ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಮಹೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಂಡು ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ಭರವಸೆ ನೀಡಿದರು. ಮೀನುಗಾರ ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಅವರು, ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರದ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಉಡುಪಿ:ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಐದನೇ ವರ್ಷದ ದಸರಾ ಮಹೋತ್ಸವ ಹಾಗೂ ಸಾರ್ವಜನಿಕ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡರು. ದೇವಸ್ಥಾನದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದ ಅವರು, ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮೋಗವೀರ ಕುಲಗುರು ಶ್ರೀ ಮಾಧವ ಮಂಗಲ ಗುರುಗಳ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ತುಳು ಭಾಷೆಯಲ್ಲಿ ಭಾಷಣ ಆರಂಭಿಸಿ ತಾಯಂದಿರ ಆಶೀರ್ವಾದ ಪಡೆದ ಸಿಎಂ ಸಭೆಯನ್ನುದ್ದೇಶಿಸಿ ಮಾತು ಆರಂಭಿಸುವಾಗ ತುಳು ಭಾಷೆಯಲ್ಲೇ ಶುಭಾಶಯ ಕೋರಿದ ಸಿಎಂ ಡಿ.ಕೆ.ಶಿವಕುಮಾರ್, ಕರಾವಳಿ ಜನರ ಮನಗೆದ್ದರು.
"ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಬಂದು ದೇವಿಯ ಆಶೀರ್ವಾದ ಪಡೆದಿದ್ದೆ. ಇಂದು ಈ ನಾಡಿನ ಪ್ರಜಾಸೇವಕನಾಗಿ, ಮುಖ್ಯಮಂತ್ರಿಯಾಗಿ ದೇವಿಯ ದರ್ಶನ ಪಡೆದಿದ್ದೇನೆ. 'ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ' ಎಂದು ಭಾವಿಸುತ್ತೇನೆ. ಬೃಹತ್ ಸಂಖ್ಯೆಯಲ್ಲಿ ನೆರೆದಿರುವ ತಾಯಂದಿರು ಹಾಗೂ ನವದುರ್ಗೆಯರ ಆಶೀರ್ವಾದ ಪಡೆಯುವ ಭಾಗ್ಯ ನನಗೆ ಸಿಕ್ಕಿದೆ. ಮಹಾಲಕ್ಷ್ಮಿ ಎಂದರೆ ಸಂಪತ್ತು, ಮಹಾಸರಸ್ವತಿ ಎಂದರೆ ಜ್ಞಾನ ಮತ್ತು ಮಹಾಕಾಳಿ ಎಂದರೆ ಶಕ್ತಿ. ಹೆಣ್ಣು ಕುಟುಂಬದ ಕಣ್ಣಿದ್ದಂತೆ. ನಾವು ಮಾತೃಭಾಷೆಗೆ ಪ್ರಾಧಾನ್ಯತೆ ಕೊಟ್ಟವರೇ ಹೊರತು ತಂದೆಯ ಭಾಷೆಗಲ್ಲ," ಎಂದು ಅವರು ಹೇಳಿದರು.
ಮೀನುಗಾರ ಮಹಿಳೆಯರ ಬೇಡಿಕೆ ಮತ್ತು ಸರ್ಕಾರದ ನಿಲುವು
ನಾಡೋಜ ಡಾ. ಜಿ. ಶಂಕರ ಅವರ ನೇತೃತ್ವದಲ್ಲಿ ಮೀನುಗಾರ ಮಹಿಳೆಯರ ವಿವಿಧ ತೊಡಕುಗಳು, ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮೀನುಗಾರರ ಬೇಡಿಕೆಗಳನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮೀನುಗಾರ ಮಹಿಳೆಯರ ಸಮಸ್ಯೆಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾನು ಇಲ್ಲೇ ಯಾವುದೇ ಹೊಸ ಯೋಜನೆಗಳನ್ನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ನನ್ನ ಮೇಲೆ ಮತ್ತು ಸರ್ಕಾರದ ಮೇಲೆ ನಂಬಿಕೆ ಇಡಿ, ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಎಲ್ಲಾ ಗ್ಯಾರಂಟಿಗಳನ್ನು ನಾವು ಈಡೇರಿಸಿದ್ದೇವೆ ಎಂದು ಭರವಸೆ ನೀಡಿದರು.
