ಮೈಸೂರು (ಆ.20):  ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರನ್ನು ಇನ್ನು ಮುಂದೆ ರಾಜ್ಯದ ಸ್ವಚ್ಛತಾ ನಗರದ ರಾಜಧಾನಿ ಎಂದೂ ಕರೆಯಬಹುದಾಗಿದೆ.

ಕೇಂದ್ರ ಸರ್ಕಾರದಿಂದ ಪುರಸ್ಕಾರಗೊಳ್ಳಲಿರುವ ಸ್ವಚ್ಛತಾ ನಗರಿಗಳ ಪ್ರಶಸ್ತಿಗೆ ಸತತವಾಗಿ ಒದಿಲ್ಲೊಂದು ವಿಭಾಗದ ಮೂಲಕ ಆಯ್ಕೆಯಾಗುತ್ತಲೇ ಬಂದಿದ್ದು, ಇದೀಗ ಮತ್ತೊಮ್ಮೆ ಸ್ವಚ್ಛ ನಗರ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ 1ನೇ ಸ್ಥಾನ ಲಭಿಸಿದ್ದು, ನಮ್ಮ ಮೈಸೂರು, ನಮ್ಮ ಹೆಮ್ಮೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 11ನೇ ಸ್ಥಾನ ಪಡೆದುಕೊಂಡಿದೆ.  ಇನ್ನು 10 ಲಕ್ಷ ಜನಸಂಖ್ಯೆಯಿರುವ ನಗರಗಳಲ್ಲಿ ಬೆಂಗಳೂರು 37ನೇ ಸ್ಥಾನ ಪಡೆದುಕೊಂಡಿದೆ.  

ಮೈಸೂರು ಮೃಗಾಲಯಕ್ಕೆ ಬಂದ ವೇಗದ ಸರದಾರ

ಮೈಸೂರು ಸ್ವಚ್ಛ ನಗರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ಇಲ್ಲಿನ ಸಂಸದರು, ಜಿಲ್ಲಾಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು, ಮಾಹಾಪೌರರು, ಮಹಾನಗರ ಪಾಲಿಕೆಯ ಸದಸ್ಯರು, ಪಾಲಿಕೆ ಆಯುಕ್ತರು, ಪೌರ ಕಾರ್ಮಿಕರು ಸೇರಿದಂತೆ ಸಿಬ್ಬಂದಿ ವರ್ಗದವರ ಶ್ರಮ ಸಾಕಷ್ಟಿದೆ. ಮೊದಲಿಗೆ ಇವರೆಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಇಲ್ಲಿನ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಸ್ವಚ್ಛ ನಗರಿ ಇಂದೋರ್‌ಗೆ ಮೊದಲ ಸ್ಥಾನ

ಮುಂದಿನ ದಿನಗಳಲ್ಲಿ ಇದೇ ರೀತಿಯ ಶ್ರಮವಹಿಸಿ ಮೈಸೂರಿಗೆ ಲಭಿಸಿರುವ ಈ ನಂಬರ್ 1 ಪಟ್ಟವನ್ನು ನಾವು ಉಳಿಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿನ್ನು ಹೊಂದಿದ್ದೇವೆ ಎಂದು ಸಚಿವರು ಈ ವೇಳೆ ತಿಳಿಸಿದ್ದಾರೆ.

ಇನ್ನು  ಸರ್ಕಾರದ ಯಾವುದೇ ಒಂದು ಯೋಜನೆಗಳಿರಲಿ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಬೇಕಾಗುತ್ತದೆ. ಆ ಇಚ್ಛಾಶಕ್ತಿ ಮೈಸೂರಿನ ಆಡಳಿತದಲ್ಲಿ ನಾವು ಕಾಣುತ್ತಿದ್ದೇವೆ. ಇದೆಲ್ಲದರ ಜೊತೆಗೆ ಮೈಸೂರಿನ ನಾಗರಿಕ ಪಾತ್ರವನ್ನೂ ನಾವು ಶ್ಲಾಘಿಸಬೇಕು. ಸಾರ್ವಜನಿಕರ ಪಾತ್ರ ಹಾಗೂ ಸಹಭಾಗಿತ್ವವೂ ನಮಗೆ ಅಷ್ಟೇ ಮುಖ್ಯವಾಗುತ್ತದೆ. ಇನ್ನು ಮುಂದೂ ಸಹ ಇದೇ ರೀತಿಯ ಸಹಕಾರವನ್ನು ಕೋರುತ್ತೇನೆ ಎಂದು ಸಹಕಾರ ಸಚಿವರು ಆಗಿರುವ ಸೋಮಶೇಖರ್ ಹೇಳಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹ ಈ ವಿಷಯಕ್ಕೆ ಸಂಬಂಧಿಸಿದೆ ಟ್ವೀಟ್ ಮಾಡಿದ್ದಾರೆ.