ಯಾದಗಿರಿ(ಅ.5): ನೆರೆ ಪರಿಹಾರ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದ ಪ್ರತಿಪಕ್ಷಗಳಿಗೆ ಕೇಂದ್ರ ಸರ್ಕಾರ 1200 ಕೋಟಿ ರುಪಾಯಿ ತಾತ್ಕಾಲಿಕ ಪರಿಹಾರ ನೀಡುವ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪರಿಹಾರ ಕೇಳಲಾಗುವುದು. ಆದರೂ, ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಇಲ್ಲಸಲ್ಲದ ಟೀಕೆ, ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಮಾಡುತ್ತಿವೆ ಕಿಡಿಕಾರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರವಾಹ ಪರಿಸ್ಥಿತಿ ಪರಿಹಾರಕ್ಕೆ ಸಂಬಂಧಿಸಿ ಅನೇಕ ಬಾರಿ ಕೇಂದ್ರದೊಂದಿಗೆ ಚರ್ಚೆ ಮಾಡಿದ್ದೇನೆ. ಸಂತ್ರಸ್ತರಿಗಾಗಿ ಮೂರು ಹಂತದಲ್ಲಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ 2500 ಕೋಟಿ ಅಗತ್ಯ ಹಣ ಬಿಡುಗಡೆ ಮಾಡಿದೆ. ನೆರೆ ಹಾವಳಿಯಿಂದ 34 ಸಾವಿರ ಕೋಟಿ ಹಾನಿ ಅಂದಾಜಿಸಲಾಗಿದೆ. ಹಾನಿ ಪ್ರಮಾಣದ ಕುರಿತು ಇನ್ನಷ್ಟೇ ನಿಖರ ಮಾಹಿತಿ ದೊರಕಬೇಕಿದೆ. ಬೇರೆಡೆಗೆ ಹೋಲಿಸಿದರೆ ರಾಜ್ಯದಲ್ಲಿ ಹೆಚ್ಚು ಹಾನಿಯಾಗಿದೆ. ಹೀಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ಕೇಳಿದ್ದೇವೆ. ನಾವು ಕಳುಹಿಸಿರುವ ವರದಿಯಲ್ಲಿ ಕೆಲ ವ್ಯತ್ಯಾಸಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದನ್ನು ಸರಿಪಡಿಸಿ ಹೆಚ್ಚಿನ ಪರಿಹಾರ ತರಲಾಗುವುದು ಎಂದು ತಿಳಿಸಿದ್ದಾರೆ.

ಜತೆಗೆ, ಪ್ರಧಾನಿ ಮೋದಿ ನಮಗೆ ಭೇಟಿಗಾಗಿ ಅವಕಾಶ ಕೊಡುತ್ತಿಲ್ಲ ಎಂದು ಪ್ರತಿಪಕ್ಷದವರು ಟೀಕಿಸುತ್ತಿದ್ದಾರೆ. ಇದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಈಗಾಗಲೇ ಮಾಹಿತಿ ಪಡೆದಿದ್ದೇನೆ ಎಂದಿರುವ ಮುಖ್ಯಮಂತ್ರಿ, ಇದೇ ತಿಂಗಳು 10 ಹಾಗೂ 11 ರಂದು ಅಧಿವೇಶನ ಕರೆದು ಚರ್ಚಿಸಲಿದ್ದೇವೆ, ಬಜೆಟ್‌ನಲ್ಲೂ ಅತಿವೃಷ್ಟಿ ನಿರ್ವಹಣೆ ಕುರಿತು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.