ಭೋವಿ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 175 ಕೋಟಿ: ಸಿಎಂ ಬೊಮ್ಮಾಯಿ
ತುಮಕೂರು ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿ ಮಾತನಾಡಿ, ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ಘೋಷಿಸಿದರು.
ತುಮಕೂರು (ಆ.29): ಭೋವಿ ಸಮುದಾಯದ ಏಳಿಗೆಗಾಗಿ ಭೋವಿ ಅಭಿವೃದ್ಧಿ ನಿಗಮಕ್ಕೆ .175 ಕೋಟಿ ಅನುದಾನ ಕಲ್ಪಿಸಿ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಹೇಳಿದರು. ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಭೋವಿ ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತಹ ದಕ್ಷ ಅಧ್ಯಕ್ಷರನ್ನು ನಿಗಮಕ್ಕೆ ಇನ್ನೊಂದು ವಾರದೊಳಗಾಗಿ ನೇಮಕ ಮಾಡಲಾಗುವುದು.ದೇಶ, ನಾಡು ಕಟ್ಟುವಂತಹ ಕಾಯಕಯೋಗಿಗಳಾದ ಭೋವಿ ಸಮುದಾಯದೊಂದಿಗೆ ಸುಮಾರು 40 ವರ್ಷಗಳ ಒಡನಾಟವಿದೆ. ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಅವರ ಮಾತುಗಳಿಂದ ಸಾಮಾಜಿಕ ಬದಲಾವಣೆ ತರುವ ಪ್ರೇರಣೆ ಪಡೆದುಕೊಂಡಿದ್ದೇನೆ ಎಂದರು. ಭೋವಿ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಕುಲಗುರು ಮಹಾನ್ ಸಾಮಾಜಿಕ ಚಿಂತಕ ಶಿವಯೋಗಿ ಸಿದ್ಧರಾಮೇಶ್ವರರನ್ನು ಸ್ಮರಿಸಿದ ಅವರು, ಸಿದ್ಧರಾಮೇಶ್ವರರು ಪವಾಡ ಪುರುಷರೆನಿಸಿಕೊಂಡಿದ್ದರು. ಅವರಿಗೆ ಅನುಭವ ಮಂಟಪದಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿತ್ತು. ಬದುಕಿನಲ್ಲಿ ಕಷ್ಟಕಾರ್ಪಣ್ಯಗಳು ಸಹಜ. ಸವಾಲುಗಳಿಲ್ಲದ, ದುಡಿಮೆಯಿಲ್ಲದ ಬದುಕು ಬದುಕೇ ಅಲ್ಲ. ಮೈಮುರಿದು, ಬೆವರು ಸುರಿಸಿ ದುಡಿದಾಗ ಮಾತ್ರ ದೇವರಿಗೆ ಮೆಚ್ಚುಗೆಯಾಗುತ್ತದೆ ಎಂದು ಸಮಾಜಕ್ಕೆ ಸಾರಿದ ಸಿದ್ಧರಾಮೇಶ್ವರರ ಹಾದಿಯಲ್ಲಿ ಸಮುದಾಯ ಸಾಗಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗದ ಭೋವಿ ಸಮಾಜದಲ್ಲಿ ಹುಟ್ಟಿತನ್ನ ಜ್ಞಾನದ ಬಲದ ಮೇಲೆ ಪರಿಶ್ರಮದಿಂದ ಉನ್ನತ ಸ್ಥಾನ ಪಡೆದುಕೊಂಡಿರುವ ತಮ್ಮ ಪ್ರಧಾನ ಕಾರ್ಯದರ್ಶಿ ಮಂಜುನಾಥಪ್ರಸಾದ್‌ರನ್ನು ಭೋವಿ ಸಮುದಾಯದ ಯುವ ಜನಾಂಗ ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ರಾಜ್ಯದ ಕಟ್ಟಕಡೆಯ ವ್ಯಕ್ತಿಯ ಬದುಕು ಹಸನಾಗಬೇಕು. ಜೀವನದ ಗುಣಮಟ್ಟಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ಎಲ್ಲಾ ಸಮುದಾಯಗಳ ಸಹಕಾರವೂ ಸರ್ಕಾರದೊಂದಿಗಿರಬೇಕೆಂದು ಮನವಿ ಮಾಡಿದರು.
