ರಾಯಚೂರು: ಗೃಹಲಕ್ಷ್ಮಿ ಅರ್ಜಿ ಹಾಕಲು ಬಡವರಿಂದ ಹಣ ವಸೂಲಿ, ಒಂದೊಂದು ಕೇಂದ್ರದಲ್ಲಿ ಒಂದೊಂದು ರೇಟ್..!
ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿ ಮತ್ತು ಮಾಲೀಕರು ಬಡಜನರಿಂದ ಅರ್ಜಿ ಹಾಕುವ ನೆಪದಲ್ಲಿ ಹಣ ವಸೂಲಿ ದಂಧೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬಡ ಜನರಿಂದ ಅರ್ಜಿ ಹಾಕಿ ಒಬ್ಬರಿಂದ 100 ಮತ್ತು 200 ರೂ. ವಸೂಲಿ ಮಾಡುತ್ತಿದ್ದಾರೆ. ಇಷ್ಟು ನಡೆದರೂ ಅಧಿಕಾರಿಗಳು ಮಾತ್ರ ಕೇರ್ ಮಾಡುತ್ತಿಲ್ಲ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಜು.27): ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ನಾಲ್ಕನೇ ಗ್ಯಾರಂಟಿ ಆದ ಗೃಹಲಕ್ಷ್ಮಿ ಯೋಜನೆಗೆ ರಾಯಚೂರಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಹಾಕಲು ಜನರು ಮುಗಿಬೀಳುತ್ತಿದ್ದಾರೆ. ಅರ್ಜಿ ಹಾಕಲು ಸರ್ಕಾರ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಆದ್ರೂ ಜನರು ಮಾತ್ರ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ನಾನಾ ಕಸರತ್ತು ಶುರು ಮಾಡಿದ್ದಾರೆ.
ಸರ್ಕಾರದಿಂದ ಹಣ ಸಿಗುತ್ತೆ ಅಂತ ಜನರು ಮನೆಯಲ್ಲಿ ಇದ್ದ ಬಿದ್ದ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಹೋಗಿ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದೇ ಬಂಡವಾಳ ಮಾಡಿಕೊಂಡ ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿ ಮತ್ತು ಮಾಲೀಕರು ಬಡಜನರಿಂದ ಅರ್ಜಿ ಹಾಕುವ ನೆಪದಲ್ಲಿ ಹಣ ವಸೂಲಿ ದಂಧೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬಡ ಜನರಿಂದ ಅರ್ಜಿ ಹಾಕಿ ಒಬ್ಬರಿಂದ 100 ಮತ್ತು 200 ರೂ. ವಸೂಲಿ ಮಾಡುತ್ತಿದ್ದಾರೆ. ಇಷ್ಟು ನಡೆದರೂ ಅಧಿಕಾರಿಗಳು ಮಾತ್ರ ಕೇರ್ ಮಾಡುತ್ತಿಲ್ಲ.
ರಾಯಚೂರು: ಕೃಷ್ಣ ನದಿ ದಡದಲ್ಲಿ ಮೊಸಳೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು!
ಗೃಹಲಕ್ಷ್ಮಿ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು:
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಅರ್ಜಿ ಹಾಕಲು ಕೇವಲ ಕೆಲ ದಾಖಲೆಗಳು ಇದ್ರೆ ಸಾಕು..ಅದರಲ್ಲಿ ಮುಖ್ಯವಾಗಿ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇದ್ರೆ ಸಾಕು. ಮೊದಲಿಗೆ ಅರ್ಜಿ ಹಾಕಲು ಹೋದಾಗ ನಿಮಗೆ ಬಂದಿರುವ ಮೆಸೇಜ್ ತೋರಿಸಬಹುದು. ಇಲ್ಲ ಮೆಸೇಜ್ ಬರದೇ ಇದ್ರೆ ರೇಷನ್ ಕಾರ್ಡ್ ನಂಬರ್ ತಿಳಿಸಬೇಕು. ಆ ಬಳಿಕ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬರುತ್ತೆ..ಆ ಒಟಿಪಿ ತಿಳಿಸಿದ ಬಳಿಕ ಆಧಾರ್ ಕಾರ್ಡ್ ನಂಬರ್ ತಿಳಿಸಬೇಕು. ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಗೆ ಮತ್ತೊಂದು ಒಟಿಪಿ ಬರುತ್ತೆ ಅದನ್ನ ಹೇಳಿದ್ರೆ..ನಿಮ್ಮ ಅರ್ಜಿ ಪರಿಪೂರ್ಣವಾಗಿ ನಿಮ್ಮ ಕೈಗೆ ಮಂಜೂರಾತಿ ಪತ್ರ ಬರುತ್ತೆ..ಈ ಪ್ರಕ್ರಿಯೆ ಮಾಡಲು ಸರ್ಕಾರ ಸರ್ಕಾರದ ಐಡಿ ಹೊಂದಿರುವ ವಿವಿಧ ಕೇಂದ್ರಗಳಿಗೆ ಅರ್ಜಿ ಹಾಕಲು 10ರೂಪಾಯಿ, ಪ್ರಿಂಟ್ ನೀಡಲು 2 ರೂ. ನಿಗದಿ ಮಾಡಿದೆ. ಒಟ್ಟು ಒಂದು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಹಾಕಲು 12ರೂ. ಸರ್ಕಾರ ನೀಡುತ್ತಿದೆ.
ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ನಡೆದಿದ್ದು ಏನು?
ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮನೆಯ ಯಜಮಾನಿಗೆ 2000ರೂ. ನೀಡುವ ಘೋಷಣೆ ಮಾಡಿದ್ರು. ಘೋಷಣೆ ಅಂತ ಸರ್ಕಾರ ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಬಡ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸರ್ಕಾರವೇ ಫಲಾನುಭವಿಗಳ ದಾಖಲೆಗಳು ಸಂಗ್ರಹಿಸಿ ಅರ್ಜಿ ಹಾಕಲು ದಿನಾಂಕ ನಿಗದಿ ಮಾಡಿ ಫಲಾನುಭವಿಗಳ ಮೊಬೈಲ್ ನಂಬರ್ ಗೆ ಯಾವ ಕೇಂದ್ರದಲ್ಲಿ ಅರ್ಜಿ ಹಾಕಬೇಕು. ಯಾವ ಸಮಯಕ್ಕೆ ಅರ್ಜಿ ಹಾಕಲು ತೆರಳಬೇಕು ಎಂಬ ಮಾಹಿತಿ ಇರುವ ಮೆಸೇಜ್ ಹಾಕುತ್ತಿದ್ದಾರೆ. ಈ ಮೆಸೇಜ್ ಗಳಂತೆ ಫಲಾನುಭವಿಗಳು ಗ್ರಾಮ ಒನ್ ಮತ್ತು ಕರ್ನಾಟಕ ಒನ್, ಇಲ್ಲವೆ ಬೆಂಗಳೂರು ಒನ್ ಹೀಗೆ ಸರ್ಕಾರದಿಂದ ಐಡಿ ಹೊಂದಿರುವ ಕೇಂದ್ರಗಳ ವಿಳಾಸ ನೀಡಿ ಮೆಸೇಜ್ ರವಾನಿಸಲಾಗುತ್ತಿದೆ. ಕೇವಲ ಮೆಸೇಜ್ ಬಂದ ಫಲಾನುಭವಿಗಳು ಆ ಕೇಂದ್ರಕ್ಕೆ ತೆರಳಿ ಅರ್ಜಿ ಹಾಕಬೇಕು ಇದು ನಿಯಮ. ಆದ್ರೆ ಫಲಾನುಭವಿಗಳ ಜೊತೆಗೆ ಮೆಸೇಜ್ ಬರದೇ ಇರುವವರು ಸಹ ಅರ್ಜಿ ಹಾಕಲು ತೆರಳುತ್ತಿದ್ದಾರೆ. ಹೀಗಾಗಿ ಜನರು ಗೃಹಲಕ್ಷ್ಮಿ ಅರ್ಜಿ ಹಾಕಲು ಜನರು ಹೈರಾಣು ಆಗುತ್ತಿದ್ದಾರೆ.
ಸರ್ಕಾರ ಫ್ರೀ ಅಂತ ಹೇಳಿದ್ರು ಹಣ ವಸೂಲಿ
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲ ಎಂಬ ಗಾದೆಯಂತೆ ಆಗಿದೆ ಜನರ ಪಾಡು. ಸರ್ಕಾರ ಬಡ ಜನರಿಗೆ ಅನುಕೂಲವಾಗಲಿವೆಂದು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ 2 ಸಾವಿರ ರೂ. ಮನೆಯ ಯಜಮಾನಿಗೆ ನೀಡಲು ಪ್ಲಾನ್ ಮಾಡಿದೆ. ಗೃಹಲಕ್ಷ್ಮಿ ಯೋಜನೆ ಬಡ ಮತ್ತು ಜನಸಾಮಾನ್ಯರಿಗೆ ಮುಟ್ಟಿಸಬೇಕು. ಯಾವುದೇ ನಯಾಪೈಸಯಿಲ್ಲದೆ ಜನರು ಸರ್ಕಾರದ ಲಾಭ ಪಡೆಯಬೇಕು ಎಂಬುವುದು ಸರ್ಕಾರದ ಉದ್ದೇಶ. ಆದ್ರೆ ರಾಯಚೂರು ಜಿಲ್ಲೆಯಲ್ಲಿ ಇದೇ ಬಂಡವಾಳ ಮಾಡಿಕೊಂಡು ಕೆಲ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳು ಜನರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ. ಜನರು ಪ್ರಶ್ನೆ ಮಾಡಿದ್ರೆ ಅವರ ಅರ್ಜಿಗಳು ಹಾಕದೇ ನಾನಾ ರೀತಿಯ ನೆಪ ಹೇಳಿ ಸೆಂಟರ್ ಗಳಿಂದ ಹೊರಗೆ ಕಳುಹಿಸುವ ಕೆಲಸ ನಡೆದಿದೆ. ಯಾರು ಹಣ ನೀಡುತ್ತಾರೋ ಅಂತವರ ಅರ್ಜಿಗಳನ್ನು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಹಾಕಲಾಗುತ್ತಿದೆ.
