Women Empowerment Karnataka: ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ..
ಬೀದರ್ (ಜು.06): ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ, ಸಬಲೀಕರಣ ಮತ್ತು ರಾಜ್ಯದ ಮಹತ್ವಾಕಾಂಕ್ಷೆಯ ಅನುಭವ ಮಂಟಪ ಯೋಜನೆ ಕುರಿತು ಅವರು ಮಹತ್ವದ ಸಂದೇಶಗಳನ್ನು ನೀಡಿದರು.
'ಹೆಣ್ಣೇ ಸಮಾಜದ ಶಕ್ತಿ' ಎಂದ ಡಿಕೆಶಿ
ಅಕ್ಕಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮಹಿಳೆಯರೇ ಕುಟುಂಬ ಮತ್ತು ಸಮಾಜದ ಶಕ್ತಿ ಎಂದು ಬಣ್ಣಿಸಿದರು. "ಹೆಣ್ಣು ಕುಟುಂಬದ ಕಣ್ಣು. ಹೆಣ್ಣಿಲ್ಲದೆ ಕುಟುಂಬವೂ ಇಲ್ಲ, ಸಮಾಜವೂ ಇಲ್ಲ. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು ಮತ್ತು ಬೆಳಕು. ನಾರಿ ಶಕ್ತಿಯೇ ಈ ದೇಶದ ಶಕ್ತಿ" ಎಂದು ಹೇಳಿದರು. ರಾಜ್ಯ ಸರ್ಕಾರ ಮಹಿಳೆಯರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದು ಸರ್ಕಾರದ ಆಶಯ ಎಂದು ತಿಳಿಸಿದರು.
ಮಹಿಳೆಯರ ಸುರಕ್ಷತೆಗಾಗಿ ಆರಂಭವಾದ ಅಕ್ಕಪಡೆ ಇಂದು ರಾಜ್ಯಾದ್ಯಂತ ವಿಸ್ತರಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯವನ್ನು ಮೆಚ್ಚಿದ ಅವರು, ಅಕ್ಕಪಡೆ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಮಹಿಳಾ ಸಂಘಟನೆಗಳು ಬಲಿಷ್ಠವಾಗಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪಂಚಾಯಿತಿಯಿಂದ ಸಂಸತ್ತಿನವರೆಗೂ ಮಹಿಳೆಯರು ನಾಯಕತ್ವ ವಹಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ದೇಶದ ಐಕ್ಯತೆ, ಶಾಂತಿ ಮತ್ತು ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಬರ ಪರಿಸ್ಥಿತಿಯ ಪರಿಶೀಲನೆಗಾಗಿ ತಮ್ಮ ಪ್ರವಾಸವನ್ನು ಬಸವಕಲ್ಯಾಣದಿಂದಲೇ ಆರಂಭಿಸಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದರು.
₹742 ಕೋಟಿ ಅನುಭವ ಮಂಟಪ ಕಾಮಗಾರಿಗೆ ಪರಿಶೀಲನೆ
ಇದಾದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ₹742 ಕೋಟಿ ವೆಚ್ಚದ ನೂತನ ಅನುಭವ ಮಂಟಪ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯ ಪ್ರಗತಿ, ನಿರ್ಮಾಣದ ಗುಣಮಟ್ಟ ಹಾಗೂ ವಿವಿಧ ಹಂತಗಳ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದ ಅವರು, ಸ್ಥಳದಲ್ಲೇ ಸಭೆ ನಡೆಸಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಶರಣಪ್ರಕಾಶ್ ಪಾಟೀಲ್ ಕೂಡ ಈ ವೇಳೆ ಉಪಸ್ಥಿತರಿದ್ದು, ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಸವ ತತ್ವ, ವಚನ ಸಂಸ್ಕೃತಿ ಹಾಗೂ ಅನುಭವ ಮಂಟಪದ ಐತಿಹಾಸಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರತಿಷ್ಠಿತ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಯೋಜನೆಯಾಗಿ ರೂಪಿಸುತ್ತಿದ್ದು, ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಸರ್ಕಾರ ಒತ್ತು ನೀಡಿದೆ.


