ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ| ಎಸಿಬಿ, ಬಿಎಂಟಿಎಫ್‌ಗೆ ದೂರು| ಹೈಕೋರ್ಟ್ ಆದೇಶವನ್ನು ಪರಿಶೀಲಿಸಿ ಆಸ್ತಿ ವಶಕ್ಕೆ ಪಡೆಯಲು ಕ್ರಮವಹಿಸುತ್ತೇವೆ. ಜತೆಗೆ, ಸ್ಥಳೀಯ ಪಾಲಿಕೆ ಅಧಿಕಾರಿಗಳು ಈ ಕುರಿತು ಯಾವುದೇ ಅಕ್ರಮವೆಸಗಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ: ಆಯುಕ್ತ ಎನ್.ಮಂಜುನಾಥ್ ಪ್ರಸಾದ್|
ಬೆಂಗಳೂರು(ಸೆ.20): ನ್ಯಾಯಾಲಯ ಆದೇಶದಂತೆ ಬಿಬಿಎಂಪಿಗೆ ಸೇರಿದ ಆಸ್ತಿ ವಶಕ್ಕೆ ಪಡೆಯಲು ಮುಂದಾದ ಅಧಿಕಾರಿಗಳಿಗೆ ಶಾಸಕ ಜಮೀರ್ ಅಹ್ಮದ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಎಸಿಬಿ ಮತ್ತು ಬಿಎಂಟಿಎಫ್‌ಗೆ ದೂರು ನೀಡಿದ್ದಾರೆ.
"
ನಗರದ ಕಾಟನ್‌ಪೇಟೆಯಲ್ಲಿರುವ ಅಂದಾಜು 300 ಕೋಟಿ ಮೌಲ್ಯದ 1.19 ಲಕ್ಷ ಚದರ ಅಡಿ ಪೀರ್‌ಗ್ರೌಂಡನ್ನು ಬಿಬಿಎಂಪಿ ಆಸ್ತಿಯೆಂದು ಹೈಕೋರ್ಟ್ 2015ರಲ್ಲಿ ತೀರ್ಪು ನೀಡಿದೆ. ಜತೆಗೆ ಈ ಆಸ್ತಿಯನ್ನು ಕೂಡಲೇ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದು ಬೇಲಿ ನಿರ್ಮಿಸಿ ರಕ್ಷಿಸುವಂತೆ ನಿರ್ದೇಶನ ನೀಡಿದೆ. ಆದರೆ, ಆಸ್ತಿಯನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾದಾಗ ಶಾಸಕ ಜಮೀರ್ ಅಹ್ಮದ್ ಬೆದರಿಕೆ ಪತ್ರ ಬರೆದಿದ್ದಾರೆ. ಜತೆಗೆ, ರಾಜಕೀಯ ಪ್ರಭಾವ ಬಳಸಿಕೊಂಡು ತನ್ವೀರ್ ಅಹ್ಮದ್ ಎಂಬ ಪಾಲಿಕೆ ಅಧಿಕಾರಿಯೊಂದಿಗೆ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್.ರಮೇಶ್, ಕಾಟನ್‌ಪೇಟೆ ಪೀರ್‌ಗ್ರೌಂಡ್ ತಮ್ಮ ಮಾಲಿಕತ್ವಕ್ಕೆ ಸೇರಿದ್ದು ಎಂದು ಪೀರ್ ಸೂಫಿ ಸೈಯದ್ ಶಾ ಶಂಷುಲ ಹಕ್ ಎಂಬುವವರು 1982ರಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಮತ್ತು 2002ರಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಅಖಿಲ ಕರ್ನಾಟಕ ಭೋವಿ ಸಂಘದ ಆರ್.ವಿ.ಶ್ರೀನಿವಾಸ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಸದರಿ ಸ್ವತ್ತು ಪಾಲಿಕೆಗೆ ಸೇರಿದ್ದು, ತಕ್ಷಣ ಸುಪರ್ದಿಗೆ ಪಡೆಯಬೇಕು. ಜತೆಗೆ ಸ್ವತ್ತಿನ ಈಶಾನ್ಯ ಭಾಗದ 18,900 ಚ. ಅಡಿ ವಿಸ್ತೀರ್ಣವನ್ನು ಮುಸ್ಲಿಂ ಸ್ಮಶಾನ ಲಡಾಕ್ ಶಾ ವಾಲಿ ಮಸೀದಿಗೆ ಒಪ್ಪಿಸುವಂತೆ ಆದೇಶಿಸಿತ್ತು ಎಂದು ತಿಳಿಸಿದರು.
25 ಕೋಟಿ ಮೌಲ್ಯದ ಪಾಲಿಕೆ ಸ್ವತ್ತು ಕಬಳಿಕೆಗೆ ಸಂಚು: ದೂರು
ಈ ಆಸ್ತಿ ಕುರಿತು 2015ರ ವಿಧಾನಸಭಾ ಅಧಿವೇಶನದಲ್ಲಿ ಸಾಕಷ್ಟುಚರ್ಚೆಗಳು ನಡೆದಿದ್ದವು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಆಸ್ತಿಗೆ ಕೂಡಲೇ ಕಾಂಪೌಂಡ್ ನಿರ್ಮಿಸಿ, ಭದ್ರತಾ ವ್ಯವಸ್ಥೆಗೆ ಸಿಬ್ಬಂದಿ ನೇಮಿಸುವಂತೆ ಪಾಲಿಕೆಗೆ ಆದೇಶಿಸಿದ್ದರು. ಜತೆಗೆ ಸರ್ಕಾರಿ ಅಧಿಸೂಚನೆಯೂ ಪ್ರಕಟವಾಗಿದೆ. ಕಾಂಪೌಂಡ್ ನಿರ್ಮಾಣಕ್ಕೆ ಪಾಲಿಕೆ .49 ಲಕ್ಷಕ್ಕೆ ಜಗದೀಶ್ ಎಂಬುವರಿಗೆ ಟೆಂಡರ್ ನೀಡಲಾಗಿತ್ತು. ಆದರೆ, ಕಳೆದ ಐದು ವರ್ಷ ಕಾಂಪೌಂಡ್ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಪಾಲಿಕೆ ಆಸ್ತಿ ವಶಕ್ಕೆ ಪಡೆಯುವಂತೆ ಒತ್ತಾಯಿಸಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್), ಪಾಲಿಕೆ ಆಡಳಿತಾಧಿಕಾರಿ ಹಾಗೂ ಆಯುಕ್ತರಿಗೆ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಪರಿಶೀಲಿಸಿ ಆಸ್ತಿ ವಶಕ್ಕೆ ಪಡೆಯಲು ಕ್ರಮವಹಿಸುತ್ತೇವೆ. ಜತೆಗೆ, ಸ್ಥಳೀಯ ಪಾಲಿಕೆ ಅಧಿಕಾರಿಗಳು ಈ ಕುರಿತು ಯಾವುದೇ ಅಕ್ರಮವೆಸಗಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ.