ಸರ್ವರ್ ನೆಪ ಹೇಳಿ ರೇಟ್ ಫಿಕ್ಸ್
ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಒಂದೊಂದು ಕೇಂದ್ರದಲ್ಲಿ ಒಂದೊಂದು ದರ ಫಿಕ್ಸ್ ಮಾಡಿದ್ದಾರೆ. ಈ ಮಾಹಿತಿ ತಿಳಿದ ಮಾನ್ವಿ ತಹಸೀಲ್ದಾರ್ ಮತ್ತು ಸಿರವಾರ ತಹಸೀಲ್ದಾರ್ ದಾಳಿ ಮಾಡಿ ಮೂರು ಕೇಂದ್ರಗಳಿಗೆ ಬೀಗ ಹಾಕಿಸಿದ್ರು. ಇನ್ನುಳಿದ ಬಹುತೇಕ ಕೇಂದ್ರದಲ್ಲಿ ರಾಜಾರೋಷವಾಗಿ 100, 150 ಮತ್ತು ಕೆಲ ಕೇಂದ್ರದಲ್ಲಿ 200ರೂಪಾಯಿವರೆಗೂ ಹಣ ವಸೂಲಿ ದಂಧೆ ನಡೆಯುತ್ತಿದೆ. ಈ ವಿಚಾರ ತಿಳಿದ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಜಿಲ್ಲೆಯ 8 ತಾಲೂಕಿನ ತಹಸೀಲ್ದಾರ್ ಗಳ ಜೊತೆಗೆ ವಿಶೇಷ ವಿಡಿಯೋ ಸಂವಾದ ನಡೆಸಿ ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ರು.
ಕರೆಂಟ್ ಬಿಲ್, ಇಂಟರ್ನೆಟ್ ನೆಪ ಹೇಳಿ ಹಣ ವಸೂಲಿ
ರಾಯಚೂರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಜನರು ಪರದಾಟ ನಡೆಸಿದ್ದಾರೆ. ಮಳೆ ನಡುವೆಯೂ ಜನರು ಕೆಲಸ ಕಾರ್ಯ ಬಿಟ್ಟು ಅರ್ಜಿ ಹಾಕಲು ಅಲೆಯುತ್ತಿದ್ದಾರೆ. ಆದ್ರೆ ಜನರ ಅಲೆದಾಟ ಕಂಡ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಸಿಬ್ಬಂದಿ ಮತ್ತು ಮಾಲೀಕರು ಭರ್ಜರಿ ಹಣ ವಸೂಲಿಗೆ ಇಳಿದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕ್ಕರ್..ಗೃಹಲಕ್ಷ್ಮಿ ಅರ್ಜಿ ಉಚಿತವಾಗಿ ಹಾಕಬೇಕು. ಜನರ ಬಳಿ ಯಾವುದೇ ರೀತಿಯಲ್ಲಿ ಹಣ ವಸೂಲಿ ಮಾಡಬಾರದು ಎಂದು ಹೇಳಿದರು. ರಾಯಚೂರಿನ ಬಹುತೇಕ ಕೇಂದ್ರದಲ್ಲಿ ಕರೆಂಟ್ ಬಿಲ್, ಇಂಟರ್ನೆಟ್ ನೆಪ ಹೇಳಿ ಗೃಹಲಕ್ಷ್ಮಿ ಅರ್ಜಿ ಹಾಕಿ ಬಡಜನರಿಂದ ಮನಬಂದಂತೆ ರೊಕ್ಕಾ ವಸೂಲಿ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿಕೆಗಳೇನು?
