ಬೆಂಗಳೂರು(ಮಾ.19): ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಈಗಾಗಲೇ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹೈಕೋರ್ಟ್‌, ಗುರುವಾರದಿಂದ (ಮಾ.19) ಹೈಕೋರ್ಟ್‌ನ ಮೂರು ಪೀಠಗಳು ಮತ್ತು ಬೆಂಗಳೂರು ನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲ ನ್ಯಾಯಾಲಯಗಳಿಗೆ ಕಕ್ಷೀದಾರರು ಪ್ರವೇಶಿಸುವುದನ್ನು ಸಂಪೂರ್ಣ ನಿರ್ಬಂಧ ಹೇರಿದೆ.

ಈ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ಆದೇಶದನ್ವಯ ರಿಜಿಸ್ಟ್ರಾರ್‌ ಜನರಲ್‌ ರಾಜೇಂದ್ರ ಬಾದಾಮಿಕರ್‌ ನೋಟಿಸ್‌ ಪ್ರಕಟಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ ಬೆಂಗಳೂರಿನ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ನ್ಯಾಯಪೀಠ, ಬೆಂಗಳೂರು ನಗರದಲ್ಲಿರುವ ಸಿಟಿ ಸಿವಿಲ್‌, ಜಿಲ್ಲಾ, ಎಸಿಎಂಎಂ, ಮೇಯೋಹಾಲ್‌, ಕೌಟುಂಬಿಕ, ಕಾರ್ಮಿಕ ನ್ಯಾಯಾಲಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳು (ನಗರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ) ಮತ್ತು ಕಲಬುರಗಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳು ಮತ್ತು ನ್ಯಾಯಾಧೀಕರಣಗಳ ಆವರಣದಲ್ಲಿ ಕಕ್ಷೀದಾರರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಮಡಿಕೇರಿ: ಮೆಡಿಕಲ್‌ಗಳಲ್ಲಿ ಮಾಸ್ಕ್ ಮಾರಾಟ ಸ್ಥಗಿತ

ಅಲ್ಲದೆ, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಅಧಿಕೃತ ಕಾರ್ಯಗಳ ನಿಮಿತ್ತ ಕೋರ್ಟ್‌ಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಒಂದೊಮ್ಮೆ ಕಕ್ಷೀದಾರರು ಕೋರ್ಟ್‌ಗೆ ಭೇಟಿ ನೀಡುವುದು ಅಗತ್ಯವಾದರೆ, ಅವರ ಪರ ವಕೀಲರು ತಮ್ಮ ಕಕ್ಷೀದಾರರು ಕೋರ್ಟ್‌ಗೆ ಹಾಜರಾಗುವುದು ಕಡ್ಡಾಯವಾಗಿದೆ ಎಂಬುದಾಗಿ ತಿಳಿಸಿ ಲೆಟರ್‌ಹೆಡ್‌ನಲ್ಲಿ ತಿಳಿಸಬೇಕು. ವಕೀಲರ ಸರ್ಟಿಫಿಕೆಟ್‌ನಲ್ಲಿ ಕಕ್ಷೀದಾರರಿಗೆ ಕೋರ್ಟ್‌ ಪ್ರವೇಶ ಮಾಡಲು ಅನುಮತಿ ನೀಡುವುದಕ್ಕೆ ಇರುವ ಕಾರಣಗಳನ್ನು ಸಂಕ್ಷಿಪ್ತವಾಗಿ ನಮೂದಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

Fact Check| ಜನ​ರಿಗೆ ಉಚಿ​ತ​ ಮಾಸ್ಕ್‌ ನೀಡಲು ಮೋದಿ ನಿರ್ಧಾ​ರ!

ಇನ್ನು ವಿಚಾರಣೆಗೆ ಹಾಜರಾಗಬೇಕಾದ ಮತ್ತು ಖುದ್ದು ವಾದ ಮಂಡನೆ ಮಾಡಲು ಬಯಸುವ ಕಕ್ಷೀದಾರರು, ಕೋರ್ಟ್‌ ಪ್ರವೇಶ ದ್ವಾರ ಮತ್ತು ತಪಾಸಣಾ ಸ್ಥಳಗಳಲ್ಲಿ ತಾವು ಯಾವ ನಿರ್ದಿಷ್ಟಪ್ರಕರಣ ಸಂಬಂಧ ಹಾಜರಾಗಬೇಕಿದೆ ಎಂಬುದರ ಕುರಿತು ಲಿಖಿತವಾಗಿ ಅರ್ಜಿ ಮತ್ತು ದಾಖಲೆ ಸಲ್ಲಿಸಬೇಕು. ಒಂದು ವೇಳೆ ಯಾವುದಾದರೂ ಕಕ್ಷೀದಾರ ಕೋರ್ಟ್‌ಗೆ ಪ್ರಕರಣ ದಾಖಲಿಸಲು, ಆಕ್ಷೇಪಣಾ ಪತ್ರ ಅಥವಾ ಅರ್ಜಿಗಳನ್ನು ಸಲ್ಲಿಸಬೇಕಾದರೆ, ಆ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಅರ್ಜಿ ಸ್ವರೂಪದಲ್ಲಿ ನೀಡಬೇಕು. ಆ ಅರ್ಜಿಗಳು ಪರಿಶೀಲನೆ ನಂತರ ಕೋರ್ಟ್‌ನ ಸಂಬಂಧಪಟ್ಟಅಧಿಕಾರಿಯು ಕಕ್ಷೀದಾರರಿಗೆ ಕೋರ್ಟ್‌ ಪ್ರವೇಶಾವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ತಪಾಸಣೆಗೆ ವಿದೇಶಿ ಪ್ರಜೆ ನಿರಾಕರಣೆ

ಹೈಕೋರ್ಟ್‌ ಪ್ರವೇಶೀಸಲು ಬಯಸಿದ ಆಸ್ಪ್ರೇಲಿಯಾದ ಮಹಿಳೆಯೊಬ್ಬರು ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಲು ನಿರಾಕರಿಸಿದ ಘಟನೆ ಬುಧವಾರ ನಡೆಯಿತು.

ಹೈಕೋರ್ಟ್‌ನ ಗೋಲ್ಡನ್‌ ಗೇಟ್‌ ಪ್ರವೇಶ ದ್ವಾರದ ಮೂಲಕ ಕೋರ್ಟ್‌ ಆವರಣ ಪ್ರವೇಶಿಸಲು ಆಸ್ಪ್ರೇಲಿಯಾದ ಮಹಿಳೆ ಮುಂದಾದರು. ಆಗ ಆಕೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲು ಮುಂದಾದರು. ಇದಕ್ಕೆ ಅಡ್ಡಿಪಡಿಸಿದ ಮಹಿಳೆ, ನನ್ನ ಅನುಮತಿ ಇಲ್ಲದೆ ನೀವು ಸ್ಕ್ರೀನಿಂಗ್‌ ಮಾಡುವಂತಿಲ್ಲ ಎಂದು ಆಕ್ಷೇಪಿಸಿದರು. ತಕ್ಷಣವೇ ಸ್ಥಳದಲ್ಲಿದ್ದ ಸಿಬ್ಬಂದಿಯು ಹಿರಿಯ ಪೊಲೀಸ್‌ ಅಧಿಕಾರಿ ಮತ್ತು ಹೈಕೋರ್ಟ್‌ ವಿಭಾಗದ ವೈದ್ಯರನ್ನು ಕರೆಯಿಸಿ ಮಹಿಳೆಗೆ ತಿಳಿ ಹೇಳಿ ಸ್ಥಳದಿಂದ ವಾಪಸು ಕಳುಹಿಸಿದರು.