಭವ ಮೆರೆಯಲಿದೆ 
* ನಮ್ಮ ಶ್ರೀಗಳೇನೂ ಮಠದ ಶ್ರೀಮಂತಿಕೆ ನೋಡಿ ಉತ್ತರಾಧಿಕಾರಿ ಆಗಬೇಕೆಂದು ಆಸೆ ಪಟ್ಟಿರಲಿಲ್ಲ. 
* ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಂದರ್ಭದಲ್ಲಿಯೇ ಶ್ರೀಗಳ ಸಾಮರ್ಥ್ಯ, ಪ್ರಬುದ್ಧತೆ ಅರಿತು ಕಮೀಟಿಯ ಬಹುತೇಕ ಸದಸ್ಯರು ಅವರ ದುಂಬಾಲು ಬಿದ್ದು ಒಪ್ಪಿಸಿರುವ ಸತ್ಯವನ್ನು ಆತ್ಮಸಾಕ್ಷಿಯಿಂದ ಒಪ್ಪಿಕೊಳ್ಳಬೇಕು. 
* ಶ್ರೀಗಳು ಸರ್ವಧರ್ಮ ಸಹಿಷ್ಣುಗಳಾಗಿದ್ದು ಸಮಾಜದಲ್ಲಿ ದುಶ್ಚಟಗಳಿಗೆ ಬಲಿಯಾಗಿ ಕುಟುಂಬಗಳು ಬೀದಿಗೆ ಬೀಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದುಶ್ಚಟಗಳ ಭಿಕ್ಷೆ- ಸದ್ಗುಣಗಳ ದೀಕ್ಷೆ ಎಂಬ ಸಾಮಾಜಿಕ ಜಾಗೃತಿಯನ್ನುಂಟು ಮೂಡಿಸುವ ಸಮಾಜ ಸುಧಾರಕರಾಗಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
 

"