Asianet Suvarna News Asianet Suvarna News

ಬೆಳಗಾವಿ: ದೇವರ ದರ್ಶನಕ್ಕೆ ಷರತ್ತು ಬದ್ಧ ಅನುಮತಿ

*  ಪ್ರಮುಖ ಮಂದಿರಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ
*  ಕೋವಿ​ಡ್‌-19 ಮಾರ್ಗಸೂಚಿ ಪಾಲಿ​ಸ​ದಿ​ದ್ದರೆ ಕಠಿಣ ಕ್ರಮದ ಎಚ್ಚ​ರಿ​ಕೆ
*  ನಿಯಮ ಉಲ್ಲಂಘಿಸಿದರೆ ಕ್ರಮ
 

Conditional permission to Temples in Belagavi grg
Author
Bengaluru, First Published Sep 22, 2021, 2:27 PM IST

ಬೆಳಗಾವಿ(ಸೆ.22): ಕೋವಿಡ್‌-19 ವೈರಾಣುವಿನ ಹರಡುವಿಕೆ ನಿಯಂತ್ರಿಸಲು ಹಾಗೂ ಸಾರ್ವಜನಿಕರ ಮತ್ತು ಭಕ್ತಾದಿಗಳ ಆರೋಗ್ಯ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಭಕ್ತಾದಿಗಳಿಗೆ ನಿಷೇಧಿಸಲಾಗಿದ್ದ ಬೆಳಗಾವಿ(Belagavi) ಜಿಲ್ಲೆಯ ಪ್ರಮುಖ ದೇವಾಲಯಗಳ ದರ್ಶನಕ್ಕೆ ಮುಕ್ತಗೊಳಿಸಿ, ಸೆ. 22ರಿಂದ ಷರತ್ತು ಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಪ್ರಮುಖ ದೇವಾಲಯಗಳಾದ ಸವದತ್ತಿಯ ಜೋಗುಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ, ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕ ದೇವಿಯ ದೇವಸ್ಥಾನ, ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಹೊಳೆಮ್ಮ ದೇವಿಯ ದೇವಸ್ಥಾನ ಹಾಗೂ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯ ದೇವಸ್ಥಾನಗಳ(Temple) ದರ್ಶನಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಈವರೆಗೂ ಜಿಲ್ಲೆಯ ಜನರ ಸಹಕಾರ ಹಾಗೂ ಮಾರ್ಗಸೂಚಿಗಳ ಪಾಲನೆಯಿಂದಾಗಿ ವೈರಾಣುವಿನ ಹರಡುವಿಕೆ ಹತೋಟಿಗೆ ಬರುತ್ತಿರುವುದರಿಂದ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಪ್ರಮುಖ ದೇವಾಲಯಗಳು, ಚರ್ಚಗಳು, ಮಸೀದಿಗಳು, ಎಲ್ಲ ಶ್ರದ್ಧಾ ಭಕ್ತಿ ಕೇಂದ್ರಗಳು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಂಡಿರುವುದನ್ನು ಪರಿಗಣಿಸಿ ಮತ್ತು ಜಿಲ್ಲೆಯ ಹಲವಾರು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕ ಭಕ್ತಾದಿಗಳ ಮನವಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗೋವಾ ಸಿಎಂ ಬಂದ ತಕ್ಷಣ ಓಪನ್ ಆದ ಸವದತ್ತಿ ಯಲ್ಲಮ್ಮ ದೇವಾಲಯ!

ದೇವಾಲಯಗಳಿಗೆ ಷರತ್ತುಬದ್ಧ ಅನುಮತಿ:

ದೇವಾಲಯಗಳ ದರ್ಶನ ಅನುಮತಿ ಆದೇಶವು ಸೆ. 22ರಿಂದ ಅನ್ವಯವಾಗಲಿದ್ದು, ದೇವಾಲಯಗಳ ಜನಸಂದಣಿ ಸೇರುವಂತಹ ವಿಶೇಷ ಉತ್ಸವ, ಜಾತ್ರೆ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

ಸಾಂಕೇತಿಕ ಆಚರಣೆ:

