ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಸಂಸ್ಥೆಯ 430 ಎಕರೆ ಭೂಮಿಯನ್ನು ಅರಣ್ಯ ಇಲಾಖೆ 'ಅರಣ್ಯ ಭೂಮಿ' ಎಂದು ಘೋಷಿಸಿದೆ. 15,000 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು 30 ದಿನಗಳಲ್ಲಿ ಹಸ್ತಾಂತರಿಸಲು ಆದೇಶಿಸಿದ್ದು, ಇಸ್ರೋ ಸೇರಿದಂತೆ ಇತರ ಸಂಸ್ಥೆಗಳಿಗೆ ಮಾಡಿದ ಭೂ ವರ್ಗಾವಣೆಯೂ ಮರುಪರಿಶೀಲನೆಗೆ ಒಳಪಡಲಿದೆ.

ಬೆಂಗಳೂರು (ಜು.6): ಬೆಂಗಳೂರಿನ ಜಾಲಹಳ್ಳಿ ಬಳಿ ಎಚ್‌ಎಂಟಿ ಲಿಮಿಟೆಡ್ (HMT Limited) ಸಂಸ್ಥೆಯ ಅಧೀನದಲ್ಲಿರುವ 430 ಎಕರೆ ಭೂಮಿಗೆ ಸಂಬಂಧಿಸಿದ ದೀರ್ಘಕಾಲದ ವಿವಾದದಲ್ಲಿ ರಾಜ್ಯ ಅರಣ್ಯ ಇಲಾಖೆ ಅತ್ಯಂತ ಮಹತ್ವದ ಆದೇಶ ನೀಡಿದೆ. ಅಂದಾಜು 15,000 ಕೋಟಿ ರೂಪಾಯಿ ಮೌಲ್ಯದ ಈ ಬೃಹತ್ ಆಸ್ತಿಯು ಕಾನೂನುಬದ್ಧವಾಗಿ ಇಂದಿಗೂ ‘ಅರಣ್ಯ ಭೂಮಿ’ಯಾಗಿಯೇ ಉಳಿದಿದೆ ಎಂದು ಅರಣ್ಯ ಇಲಾಖೆ ತೀರ್ಪು ನೀಡಿದ್ದು, ಮುಂದಿನ 30 ದಿನಗಳ ಒಳಗಾಗಿ ಸಂಪೂರ್ಣ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಎಚ್‌ಎಂಟಿ ಸಂಸ್ಥೆಗೆ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಎನ್. ರವೀಂದ್ರಕುಮಾರ್ ಅವರು ನೀಡಿರುವ ಈ ಆದೇಶವು ಭಾರಿ ಕಾನೂನು ಸಂಚಲನ ಮೂಡಿಸಿದೆ. ಈ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಸಿಎಫ್ ರವೀಂದ್ರಕುಮಾರ್ ಅವರು ನೀಡಿರುವ ತೀರ್ಪು ಕೇವಲ ಎಚ್‌ಎಂಟಿ ಸಂಸ್ಥೆಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಇದು ವ್ಯಾಪಕ ಪರಿಣಾಮಗಳನ್ನು ಬೀರಲಿದೆ. ಎಚ್‌ಎಂಟಿ ಸಂಸ್ಥೆಯು ತನ್ನ ಅಧೀನದಲ್ಲಿದ್ದ ಜಾಗದ ಪೈಕಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ರಾಮನ್ ಸಂಶೋಧನಾ ಸಂಸ್ಥೆ (RRI), ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಸೇರಿದಂತೆ ಇತರ ಹಲವು ಪ್ರಮುಖ ಸಂಸ್ಥೆಗಳಿಗೆ ಮಾಡಿರುವ ಭೂಮಿ ವರ್ಗಾವಣೆಯು ಚಾಲ್ತಿಯಲ್ಲಿರುವ ಅರಣ್ಯ ಕಾಯ್ದೆಗಳ ಅಡಿಯಲ್ಲಿ ‘ಮರು ಪರಿಶೀಲನೆಗೆ ಒಳಪಡುತ್ತದೆ’ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ತನಗೆ ಮಂಜೂರಾಗಿದ್ದ ಉದ್ದೇಶಕ್ಕೆ ಭೂಮಿ ಬಳಕೆಯಾಗದಿದ್ದಾಗ ಎಚ್‌ಎಂಟಿ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಿತ್ತು. ಆದರೆ ಸಂಸ್ಥೆಯು 170 ಕ್ಕೂ ಹೆಚ್ಚು ಎಕರೆ ಜಾಗವನ್ನು 44 ವಿಭಿನ್ನ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ನಿಯಮಬಾಹಿರವಾಗಿ ಪರಭಾರೆ ಮಾಡಿದೆ ಎಂದು ತೀರ್ಪಿನಲ್ಲಿ ಆಕ್ಷೇಪಿಸಲಾಗಿದೆ.

