ಹಣಕ್ಕಾಗಿ ಬೇಡಿಕೆ ಇಟ್ಟ ರಾಜ್ಯದ ಪ್ರಮುಖ ಸಚಿವರ ಪಿಎ: ದೂರು ದಾಖಲು
ಹಣಕ್ಕಾಗಿ ಬೇಡಿಕೆ ಇಟ್ಟ ರಾಜ್ಯದ ಪ್ರಮುಖ ಸಚಿವರೋರ್ವರ ಪಿಎ ವಿರುದ್ಧ ಇದೀಗ ದೂರು ದಾಖಲಾಗಿದೆ. ಶೃಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೃಂಗೇರಿ (ಜ.27): ಕಂದಾಯ ಸಚಿವ ಆರ್.ಅಶೋಕ ಅವರ ಆಪ್ತ ಸಹಾಯಕ ಗಂಗಾಧರ್ ವಿರುದ್ಧ ಶೃಂಗೇರಿ ಉಪ ನೋಂದಣಾಧಿಕಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಆರೋಪ ಕೇಳಿಬಂದಿದೆ. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಆರ್.ಅಶೋಕ ಅವರ ಚಿಕ್ಕಮಗಳೂರು ಪ್ರವಾಸ ವೇಳೆ ಈ ಘಟನೆ ನಡೆದಿದ್ದು, ಗಂಗಾಧರ್ ಜತೆಗಿನ ಮೊಬೈಲ್ ಸಂಭಾಷಣೆ ಮತ್ತು ಅವರು ಶೃಂಗೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿನ ಪೊಟೋಗಳನ್ನು ದೂರಿನ ಜತೆಗೆ ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಕ್ರಿಮಿನಲ್ ಬೆದರಿಕೆ ಹುಟ್ಟಿಸುವ ಅಪರಾಧ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 506ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ: ಸಚಿವ ಅಶೋಕ್ ..
ಆರೋಪ ಏನು?: ಜ.20 ರಂದು ಗಂಗಾಧರ್ ಅವರು ಚೆಲುವರಾಜು ಅವರ ಖಾಸಗಿ ಮೊಬೈಲ್‌ಗೆ ಕಂದಾಯ ಸಚಿವ ಆರ್. ಅಶೋಕ ಅವರ ಶೃಂಗೇರಿ ಪ್ರವಾಸದ ವೇಳಾಪಟ್ಟಿಹಾಕಿದ್ದರು. 24ರಂದು ಬೆಳಗ್ಗೆ 10ಕ್ಕೆ ಗಂಗಾಧರ್ ಅವರು ಚೆಲುವರಾಜು ಅವರಿಗೆ ಕರೆ ಮಾಡಿ ಸಂಜೆ ಸಚಿವರು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ಬರುತ್ತಾರೆ, ಆಗ ಬಂದು ಭೇಟಿ ಮಾಡುವಂತೆ ತಿಳಿಸಿದ್ದಾರೆ. ಅದೇ ದಿನ ಸಂಜೆ 7 ಗಂಟೆ ವೇಳೆಗೆ ಸಮುದಾಯ ಭವನಕ್ಕೆ ಹೋಗಿದ್ದಾಗ ಗಂಗಾಧರ್ ಹಣಕ್ಕೆ ಭೇಟಿ ಇಟ್ಟಿದ್ದು, ಆಗ ನಾನು ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ಇಲ್ಲವೆಂದು ಸ್ಥಳದಲ್ಲೇ ತಿಳಿಸಿದ್ದೇನೆ. ಇದಕ್ಕೆ ಒಪ್ಪದ ಅವರು ನನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ರಕ್ಷಣೆ ನೀಡುವಂತೆ ಚೆಲುವರಾಜು ಅವರು ದೂರಿನಲ್ಲಿ ಕೋರಿದ್ದಾರೆ.
ದುಡ್ಡುಕೇಳೋ ಸ್ಥಿತಿ ಬಂದಿಲ್ಲ-ಸಿ.ಟಿ.ರವಿ: ಈ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಬ್‌ರಿಜಿಸ್ಟಾರ್‌ಗಳಿಂದ ಹಣಕೇಳುವ ಪರಿಸ್ಥಿತಿ ಆರ್.ಅಶೋಕಗೆ ಬಂದಿಲ್ಲ ಎಂದಿದ್ದಾರೆ. ಅಶೋಕ ಅವರ ಆಪ್ತ ಕಾರ್ಯದರ್ಶಿ ಆ ಕೆಲಸ ಮಾಡಿದ್ದರೆ ಅವರನ್ನು ಕೆಲಸದಲ್ಲಿ ಇಟ್ಟುಕೊಳ್ಳುವುದಿಲ್ಲ. ನನಗಿರೋ ಮಾಹಿತಿ ಪ್ರಕಾರ ಆಪ್ತಕಾರ್ಯದರ್ಶಿಯನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.