ಜಾತ್ರಾ ಉತ್ಸವ /ಬ್ರಹ್ಮ ರಥೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ದೇವಾಲಯದ ಆಗಮಿಕರು, ತಂತ್ರಿಗಳು, ಅರ್ಚಕರು, ದೇವಾಲಯದ ಸಿಬ್ಬಂದಿ ಸಾಂಕೇತಿಕವಾಗಿ ಹೋಮಾದಿಗಳು, ಪ್ರಾಯಶ್ಚಿತ್ತಾದಿಗಳನ್ನು ನಡೆಸಿ ಕೇವಲ ಉತ್ಸವಗಳನ್ನು ದೇವಾಲಯದ ಆವರಣ ಒಳಪ್ರಾಂಗಣದೊಳಗೆ ಉತ್ತಮ ದಿನಗಳಲ್ಲಿ ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸಬೇಕು. ಅದರಂತೆ, ದೇವಾಲಯಗಳ ಎಲ್ಲ ಪ್ರಮುಖ ಉತ್ಸವ, ಜಾತ್ರೆಗಳನ್ನು ಮುಂದಿನ ಆದೇಶದವರೆಗೆ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಿ ಪೂರ್ಣಗೊಳಿಸಬೇಕು.

ದೇವಾಲಯಗಳ ದರ್ಶಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇನ್ನಿತರೆ ಎಲ್ಲ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕು.
ಮಾರ್ಗಸೂಚಿ ಪಾಲನೆ ಕಡ್ಡಾಯ:

ಸರ್ಕಾರದ ಮಾರ್ಗಸೂಚಿಯಲ್ಲಿ ಅತ್ಯಂತ ಪ್ರಮುಖವಾಗಿ ವಿಧಿಸಿದ ಸಾರ್ವಜನಿಕರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಕಟ್ಟುನಿಟ್ಟಿನ ಪಾಲನೆ, ಮುಖಗವಸು(Mask) ಧರಿಸುವಿಕೆ, ಥರ್ಮಲ್‌ ಸ್ಕ್ರೀನಿಂಗ್‌ ಮತ್ತು ಕೈ ತೊಳಿಯುವಿಕೆ ಅಥವಾ ಸ್ಯಾನಿಟೈಸರ್‌ ವ್ಯವಸ್ಥೆ ಕಡ್ಡಾಯವಾಗಿ ಪಾಲಿಸಬೇಕು.

ದೇವಾಲಯಗಳ ಪ್ರಾಂಗಣ ಪ್ರವೇಶ ಪೂರ್ವದಲ್ಲಿ ಸಾರ್ವಜನಿಕರ, ಭಕ್ತಾದಿಗಳ ದೇಹದ ಉಷ್ಣಾಂಶ ಪರಿಶೀಲಿಸಿ, ದೇಹದ ಉಷ್ಣಾಂಶ ಸುಸ್ಥಿತಿಯಲ್ಲಿರುವವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ದಿನನಿತ್ಯ ಸಾರ್ವಜನಿಕ ಭಕ್ತಾದಿಗಳ ಜನಜಂಗುಳಿಗೆ ಅವಕಾಶ ಕಲ್ಪಿಸಬಾರದು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್‌-19 ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಬೆಳಗಾವಿ: ಮತ್ತೆ ಸವದತ್ತಿ ಯಲ್ಲಮ್ಮ ದರ್ಶನ ಬಂದ್‌..!

ನಿಯಮ ಉಲ್ಲಂಘಿಸಿದರೆ ಕ್ರಮ:

ಕೋವಿಡ್‌-19(Covid 19) ಹರಡುವಿಕೆ ನಿಯಂತ್ರಿಸಲು ಹೊರಡಿಸಿರುವ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ನಿಯಮಗಳಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದರ್ಶನಕ್ಕೆ ಮುಕ್ತಗೊಳಿಸಿದ ತರುವಾಯ ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ, ಈ ಆದೇಶ ರದ್ದುಪಡಿಸಲಾಗುವುದು. ದೇವಾಲಯಗಳ ದರ್ಶನಕ್ಕೆ ಮುಕ್ತಗೊಳಿಸಿದ ತರುವಾಯ ಅವಶ್ಯವಿದ್ದಲ್ಲಿ ಪರಿಸ್ಥಿತಿ ಅವಲೋಕಿಸಿ ಹೆಚ್ಚುವರಿ ಷರತ್ತು ವಿಧಿಸಲಾಗುವುದು. ದೇವಾಲಯಗಳ ಸ್ಥಳೀಯ ಆಡಳಿತ ಪ್ರಾಧಿಕಾರಗಳು ದರ್ಶನಕ್ಕೆ ಮುಕ್ತಗೊಳಿಸಿದ ಬಗ್ಗೆ ಹಾಗೂ ಮಾರ್ಗಸೂಚಿಗಳ ಪಾಲನೆ ದೃಢೀಕರಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
 

Follow Us:
Download App:
  • android
  • ios