ಎ.ರಾಘವೇಂದ್ರ ಹೊಳ್ಳ

ಬೇಲೂರು [ಜ.20]:  ಬೇಲೂರು ತಾಲೂಕಿನಲ್ಲಿ ತನ್ನದೆ ಪ್ರಾಬಲ್ಯ ಹೊಂದಿರುವ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಮುಖಂಡರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿ ಹೊಗೆಯಾಡತೊಡಗಿದೆ ಎಂದು ಹೇಳಲಾಗುತ್ತಿದೆ.

ಹಿಂದಿನಿಂದಲೂ ಜೆಡಿಎಸ್‌ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದರೂ ಮುಖಂಡರ ಒಳ ಜಗಳ, ಮುಸುಕಿನ ಗುದ್ದಾಟದಿಂದ 2 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೈ.ಎನ್‌ ರುದ್ರೇಶ್‌ಗೌಡರು ಸತತವಾಗಿ ಆಯ್ಕೆಯಾಗಿದ್ದರು.

ಆದರೆ, ಕಳೆದ ಚುನಾವಣೆಯಲ್ಲಿ ಕೆ.ಎಸ್‌. ಲಿಂಗೇಶ್‌ ಸಜ್ಜನ ರಾಜಕಾರಣಿ ಎಂದು ಮತದಾರರು ಜೆಡಿಎಸ್‌ನಿಂದ ಆಯ್ಕೆ ಮಾಡಿದ್ದಾರೆ. ಲಿಂಗೇಶ್‌ ಶಾಸಕರಾದ ನಂತರ ಜೆಡಿಎಸ್‌ನಲ್ಲಿ ಬಾರಿ ಸಂಚಲನ ಮೂಡಿದೆ. ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡುತ್ತಾರೆ. 10 ವರ್ಷ ಜೆಡಿಎಸ್‌ ಶಾಸಕರಿಲ್ಲದೆ ಪರಿತಪಿಸುತ್ತಿದ್ದ ಜೆಡಿಎಸ್‌ ಮತ್ತೆ ಗಟ್ಟಿಯಾಗಿ ಸಂಘಟನೆ ಆಗುತ್ತಿದೆ ಎಂಬ ಆಶಾಭಾವನೆ ಉಂಟಾಗಿತ್ತು.

ಆದರೆ, ಯಥಾಸ್ಥಿತಿ ಸ್ಥೀರೋಭವ ಎನ್ನುವಂತೆ ಈಗಲೂ ಮುಖಂಡರ ನಡುವಿನ ವೈಮನಸ್ಸು, ಒಳಜಗಳ ಹಾಗೇ ಮುಂದುವರೆದಿದೆ. ಇದು ಹಿಂದಿನ ಚುನಾವಣೆಗಳ ಸೋಲಿನಿಂದ ಪಾಠ ಕಲಿತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಚುನಾವಣೆ ನಡೆದು ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಕಾರ್ಯಕರ್ತರ ಸಮಸ್ಯೆಗೆ ಮುಖಂಡರಾಗಲೀ, ಶಾಸಕರಾಗಲೀ ಸ್ಪಂದಿಸುತ್ತಿಲ್ಲ.

ಜಿಲ್ಲೆಯ ಪ್ರಭಾವಿ ನಾಯಕರಾದ ರೇವಣ್ಣ, ಪ್ರಜ್ವಲ್‌ ಬಂದಾಗ, ಚುನಾವಣಾ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮುಖಂಡರು ನಂತರ ಮಾಯವಾಗುತ್ತಾರೆ. ಗ್ರಾಮೀಣ ಭಾಗದ ಕಾರ್ಯಕರ್ತರ ತಮ್ಮ ಗೋಳನ್ನು ಯಾರ ಬಳಿ ನಿವೇದನೆ ಮಾಡಿಕೊಳ್ಳುವುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ, ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕುತ್ತಿದ್ದು, ಮೂಲ ಜೆಡಿಎಸ್‌ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಹಿರಿಯ ಜೆಡಿಎಸ್‌ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಮೀರ್ ಭಾಯ್ ಆಪರೇಷನ್ ಹಸ್ತ: ಜೆಡಿಎಸ್‌ಗೆ ಮರ್ಮಾಘಾತ..

ಈಚೆಗೆ ಪಕ್ಷದಲ್ಲಿ ಹಿರಿಯ ಮುಖಂಡರ ಮಾತಿಗೆ ಮನ್ನಣೆ ಇಲ್ಲದಂತಾಗಿದೆ. ಪಕ್ಷಕ್ಕಾಗಿ ಸಂಘಟನೆಗಾಗಿ 2 ದಶಕಕ್ಕೂ ಹೆಚ್ಚು ಕಾಲ ದುಡಿದವರಿಗೆ ಬೆಲೆ ಇಲ್ಲದಂತಾಗಿದೆ. ಇತರೆ ಪಕ್ಷದಿಂದ ಬಂದ ವಲಸಿಗರನ್ನು ಆದರಿಸಲಾಗುತ್ತಿದೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಯಕರ್ತರು ಕೇಳುವ ಸಣ್ಣಪುಟ್ಟಕೆಲಸವನ್ನು ನಾವು ಮಾಡಿಕೊಡಲಾಗುತ್ತಿಲ್ಲ. ಶಾಸಕರ ಗಮನಕ್ಕೆ ತಂದರೆ ಮಾಡೋಣ ಬಿಡಿ ಎಂದು ಹೇಳುತ್ತಾರೆ ಎಂದು ಜೆಡಿಎಸ್‌ ಹಿರಿಯ ಮುಖಂಡ, ಜಿಪಂ ಮಾಜಿ ಸದಸ್ಯ ಸಿ.ಎಸ್‌.ಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

'ಬಿಜೆಪಿಯಲ್ಲಿ ಸಿಗೋ ಗೌರವ ಬೇರೆಡೆ ಸಿಕ್ತಿದ್ರೆ ಪಕ್ಷ ಬಿಡ್ತಿರ್ಲಿಲ್ಲ'..!..
 