ರಾಯಚೂರು ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಹಣ ವಸೂಲಿ ಮಾಡುತ್ತಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತ್ತು. ಹೀಗಾಗಿ ಈ ವಿಚಾರ ತಿಳಿದ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಮತ್ತು ಇಒಗಳನ್ನ ಸಭೆ ಕರೆದು ಖಡಕ್ ಆಗಿ ಸೂಚನೆ ನೀಡಿದರು. ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಅರ್ಜಿ ಹಾಕಲು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಹಣ ವಸೂಲಿ ನಡೆದಿದೆ. ಕೂಡಲೇ ಗೃಹಲಕ್ಷ್ಮಿ ಅರ್ಜಿ ಉಚಿತವಾಗಿ ಹಾಕುತ್ತೇವೆ ಎಂಬ ಬೋರ್ಡ್ ಎಲ್ಲಾ ಕೇಂದ್ರದಲ್ಲಿ ನಾಳೆಯಿಂದ ಕಡ್ಡಾಯವಾಗಿ ಹಾಕಬೇಕು. ಗೃಹಲಕ್ಷ್ಮಿ ಅರ್ಜಿ ಉಚಿತ ಹಾಕುತ್ತೇವೆ ಎಂಬ ಬೋರ್ಡ್ ಜನರಿಗೆ ಕಾಣುವಂತೆ ಇರಬೇಕು. ಬೋರ್ಡ್ ಹಾಕಿಯೂ ಜನರ ಬಳಿ ಹಣ ವಸೂಲಿ ಮಾಡಿದ್ರೆ, ಆ ಕೇಂದ್ರದ ಐಡಿ ರದ್ದು ಕೂಡಲೇ ರದ್ದು ಮಾಡಬೇಕು. ಅಷ್ಟೇ ಅಲ್ಲದೇ ಜನರ ಬಳಿ ಹಣ ವಸೂಲಿ ಮಾಡಿದವರ ವಿರುದ್ಧ ಯಾವುದೇ ಮೀನಾಮೇಷ ಎಣಿಸದೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಬುಕ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
'ಇಂಡಿಯಾ' ಒಕ್ಕೂಟದಿಂದ ಮೋದಿಗೆ ನಡುಕ: ಜಗದೀಶ್ ಶೆಟ್ಟರ್
ಗೃಹಲಕ್ಷ್ಮಿ ಅರ್ಜಿ ಹಾಕಲು ಬಂದ ಹಿರಿಯ ಜೀವಿಗಳು ಪರದಾಟ
ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಜನರು ನಾ ಮುಂದು ತಾ ಮುಂದು ಅಂತ ದಾಖಲೆಗಳು ಹಿಡಿದುಕೊಂಡು ವಿವಿಧ ಕೇಂದ್ರಗಳಿಗೆ ಧಾವಿಸಿ ಬರುತ್ತಿದ್ದಾರೆ. ಮನೆಯ ಯಜಮಾನಿಗೆ ಈ ಹಣ ಬರುವುದರಿಂದ ವಯಸ್ಸಾದ ಅಜ್ಜ- ಅಜ್ಜಿಯವರು ಬೆಳ್ಳಂಬೆಳಗ್ಗೆ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಕ್ಯೂ ನಿಲ್ಲುತ್ತಿದ್ದಾರೆ. ಗಂಟೆಗಟ್ಟಲೆ ಕ್ಯೂ ನಿಂತು ಅರ್ಜಿ ಹಾಕುವ ಪರಿಸ್ಥಿತಿ ಬಂದು ನಿಂತಿದೆ.ಕೆಲ ಕಡೆಗಳಲ್ಲಿ ಅರ್ಜಿ ಹಾಕಲು ಕಿತ್ತಾಟ ಸಹ ನಡೆಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳು ಜಿಲ್ಲೆಯಲ್ಲಿ ಹೆಚ್ಚು ಮಾಡಬೇಕು ಎಂಬುವುದು ಜನರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆ ಅರ್ಜಿ ಹೆಸರಿನಲ್ಲಿ ಸರ್ಕಾರದ ಐಡಿ ಹೊಂದಿರುವ ಕೇಂದ್ರದವರು ಹಣ ಮಾಡುವ ದಂಧೆ ನಡೆಸಿದ್ದಾರೆ. ಇದಕ್ಕೆ ಕೆಲ ಸ್ಥಳೀಯ ಮಟ್ಟದ ಅಧಿಕಾರಿಗಳು ಸಹ ಸಾಥ್ ನೀಡುತ್ತಿದ್ದಾರೆ. ಸಾಥ್ ನೀಡುವ ಅಧಿಕಾರಿಗಳಿಗೆ ಮಟ್ಟಹಾಕಿ, ವಸೂಲಿ ಮಾಡುವ ಕೇಂದ್ರಗಳಿಗೆ ಬಿಸಿಮುಟ್ಟಿಸಿ, ಬಡ ಜನರಿಗೆ ಉಚಿತವಾಗಿ ಗೃಹಲಕ್ಷ್ಮಿ ಅರ್ಜಿ ಹಾಕುವಂತೆ ಜಿಲ್ಲಾಧಿಕಾರಿಗಳ ಮಾಡಬೇಕಾಗಿದೆ.