ಬೆಳಗಾವಿ(ಫೆ.21): ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ(ಫೆ.21)ರಿಂದ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನ, ಚಿಂಚಲಿ ಮಾಯಕ್ಕಾ ದೇವಿ ದೇವಸ್ಥಾನ, ಸವದತ್ತಿ ಜೋಗುಳ ಬಾವಿಯ ಸತ್ಯಮ್ಮ ದೇವಿ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ದೇವಸ್ಥಾನಗಳ ದರ್ಶನ ನಿಷೇಧ ಹೇರಲಾಗಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಹೊಸ ಕೊರೋನಾ ಸೋಂಕು ಪತ್ತೆಯಾಗಿರುವ ಸಂಬಂಧ ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಭಕ್ತಾದಿಗಳೇ ಗಮನಿಸಿ: ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಮತ್ತೆ ನಿರ್ಬಂಧ

ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ ಕೊರೋನಾ ನೆಗೆಟಿವ್‌ ಪ್ರಮಾಣಪತ್ರ ತರಬೇಕು. ಇಲ್ಲವಾದರೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇದರ ಜೊತೆಗೆ ಸ್ಯಾನಿಟೈಸರ್‌, ಮಾಸ್ಕ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಥರ್ಮಲ್‌ ಸ್ಕ್ಯಾ‌ನಿಂಗ್‌ ಸೇರಿದಂತೆ ಕೊರೋನಾ ಮಾರ್ಗಸೂಚಿಯನ್ನು ಕಟ್ಟೆಚ್ಚರದಿಂದ ಪಾಲನೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.