ಮೂಲಸೌಕರ್ಯ ಕಲ್ಪಿಸುವಂತೆ ಕೋರಿ ಬೆಂಗಳೂರು ಹೊರವರ್ತುಲ ರಸ್ತೆ ಕಂಪನಿಗಳ ಒಕ್ಕೂಟದಿಂದ ಸಿಎಂ ಬೊಮ್ಮಾಯಿಗೆ ಪತ್ರ

ಬೆಂಗಳೂರು(ಸೆ.04): ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಲ್ಪಕಾಲೀನ ಮತ್ತು ಮಧ್ಯಕಾಲೀನ ಯೋಜನೆಗಳನ್ನು ಜಾರಿಗೆ ತರದಿದ್ದರೆ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಬೆಂಗಳೂರಿನಿಂದ ಗುಳೆ ಹೋಗುವ ಸಾಧ್ಯತೆಯಿದೆ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಒಕ್ಕೂಟ (ಒಆರ್‌ಆರ್‌ಸಿಎ) ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಒಕ್ಕೂಟ, ಆಗಸ್ಟ್‌ 30ರಂದು ಸುರಿದ ಭಾರಿ ಮಳೆಯಿಂದಾಗಿ ಹೊರ ವರ್ತುಲ ರಸ್ತೆಯಲ್ಲಿರುವ ಕಂಪನಿಗಳಿಗೆ 225 ಕೋಟಿ ರು. ನಷ್ಟವಾಗಿದೆ. ಭಾರಿ ಮಳೆಯಿಂದಾಗಿ ಉದ್ಯೋಗಿಗಳು ಸುಮಾರು 5 ಗಂಟೆ ರಸ್ತೆಯಲ್ಲೇ ಕಳೆಯುವಂತಾಗಿತ್ತು. ಈ ಕಾರಿಡಾರ್‌ನಲ್ಲಿ ಕೆಲಸ ಮಾಡುವ ಕೇವಲ ಶೇ.30ರಷ್ಟು ಮಂದಿ ಮಾತ್ರ ವರ್ಕ್ ಫ್ರಮ್‌ ಹೋಮ್‌ನಿಂದ ಹಿಂತಿರುಗಿದ್ದು, ಈಗಲೇ ಇಂತಹ ಬಿಕ್ಕಟ್ಟು ಸೃಷ್ಟಿಯಾಗಿದೆ. ಮೂಲಭೂತ ಸೌಕರ್ಯ ಕುಸಿತ ಬೆಂಗಳೂರಿನ ಮುಂದಿನ ಅಭಿವೃದ್ಧಿ ನಿರ್ವಹಣೆಯ ಬಗ್ಗೆ ಜಾಗತಿಕ ಆತಂಕಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಿದೆ.

ಕಣ್ಣಿಲ್ಲದ ಟೆಕ್ಕಿಗೆ ವಾರ್ಷಿಕ 47 ಲಕ್ಷ ವೇತನದ ಕೆಲಸ: ಆಫರ್‌ ನೀಡಿದ ಮೈಕ್ರೋಸಾಫ್ಟ್‌ ಕಂಪನಿ

ಬೆಂಗಳೂರಿನ ಆದಾಯದ ಶೇ.32ರಷ್ಟುಈ ಕಾರಿಡಾರ್‌ನಿಂದ ಬರುತ್ತದೆ. ಅತಿ ಹೆಚ್ಚು ತೆರಿಗೆ ನೀಡುವ ಪ್ರದೇಶವಿದು. ಆದರೂ ಈ ಭಾಗದಲ್ಲಿನ ಮೂಲ ಸೌಕರ್ಯದತ್ತ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಈ ಕಾರಿಡಾರ್‌ನಲ್ಲಿನ ಕಳಪೆ ಮೂಲ ಸೌಕರ್ಯ ಉದ್ಯೋಗಿಗಳ ದಕ್ಷತೆ ಮತ್ತು ಉತ್ಪಾದಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಉದ್ಯೋಗಿಗಳ ಸುರಕ್ಷತೆಗೂ ಅಪಾಯ ತಂದಿದೆ. ಇದರಿಂದಾಗಿ ಬೆಂಗಳೂರಿನಿಂದ ಹೊರಗೆ ವ್ಯವಹಾರ ನಡೆಸಲು ಹಲವು ಕಂಪನಿಗಳು ಮುಂದಾಗಿವೆ. ಇದರಿಂದ ಬೆಂಗಳೂರಿನ ಪ್ರತಿಷ್ಠೆ ಮುಕ್ಕಾಗುವ ಸಾಧ್ಯತೆಯಿದೆ. ಜತೆಗೆ ಆರ್ಥಿಕವಾಗಿಯೂ ಹಾನಿಯಾಗಲಿದೆ ಎಂದು ಪತ್ರದಲ್ಲಿ ಹೇಳಿವೆ.

ಈ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಬೇಕು. ಕೆ.ಆರ್‌. ಪುರ, ಸಿಲ್ಕ್ ಬೋರ್ಡ್‌ ಜಂಕ್ಷನ್‌ ಸುಧಾರಣೆ ಮಾಡಬೇಕು. ಬಿಎಂಟಿಸಿಯಿಂದ ವೋಲ್ವೋ ಬಸ್‌ಗಳನ್ನು ಸಂಚಾರಕ್ಕಿಳಿಸಬೇಕು. ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ನಿಷೇಧಿಸಬೇಕು. ಪಾದಚಾರಿ ಮಾರ್ಗ ಮತ್ತು ಸೈಕಲ್‌ ಸವಾರರಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡಬೇಕು. ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಪ್ರತಿ 500 ಮೀಟರ್‌ ಗೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಪತ್ರದಲ್ಲಿ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ಮೂಲ ಸೌಕರ್ಯಗಳಿಗೆ ಸಂಬಂಧಪಟ್ಟಸರ್ಕಾರ ಮತ್ತು ಬಿಬಿಎಂಪಿಯ ಎಲ್ಲ ಇಲಾಖೆ, ವಿಭಾಗಗಳನ್ನು ಒಳಗೊಂಡ ಜಂಟಿ ಸಮನ್ವಯ ಸಮಿತಿ ರಚಿಸಬೇಕು. ಈ ಸಮಿತಿಯ ನೇತೃತ್ವವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಹಿಸಬೇಕು. ಅವರು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ಪ್ರಗತಿ ವರದಿಯನ್ನು ಪ್ರತಿ ತಿಂಗಳು ಪರಾಮರ್ಶಿಸಬೇಕು ಎಂದು ಪತ್ರದಲ್ಲಿ ಸಲಹೆ ನೀಡಲಾಗಿದೆ.