ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ 2500 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಕೇಂದ್ರದಿಂದ ಅರಣ್ಯ ಭೂಮಿಗೆ ಅನುಮತಿ ಪಡೆಯುವ ನಿರೀಕ್ಷೆಯಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ಅಲ್ಲದೆ, ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ಅಗತ್ಯವಿರುವಷ್ಟು ಜಮೀನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ 2500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ರೈತರ ಖಾಸಗಿ ಜಮೀನು ಕೇವಲ 500 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ನಿರ್ವಹಣೆಗೆ ದೊಡ್ಡ ಅನುಕೂಲವಾಗಲಿದೆ. ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿಗೆ ಪರ್ಯಾಯವಾಗಿ ಜಮೀನು ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಬಜೆಟ್ ವೇಳೆಗೆ ಕೇಂದ್ರ ಸರ್ಕಾರದಿಂದ ಅರಣ್ಯ ಭೂಮಿಗೆ ಅನುಮತಿ ಪಡೆಯುವ ನಿರೀಕ್ಷೆಯಿದೆ ಎಂದರು.
ಯೋಜನೆ ಆರಂಭಿಸಲು ಸುಪ್ರೀಂ ಕೋರ್ಟ್ ಅನುಮತಿ
ನನ್ನ ಅವಧಿಯಲ್ಲಿ ಹೋರಾಟ ಮಾಡಿ, ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ಪ್ರಕರಣದಲ್ಲಿ ಯಶಸ್ಸು ಸಾಧಿಸಿದ್ದೇವೆ. ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈಗಾಗಲೇ ಜಿಲ್ಲಾಧಿಕಾರಿಗಳನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡುವ ಸಂಬಂಧ ಸಭೆ ನಡೆಸಲಾಗಿದೆ. ಪರ್ಯಾಯ ಭೂಮಿ ಗುರುತಿಸುವ ಕೆಲಸವೂ ನಡೆದಿದೆ. ಈಗಾಗಲೇ 2500 ಎಕರೆ ಗುರುತಿಸಿದ್ದು, ಇನ್ನೂ ಗುರುತಿಸಲಾಗುತ್ತಿದೆ ಎಂದರು.
ಯೋಜನೆಗೆ ಸಂಬಂಧಿಸಿದ ಅರಣ್ಯ ಭೂಮಿಗೆ ಪರ್ಯಾಯ ಜಮೀನು ನೀಡುವ ವಿವರಗಳನ್ನು ಅರಣ್ಯ ಇಲಾಖೆಯ ಪೋರ್ಟಲ್ ನಲ್ಲಿ ದಾಖಲಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಶೀಘ್ರ ಅನುಮತಿ ನೀಡಬೇಕು. ಅನುಮತಿ ದೊರೆತ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಮುಂದಿನ ಬಜೆಟ್ ವೇಳೆಗೆ ಕೇಂದ್ರದ ಅರಣ್ಯ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿ ನಾಯಕರೂ ರಾಜಕೀಯ ಬದಿಗಿಟ್ಟು ಸಹಕಾರ ನೀಡಬೇಕು. ಎಲ್ಲರೂ ಒಟ್ಟಾಗಿ ಹೋಗಿ ಯೋಜನೆಗೆ ಅನುಮತಿ ಪಡೆಯೋಣ ಎಂದು ಮನವಿ ಮಾಡಿದರು.
ಘಟಕಕ್ಕೆ ಬೇಕಾದಷ್ಟು ಜಮೀನು ಕೊಡಲು ಸಿದ್ಧ
ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ರಾಜ್ಯ ಸರ್ಕಾರ ಜಮೀನು ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿರುವ ಕುರಿತು ಕೇಳಿದಾಗ, ನಾವು ಈಗಾಗಲೇ 100 ಎಕರೆ ಜಮೀನು ನೀಡುವುದಾಗಿ ಹೇಳಿದ್ದೇವೆ. ಇನ್ನೂ ಹೆಚ್ಚಿನ ಜಮೀನು ಬೇಕೆಂದು ಕೇಳಿದ್ದಾರೆ. ಖಂಡಿತವಾಗಿಯೂ ಕೊಡುತ್ತೇವೆ. ಯಾರು ಬೇಡ ಎನ್ನುತ್ತಾರೆ? ಮೊದಲು ಅವರು ಕೆಲಸ ಆರಂಭಿಸಲಿ. ಆ ಬಳಿಕ ಎಷ್ಟು ಜಮೀನು ಬೇಕೋ ಅಷ್ಟನ್ನು ನೀಡುತ್ತೇವೆ ಎಂದರು.
ಈಗ 500 ಎಕರೆ ಭೂಮಿ ಕೇಳ್ತಿದ್ದಾರೆ!
ಮೊದಲು 100 ಎಕರೆ ಕೇಳಿದಾಗ ನೀಡಲು ಒಪ್ಪಿದ್ದೇವೆ. 500 ಎಕರೆ ಬೇಕೆಂದು ಕೇಳಿದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರದ ಕೊರತೆಯಿಲ್ಲ. ಅವರು ಒಳ್ಳೆಯ ಕೆಲಸ ಮಾಡಲಿ, ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ. ಕಳೆದ ಎರಡೂವರೆ-ಮೂರು ವರ್ಷಗಳಿಂದ ಅವರು ಈ ವಿಚಾರ ಪ್ರಸ್ತಾಪಿಸುತ್ತಲೇ ಇದ್ದಾರೆ ಎಂದರು.
ರೈತರಿಂದ ವಿರೋಧ ಸಾಧ್ಯತೆ
ಎಆರ್ಐಎ ಘಟಕಕ್ಕೆ ವಿವಾದಿತ ಜಮೀನು ನೀಡಲಾಗುತ್ತಿದೆ ಎಂದು ಕೇಳಿದಾಗ, ಯಾವ ಜಮೀನು ಬೇಕು ಎಂಬುದನ್ನು ಅವರೇ ತೋರಿಸಲಿ. ಯಾವ ಜಮೀನನ್ನು ಭೂಸ್ವಾಧೀನ ಮಾಡಬೇಕು ಎಂದು ಸೂಚಿಸುತ್ತಾರೋ ಅದನ್ನೇ ಸ್ವಾಧೀನಪಡಿಸಿಕೊಡಲು ಸಿದ್ಧರಿದ್ದೇವೆ. ಅವರು ತೋರಿಸಿದ ಜಮೀನನ್ನು ನೀಡಲು ನಮಗೆ ಅಭ್ಯಂತರವಿಲ್ಲ. ಆದರೆ, ಒಂದು ಕಡೆ ಭೂಸ್ವಾಧೀನಕ್ಕೆ ಹೋದಾಗ ರೈತರು ವಿರೋಧ ವ್ಯಕ್ತಪಡಿಸುವ ಪರಿಸ್ಥಿತಿಯೂ ಇದೆ. ಅದನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಪಷ್ಟಪಡಿಸಿದರು.