ನಮ್ಮ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕಾಗಿ ಕಟಿಬದ್ಧವಾಗಿದೆ. ಪರಿಶಿಷ್ಟರ ಶೈಕ್ಷಣಿಕ ಅಭಿವೃದ್ಧಿಗಾಗಿ ಬಹಳಷ್ಟುವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪರಿಶಿಷ್ಟಜಾತಿ/ಪಂಗಡದ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ 100 ಹೊಸ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ಸಂಕಲ್ಪಿಸಲಾಗಿದೆಯಲ್ಲದೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಸೇರಿದಂತೆ 5 ಜಿಲ್ಲೆಗಳಲ್ಲಿ 1000 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸಾಮರ್ಥ್ಯ ಇರುವಂತಹ ದೊಡ್ಡ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಸಮಾವೇಶದಲ್ಲಿ ಭೋವಿ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮಾತನಾಡುತ್ತಾ, ರಾಜ್ಯದ ಜನರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಚಿತ್ರದುರ್ಗದ ಭೋವಿ ಮಠಕ್ಕೆ 21 ಕೋಟಿ ರು..ಗಳ ಅನುದಾನಕ್ಕೆ ಅನುಮೋದನೆ ನೀಡಿದ್ದಾರೆ. ಸರ್ಕಾರದ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿರುತ್ತದೆ. ಇಂತಹ ಜವಾಬ್ದಾರಿಯನ್ನು ನನ್ನ ಮೇಲೆ ವಹಿಸಿರುವುದೇ ನನಗೆ ಪ್ರಶಸ್ತಿ ಲಭಿಸಿದಂತಾಗಿದೆ ಎಂದು ತಿಳಿಸಿದರು.
ಸಿಎಂ ನಡೆದಾಡುವ ದೇವರು: ಸಿದ್ದರಾಮೇಶ್ವರ ಶ್ರೀ ಮೆಚ್ಚುಗೆ
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆದಾಡುವ ದೇವರು’ ಎಂದು ಚಿತ್ರದುರ್ಗ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಡಿ ಹೊಗಳಿದ್ದಾರೆ.
ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಭೋವಿ ಸಮಾಜದ ಜಾಗೃತಿ ಸಮಾವೇಶದಲ್ಲಿ ಭಾನುವಾರ ಮಾತನಾಡಿದ ಸ್ವಾಮೀಜಿ, ಮಂಜುನಾಥ ಪ್ರಸಾದ್ ಅವರನ್ನು ತಮ್ಮ ಪ್ರದಾನ ಕಾರ್ಯದರ್ಶಿ ಆಗಿ ಮಾಡಿದ್ದು ಸಮಾಜಕ್ಕೆ ನೀಡಿದ ದೊಡ್ಡ ಗೌರವ. ಬೇರೆ ಬೇರೆ ಅಧಿಕಾರಿಗಳನ್ನು ನೇಮಿಸಿಕೊಳ್ಳುವಂತೆ ಒತ್ತಡ ಇತ್ತು. ಆದರೂ ಭೋವಿ ಜನಾಂಗಕ್ಕೆ ಅವರು ನ್ಯಾಯ ಕೊಟ್ಟಿದ್ದಾರೆ ಎಂದರು.
ಭೋವಿ ಶ್ರೀ ಸೇರಿ ಇಬ್ಬರು ಶಾಸಕರಿಗೆ ಕೊಲೆ ಬೆದರಿಕೆ ಸಂದೇಶ
ಬೊಮ್ಮಾಯಿ ಅವರ ಮಾತು ಕೃತಿ ನಡೆ ತಂದೆಯಂಥದ್ದು. ಆದರೆ ಅವರದು ತಾಯಿ ಹೃದಯ. ತಂದೆಯ ಕೋಪ, ತಾಯಿ ಹೃದಯ, ತಾಯಿ ವಾತ್ಸಲ್ಯ, ತಾಯಿಯ ಮಿಡಿತ ಎಲ್ಲವೂ ಬಸವರಾಜ ಬೊಮ್ಮಾಯಿಯಲ್ಲಿದೆ ಎಂದರು. ತಾಯಿ ತನ್ನ ಮಗುವನ್ನು ನೋಡಿಕೊಂಡಂತೆ ನಮ್ಮ ರಾಜ್ಯದಲ್ಲಿ ಇಂಥ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಇಂಥ ಮುಖ್ಯಮಂತ್ರಿ ನಮ್ಮ ಹೆಮ್ಮೆ ಎಂದರು.
ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರೋ ಮಹಾನ್ ಗುರುಗಳು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ
ಅಂಬೇಡ್ಕರರ ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಮುಖ್ಯಮಂತ್ರಿ ಎಂದರೆ ಅದು ಬಸವರಾಜು ಬೊಮ್ಮಾಯಿ. ಲಿಂಗಾಯತ ಸಮುದಾಯದವರು ಅಧಿಕಾರಕ್ಕೆ ಬಂದರೆ ಬೇರೆ ಸಮುದಾದ ಜನ ಮಾತನಾಡಿಸೋದು ಕಷ್ಟಎಂದು ಹೇಳುತ್ತಾರೆ. ಆದರೆ ಬೊಮ್ಮಾಯಿ ಅದಕ್ಕೆ ಅಪವಾದ. ಅವರ ಸಮುದಾಯಕ್ಕಿಂತ ಬೇರೆ ಸಮುದಾಯದವರು ಅವರಿಂದ ಹೆಚ್ಚಿಗೆ ಲಾಭ ಪಡೆದಿದ್ದಾರೆ ಎಂದರು.