- Home
- Karnataka Districts
- Renukaswamy Family: ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಕುಟುಂಬದಲ್ಲಿ ಮತ್ತೊಂದು ಸೂತಕ!
Renukaswamy Family: ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಕುಟುಂಬದಲ್ಲಿ ಮತ್ತೊಂದು ಸೂತಕ!
ನಟ ದರ್ಶನ್ ಗ್ಯಾಂಗ್‌ನಿಂದ (Darshan Gang) ಹತ್ಯೆಯಾದ ರೇಣುಕಾಸ್ವಾಮಿ (Renukaswamy) ಕುಟುಂಬದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೊಮ್ಮಗನ ಸಾವಿನ ನೋವಿನಿಂದ ಬಳಲುತ್ತಿದ್ದ ಶತಾಯುಷಿ ಅಜ್ಜಿ ಪ್ರಮೀಳಾದೇವಿ (100) ವಿಧಿವಶರಾಗಿದ್ದಾರೆ. ಈಗಾಗಲೇ ದುಃಖದಲ್ಲಿರುವ ಕುಟುಂಬದಲ್ಲಿ ಮತ್ತೆ ಶೋಕ ಆವರಿಸಿದೆ.

ಚಿತ್ರದುರ್ಗ (ಜೂ.17): ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಬರ್ಬರವಾಗಿ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬದಲ್ಲಿ ಮತ್ತೊಂದು ಶೋಕದ ಛಾಯೆ ಆವರಿಸಿದೆ. ರೇಣುಕಾಸ್ವಾಮಿ ಅವರ ಅಜ್ಜಿ, ಶತಾಯುಷಿ ಪ್ರಮೀಳಾದೇವಿ (100) ಅವರು ಇಂದು ವಿಧಿವಶರಾಗಿದ್ದಾರೆ. ಮೊಮ್ಮಗನ ಅಕಾಲಿಕ ಹಾಗೂ ಕ್ರೂರ ಸಾವಿನ ನೋವಿನಿಂದ ಅವರು ತೀವ್ರವಾಗಿ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗಾಯದ ಮೇಲೆ ಬರೆ:
ರೇಣುಕಾಸ್ವಾಮಿ ಕೊಲೆಯಾದ ನಂತರ ಆತನ ತಂದೆ-ತಾಯಿ ಮತ್ತು ಪತ್ನಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಮಧ್ಯೆ ಮನೆಯ ಹಿರಿಯ ಜೀವವಾಗಿದ್ದ ಪ್ರಮೀಳಾದೇವಿಯವರು ವಯೋಸಹಜ ಅನಾರೋಗ್ಯದ ಜೊತೆಗೆ ಮೊಮ್ಮಗನ ಸಾವಿನಿಂದ ಮಾನಸಿಕವಾಗಿ ಕುಗ್ಗಿದ್ದರು. ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಅಂತಿಮ ಸಂಸ್ಕಾರದ ವಿವರ:
ಪ್ರಮೀಳಾದೇವಿಯವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಚಿತ್ರದುರ್ಗದ ಅವರ ನಿವಾಸದ ಬಳಿ ಇಂದು ಮಧ್ಯಾಹ್ನ 4 ಗಂಟೆಯವರೆಗೆ ಇರಿಸಲಾಗುತ್ತದೆ. ತದನಂತರ ಜೋಗಿಮಟ್ಟಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ನೆರವೇರಲಿವೆ. ಮೃತರು ರೇಣುಕಾಸ್ವಾಮಿಯ ತಂದೆ ಶಿವನಗೌಡ ಸೇರಿದಂತೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಒಂದೆಡೆ ಮಗನ ಸಾವಿನ ಆಘಾತದಿಂದ ಇನ್ನೂ ಹೊರಬರದ ಶಿವನಗೌಡ ಅವರಿಗೆ ಈಗ ತಾಯಿಯ ಅಗಲಿಕೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಈಗಾಗಲೇ ಕುಸಿದು ಹೋಗಿದ್ದು, ಇದೀಗ ಮತ್ತೊಂದು ಸಾವು ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಿದೆ.