1901 ಮತ್ತು 1932 ರ ಮೈಸೂರು ಗೆಜೆಟ್ ಅಧಿಸೂಚನೆಗಳೇ ಬಲವಾದ ಸಾಕ್ಷಿ

ಈ ಇಡೀ ವಿವಾದವು ವಲಯ ಅರಣ್ಯಾಧಿಕಾರಿಗಳು (RFO) 2024 ರ ನವೆಂಬರ್ 4 ರಂದು ಎಚ್‌ಎಂಟಿ ಸಂಸ್ಥೆಗೆ ನೀಡಿದ್ದ ನೋಟಿಸ್‌ನಿಂದ ಆರಂಭವಾಗಿತ್ತು. ಈ ನೋಟಿಸ್ ಅನ್ನು ಎಚ್‌ಎಂಟಿ ಸಂಸ್ಥೆಯು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ‘ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಅರ್ಜಿದಾರರನ್ನು ಜಾಗದಿಂದ ತೆರವುಗೊಳಿಸಬಾರದು’ ಎಂದು ಆದೇಶಿಸಿ, ಅರಣ್ಯ ಇಲಾಖೆಗೆ ವಿಚಾರಣೆ ನಡೆಸಲು ಸೂಚಿಸಿತ್ತು.

ವಿಚಾರಣೆ ವೇಳೆ ಆರ್‌ಎಫ್‌ಒ ಅವರು ಬಲವಾದ ಐತಿಹಾಸಿಕ ದಾಖಲೆಗಳನ್ನು ಮಂಡಿಸಿದರು. ವಿವಾದಿತ ಪೀಣ್ಯ ಪ್ಲಾಂಟೇಷನ್‌ನ ಸರ್ವೆ ನಂಬರ್ 1 ಮತ್ತು 2 ಹಾಗೂ ಜಾರಕಬಂಡೆ ಶ್ರೀಗಂಧದ ಮೀಸಲು ಅರಣ್ಯದ ಸರ್ವೆ ನಂಬರ್ 18 ಮತ್ತು 19 ರ ಜಾಗಗಳು ಕಾಯ್ದಿಟ್ಟ ಅರಣ್ಯಗಳಾಗಿದ್ದು, ಪ್ರಸ್ತುತ ಎಚ್‌ಎಂಟಿ ಅಕ್ರಮ ಆಕ್ರಮಣದಲ್ಲಿದೆ ಎಂದು ವಾದಿಸಿದರು. ಇದಕ್ಕಾಗಿ ಅವರು, 1901ರ ಜನವರಿ 31ರಂದು ನೀಡಿದ್ದ ಗೆಜೆಟ್ ಅಧಿಸೂಚನೆಯನ್ನು ಸಾಕ್ಷಿಯಾಗಿಸಿದ್ದಾರೆ.. ಇದರನ್ವಯ 599 ಎಕರೆ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಅನ್ನು ‘ರಾಜ್ಯ ಅರಣ್ಯ’ ಎಂದು ಘೋಷಿಸಲಾಗಿತ್ತು. ಅದಲ್ಲದೆ, 1932 ಆಗಸ್ಟ್ 18ರ ಗೆಜೆಟ್ ಅಧಿಸೂಚನೆ ಪ್ರಕಾರ 444 ಎಕರೆ 12 ಗುಂಟೆ ಜಾಗವನ್ನು ‘ಜಾರಕಬಂಡೆ ಶ್ರೀಗಂಧದ ಮೀಸಲು ಅರಣ್ಯ’ ಎಂದು ಘೋಷಿಸಲಾಗಿತ್ತು ಎಂದಿದ್ದಾರೆ.