ಚುನಾವಣಾ ವೇಳೆ ಕಾರ್ಯಕರ್ತರಿಗೆ ನೀಡಿದ್ದ ಆಶ್ವಾಸನೆ ಪೂರೈಸಲಾಗದೇ ಕದ್ದು ತಿರುಗುವಂತಾಗಿದೆ. ಕೊಟ್ಟಿಗೆ, ಮನೆ, ವಿದ್ಯುತ್‌, ಕುಡಿವ ನೀರು ಮುಂತಾದವುಗಳಿಗೆ ನಮ್ಮನ್ನು ಜನ ಕೇಳುತ್ತಾರೆ. ಆದರೆ, ಪಕ್ಷದಲ್ಲಿ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ನಮ್ಮ ಗೋಳನ್ನು ಯಾರಿಗೆ ಹೇಳೋದು

- ಸಿ.ಎಸ್‌.ಪ್ರಕಾಶ್‌, ಜೆಡಿಎಸ್‌ ಹಿರಿಯ ಮುಖಂಡ

 ತೆನೆ ಕಾರ‍್ಯಕರ್ತರ ಕೈಗೆ ತೋ.ಚ.ಅ ಸಿಗುತ್ತಿಲ್ಲ

ತಾಲೂಕು ಜೆಡಿಎಸ್‌ ಅಧ್ಯಕ್ಷ ತೋ.ಚ ಅನಂತಸುಬ್ಬರಾಯರು, ತಮ್ಮ ಆಧಿಕಾರದ ಅವಧಿಯಲ್ಲಿ ವಿಧಾನಸಭೆ ಚುನಾವಣೆ ಸೇರಿದಂತೆ ಹಲವಾರು ಸ್ಥಳೀಯ ಚುನಾವಣೆಯಲ್ಲಿ ಸಾಕಷ್ಟುಯಶಸ್ಸು ಸಾಧಿಸಿದ್ದಾರೆ. ತಾಲೂಕಿನ ಜೆಡಿಎಸ್‌ ಕಾರ್ಯಕರ್ತರ ನಾಡಿ ಮಿಡಿತವನ್ನು ಬಲ್ಲವರಾಗಿದ್ದು ಒಡನಾಟ ಚೆನ್ನಾಗಿದೆ. ಆದರೆ, ವಿಧಾನಸಭೆ ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದ ಬಳಿಕ ಅವರೂ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಆಪ್ತರಾಗಿರುವ ಅವರು ಮುಖಂಡರ ಒಳ ಜಗಳ, ಕಾರ್ಯಕರ್ತರ ಅಸಮಾಧಾನ ಬಗೆಹರಿಸಲು ಮುಂದಾಗಲೀ ಎಂಬುದು ಅಭಿಮಾನಿಗಳ ಆಶಯವಾಗಿದೆ.

ರೇವಣ್ಣ, ಪ್ರಜ್ವಲ್‌ ಎದುರೇ ಆಕ್ರೋಶ

ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಯುವ ಜೆಡಿಎಸ್‌ ಕಾರ್ಯಕರ್ತರು ರೇವಣ್ಣ, ಪ್ರಜ್ವಲ್‌ ಎದುರೇ ತಮ್ಮ ಅಸಮಾಧಾನ ಹೊರಹಾಕಿ ಕಲವೇ ಮುಖಂಡರನ್ನು ನೀವು ಓಲೈಸುತ್ತಿದ್ದೀರಿ, ಪಕ್ಷಕ್ಕೆ ಬೆನ್ನೆಲುಬಾಗಿ ನಿಂತ ನಿಜವಾದ ಕಾರ್ಯರ್ತರು ನಿಮ್ಮ ಕಣ್ಣಿಗೆ ಕಾಣೂತ್ತಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಬೇಲೂರು ಕ್ಷೇತ್ರವನ್ನು ಹೆಚ್ಚಾಗಿ ಪ್ರೀತಿಸುವ ಸಂಸದ ಪ್ರಜ್ವಲ್‌ ರೇವಣ್ಣ ಯುವ ಕಾರ್ಯರ್ತರನ್ನು ಮತ್ತು ಹಿರಿಯ ಮುಖಂಡರನ್ನು ಗಣನೆಗೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಮುಂದಾಗಲಿ ಎಂಬುದು ಜೆಡಿಎಸ್‌ ಕಾರ್ಯರ್ತರ ಒತ್ತಾಸೆಯಾಗಿದೆ. ಇಲ್ಲದಿದ್ದರೇ, ಬಿಜೆಪಿ ಚಿಗುರಲು ಜೆಡಿಎಸ್‌ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎನುತ್ತಾರೆ ಜೆಡಿಎಸ್‌ ಕಾರ‍್ಯರ್ತರು.