ಕರಾವಳಿ ಮತ್ತು ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ
ಕರಾವಳಿ ಹಾಗೂ ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡುವ ಯೋಜನೆಗಳನ್ನು ಪ್ರಕಟಿಸಿದರು.
ವಿಶ್ವಮಟ್ಟದ ಟೂರಿಸಂ ಹಬ್: ಅಲೆಗಳಿಲ್ಲದಿದ್ದರೆ ಸಮುದ್ರಕ್ಕೆ ಬೆಲೆಯಿಲ್ಲ, ಕರಾವಳಿಯಿಲ್ಲದಿದ್ದರೆ ಕರ್ನಾಟಕ ರಾಜ್ಯಕ್ಕೇ ಬೆಲೆಯಿಲ್ಲ. ಕರಾವಳಿಯ ತೀರ ಪ್ರದೇಶಗಳನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಶೀಘ್ರದಲ್ಲೇ ಮಂಗಳೂರಿನಲ್ಲಿ ಈ ಕುರಿತು ವಿಶೇಷ ಸಭೆ ನಡೆಸಲಾಗುವುದು.
ಕರಾವಳಿಯ ಯುವಜನತೆ ಉದ್ಯೋಗ ಅರಸಿ ಹೊರನಾಡು ಹಾಗೂ ಹೊರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಪ್ರವಾಸೋದ್ಯಮ ಕ್ಷೇತ್ರದಿಂದ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಲಾಗುವುದು. ದಸರಾ ಎನ್ನುವುದು ಕೇವಲ ಹಬ್ಬವಲ್ಲ, ಅದು ಆರ್ಥಿಕತೆಯ ಚಕ್ರ.
ಕರಾವಳಿಯ ಸಾಂಪ್ರದಾಯಿಕ ಮರ ಮತ್ತು ಚಿನ್ನದ ಕೆತ್ತನೆ ಕಲೆಯನ್ನು ಉಳಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಕಾರ್ಕಳದಲ್ಲಿ ವಿಶೇಷ ಪಾರ್ಕ್ ನಿರ್ಮಾಣ ಮಾಡುವ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಕಸ್ತೂರಿರಂಗನ್ ವರದಿ ಮತ್ತು ಕೇಂದ್ರಕ್ಕೆ ರಾಜ್ಯದ ವಿರೋಧ
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಕಸ್ತೂರಿರಂಗನ್ ವರದಿಯ ಕುರಿತು ಸ್ಪಷ್ಟನೆ ನೀಡಿದ ಅವರು, ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರವು ಅತ್ಯಂತ ದಿಟ್ಟ ಹಾಗೂ ಸ್ಪಷ್ಟ ತೀರ್ಮಾನ ತಳೆದಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆಯಾಗುವ ಈ ವರದಿಯನ್ನು ಜಾರಿಗೊಳಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರದ ಪರವಾಗಿ ಪ್ರಬಲ ವಿರೋಧವನ್ನು ದಾಖಲಿಸಿದ್ದೇವೆ ಎಂದು ತಿಳಿಸಿದರು.
ಅಂತಿಮವಾಗಿ, ಜಾತಿ-ಧರ್ಮಗಳ ಭೇದಭಾವ ಮರೆತು ಮಾನವೀಯತೆಯ ಧರ್ಮವನ್ನು ಎತ್ತಿಹಿಡಿಯುವಂತೆ ಕರೆ ನೀಡಿದ ಮುಖ್ಯಮಂತ್ರಿಗಳು, ಉಡುಪಿಯ ದಸರಾ ಮಹೋತ್ಸವವು ಇಡೀ ನಾಡಿಗೆ ಸಮೃದ್ಧಿ ಹಾಗೂ ಶಾಂತಿಯನ್ನು ತರಲಿ ಎಂದು ಹಾರೈಸಿದರು.