ಈ ಜಾಗಗಳನ್ನು ಕಾನೂನುಬದ್ಧವಾಗಿ ಅರಣ್ಯ ವ್ಯಾಪ್ತಿಯಿಂದ ಮುಕ್ತಗೊಳಿಸಿದ (De-notified/De-reserved) ಯಾವುದೇ ಅಧಿಕೃತ ಗೆಜೆಟ್ ದಾಖಲೆಗಳು ಲಭ್ಯವಿಲ್ಲದ ಕಾರಣ, ಇವು ಇಂದಿಗೂ ಅರಣ್ಯ ಭೂಮಿಯ ಸ್ವರೂಪವನ್ನೇ ಹೊಂದಿವೆ ಎಂದು ಆರ್‌ಎಫ್‌ಒ ವಾದಿಸಿದ್ದರು.

ಅಸಲಿ ದಾಖಲೆಗಳನ್ನು ಹಾಜರುಪಡಿಸಲು ವಿಫಲವಾದ ಎಚ್‌ಎಂಟಿ

ತನ್ನ ರಕ್ಷಣೆಗಾಗಿ ಎಚ್‌ಎಂಟಿ ಸಂಸ್ಥೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಕಾರ್ತಿಕ್ ಜಿ. ಮತ್ತು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಓಂ ಪ್ರಕಾಶ್ ಸಿಂಗ್ ಅವರು ಅಂದಿನ ಮೈಸೂರು ಸರ್ಕಾರ ಜಾಗವನ್ನು ಉಡುಗೊರೆಯಾಗಿ ನೀಡಿತ್ತು ಎಂದು ಹೇಳಿ ಎರಡು ಸರ್ಕಾರಿ ಆದೇಶಗಳು, ಒಂದು ಗಿಫ್ಟ್ ಡೀಡ್, ಎರಡು ಮಂಜೂರಾತಿ ಪತ್ರಗಳು ಮತ್ತು ಹಳೆಯ ಮ್ಯಾಪ್ ಅನ್ನು ಹಾಜರುಪಡಿಸಿದ್ದರು.

ಆದರೆ, ಕಾನೂನಿನ ಪ್ರಕಾರ ಕಾಯ್ದಿಟ್ಟ ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಬೇಕಾದರೆ 1900 ರ ಮೈಸೂರು ಅರಣ್ಯ ನಿಯಂತ್ರಣ ಕಾಯ್ದೆಯ ಸೆಕ್ಷನ್ 30, 1963 ರ ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 28 ಮತ್ತು 1980 ರ ನಂತರದ ಜಾಗಗಳಿಗೆ ಕೇಂದ್ರದ ಅರಣ್ಯ (ಸಂರಕ್ಷಣೆ) ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಕಟ್ಟುನಿಟ್ಟಾದ ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಎಚ್‌ಎಂಟಿ ಹಾಜರುಪಡಿಸಿದ 1965 ಮಾರ್ಚ್ 27ರ ಸರ್ಕಾರಿ ಆದೇಶ ಮತ್ತು 1963 ಆಗಸ್ಟ್ 12ರ ನೋಂದಾಯಿತ ಗಿಫ್ಟ್ ಡೀಡ್‌ಗಳು ಅರಣ್ಯ ಭೂಮಿಯನ್ನು ಬಿಟ್ಟುಕೊಡಲು ಮೂಲಭೂತ ಅಧಿಕಾರವನ್ನು ಹೊಂದಿಲ್ಲ ಹಾಗೂ ಸಂಸ್ಥೆಯು ಇದಕ್ಕೆ ಸಂಬಂಧಿಸಿದ ಯಾವುದೇ ಅಸಲಿ ಮೂಲ ದಾಖಲೆಗಳನ್ನು (Original Records) ವಿಚಾರಣೆ ವೇಳೆ ಹಾಜರುಪಡಿಸಿಲ್ಲ ಎಂದು ಡಿಸಿಎಫ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಒಮ್ಮೆ ಅರಣ್ಯವಾದರೆ ಅದು ಸದಾ ಅರಣ್ಯವೇ: ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖ

"ವಿಚಾರಣೆಯ ಸಮಯದಲ್ಲಿ, ಭೂಮಿಯನ್ನು ಕಾನೂನುಬದ್ಧವಾಗಿ ಬಿಡುಗಡೆ ಮಾಡಲಾದ ಮೂಲ ಸರ್ಕಾರಿ ಆದೇಶಗಳನ್ನು ಹಾಜರುಪಡಿಸಲು ಎಚ್‌ಎಂಟಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಮೂಲ ದಾಖಲೆಗಳ ಅನುಪಸ್ಥಿತಿಯೇ ಸಂಸ್ಥೆಗೆ ಮಾರಕವಾಗಿದೆ. ಯಾವುದೇ ಅರಣ್ಯ ಭೂಮಿಯನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡಿದ್ದರೆ, ಆ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸುವವರೆಗೆ ಅದು ಅರಣ್ಯವೇ ಆಗಿರುತ್ತದೆ. ಇದನ್ನು ಸಾಬೀತುಪಡಿಸುವ ಜವಾಬ್ದಾರಿ ಫಲಾನುಭವಿಯ ಮೇಲಿರುತ್ತದೆ," ಎಂದು ಡಿಸಿಎಫ್ ಸುಪ್ರೀಂ ಕೋರ್ಟ್‌ನ ಎರಡು ಪ್ರಮುಖ ತೀರ್ಪುಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ಜೊತೆಗೆ, ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಟಿ. ಗೋದವರ್ಮನ್ ತಿರುಮುಲ್ಪಾಡ್’ (T Godavarman Thirumulpad) ಪ್ರಕರಣದ ತೀರ್ಪನ್ನು ಉಲ್ಲೇಖಿಸಿರುವ ಅಧಿಕಾರಿಗಳು, "ಒಮ್ಮೆ ಅರಣ್ಯವೆಂದು ಘೋಷಿತವಾದ ಜಾಗವು ಸೂಕ್ತ ಡಿನೋಟಿಫಿಕೇಶನ್ ಆಗದ ಹೊರತು ಸದಾ ಅರಣ್ಯವಾಗಿಯೇ ಉಳಿಯುತ್ತದೆ. ಹೀಗಾಗಿ 1963 ರ ಗಿಫ್ಟ್ ಡೀಡ್ ಕೇವಲ ಒಂದು ಪ್ರಾಸಂಗಿಕ ಪತ್ರವಷ್ಟೇ ಹೊರತು, ಅದು ಅರಣ್ಯದ ಸ್ಥಾನಮಾನವನ್ನು ರದ್ದುಗೊಳಿಸಲು ಅಥವಾ ಮಾನ್ಯ ಭೂ ವರ್ಗಾವಣೆಯನ್ನು ಸ್ಥಾಪಿಸಲು ಕಾನೂನಾತ್ಮಕ ಆಧಾರವಾಗಲು ಸಾಧ್ಯವಿಲ್ಲ," ಎಂದು ತೀರ್ಪು ನೀಡಿದ್ದಾರೆ.

ಭೂಮಿ ಹಸ್ತಾಂತರಕ್ಕೆ 30 ದಿನಗಳ ಗಡುವು

ಯಾವ ಉದ್ದೇಶಕ್ಕಾಗಿ ಎಚ್‌ಎಂಟಿಗೆ ಅಂದು ಭೂಮಿಯನ್ನು ನೀಡಲಾಗಿತ್ತೋ ಆ ಉದ್ದೇಶ ಮುಗಿದ ಮೇಲೆ ಅದನ್ನು ರಾಜ್ಯ ಸರ್ಕಾರಕ್ಕೆ ಮರಳಿ ನೀಡಬೇಕಿತ್ತು. ಆದರೆ ದಾಖಲೆಗಳ ಪ್ರಕಾರ, 1996 ಮತ್ತು 2006 ರ ನಡುವೆ ಕಂಪನಿಯು ಸುಮಾರು 178 ಎಕರೆ 7.2 ಗುಂಟೆ ಅರಣ್ಯ ಭೂಮಿಯನ್ನು 44 ವಿವಿಧ ಮೂರನೇ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ, 2026 ಜೂನ್ 15ರ ದಿನಾಂಕದ ಈ ಸುದೀರ್ಘ ತೀರ್ಪಿನ ಅನ್ವಯ ಎಚ್‌ಎಂಟಿ ಸಂಸ್ಥೆಯು ತನ್ನ ಬಳಿ ಇರುವ ಒಟ್ಟು 430 ಎಕರೆ 21.853 ಗುಂಟೆ ಭೂಮಿಯನ್ನು ತಕ್ಷಣವೇ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಆದೇಶಿಸಲಾಗಿದೆ. ಆದರೆ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಎಚ್‌ಎಂಟಿಗೆ ಕನ್ಸರ್ವೇಟರ್ ಆಫ್ ಫಾರೆಸ್ಟ್ಸ್ (Conservator of Forests) ಅವರ ಮುಂದೆ 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.