ಕಾರ್ಕಳ(ಮೇ 23): ಲಾಕ್‌ಡೌನ್‌, ನಿಷೇಧಾಜ್ಞೆಗಳನ್ನು ಮೀರಿ ಕಾರ್ಕಳ ಸರ್ಕಾರಿ ಬೋರ್ಡ್‌ ಹೈಸ್ಕೂಲ್‌ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ತರಗತಿಗಳನ್ನು ನಡೆಸಿದ್ದು, ವಿಷಯ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.

ಶುಕ್ರವಾರ ಮುಖ್ಯೋಪಾಧ್ಯಾಯರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಏಕಾಏಕಿ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದೆ ಹರಸಾಹಸದಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಅದ ತೊಂದರೆ ಬಗ್ಗೆ ಮುಖ್ಯೋಪಾಧ್ಯಾಯರನ್ನು ವಿಚಾರಿಸಿದಾಗ ‘ಕ್ಷೇತ್ರ ಶಿಕ್ಷಣ ಅಧಿಕಾರಿ ಸೂಚನೆಯಂತೆ ತರಗತಿಗಳನ್ನು ನಡೆಸಲಾಗಿದೆ’ ಎಂದು ಮುಖ್ಯೋಪಾಧ್ಯಾಯರು ಸಮಜಾಯಿಷಿ ನೀಡಿದ್ದಾರೆ. ಆದರೆ ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಿರಾಕರಿಸಿದ್ದಾರೆ.

ಪತಿಯ ಅಂತ್ಯಕ್ರಿಯೆಗೂ ಹೋಗಲಾಗದ ಪತ್ನಿ, ಮಕ್ಕಳಿಗೂ ಸೋಂಕು!

ಕಾರ್ಕಳ ತಾಲೂಕಿನ ಈ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಖಾಸಗಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಆದರೆ ಇನ್ನೂ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ ಅನೇಕ ವಿದ್ಯಾರ್ಥಿಗಳು ಕಿ.ಮೀ.ಗಟ್ಟಲೆ ನಡೆದು ಶಾಲೆಗೆ ಬಂದಿದ್ದಾರೆ. ಮತ್ತೆ ಕೆಲವರು ಸರಕು ಸಾಗಿಸುವ ವಾಹನಗಳಲ್ಲಿ ಶಾಲೆಗೆ ಬಂದು ತರಗತಿಗೆ ಹಾಜರಾಗಿದ್ದಾರೆ. ಇದರಿಂದಾಗಿ ಸಾಮಾಜಿಕ ಅಂತರ ಪಾಲಿಸುವ ಜವಾಬ್ದಾರಿ ಮರೆತು ಕೆಲವೊಂದು ಪೋಷಕರು ಒಂದೇ ಬೈಕ್‌ನಲ್ಲಿ ಮೂರು ನಾಲ್ಕು ಮಕ್ಕಳನ್ನು ಕೂರಿಸಿಕೊಂಡು ಶಾಲೆಗೆ ಬಿಟ್ಟಪ್ರಸಂಗವೂ ನಡೆದಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಇನ್ನು ಕೂಡ ರಾಜ್ಯ ಶಿಕ್ಷಣ ಇಲಾಖೆ ಅನುಮತಿ ನೀಡಿಲ್ಲ. ಆದರೂ ಈ ನಡುವೆ ಈ ನಿರ್ದಿಷ್ಟಶಾಲೆಯಲ್ಲಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಹೇಗೆ ಸಾಧ್ಯ? ಎಂದು ಅನೇಕ ಪೊಷಕರು ಪ್ರಶ್ನಿಸಿದ್ದಾರೆ. ಕೆಸಿಎಸ್‌ಆರ್‌ ನಿಯಾವಳಿ ಪ್ರಕಾರದಂತೆ ಶಿಕ್ಷಕರೆಲ್ಲರೂ ಕೇಂದ್ರ ಸ್ಥಾನದಲ್ಲಿ ಉಪಸ್ಥಿತಿ ಕಡ್ಡಾಯ. ಆದರೆ ಮಕ್ಕಳಿಗೆ ತರಗತಿ ನಡೆಸುವಂತಿಲ್ಲ.

ಲಾಕ್‌ಡೌನ್‌ ನಂತರ ಕೆಲಸಕ್ಕೆ ಹಾಜರ್‌: ಕಂಪನಿಯಲ್ಲಿ ಕೆಲಸದ ವೇಳೆ ಕಾರ್ಮಿಕ ಮಹಿಳೆ ಸಾವು

ವಿಚಾರ ತಿಳಿದು ‘ಕನ್ನಡ ಪ್ರಭ’ ವರದಿಗಾರ ಶಾಲೆಗೆ ಭೇಟಿ ನೀಡುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿ ಕೊಟ್ಟಿದ್ದಾರೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದು ಎಷ್ಟುಸರಿ? ಅದು ಅಲ್ಲದೆ ಈ ಪ್ರೌಢಶಾಲೆಯ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆ ಕೊವಿಡ್‌ ವಾರ್ಡ್‌ ಇದೆ. ಶ್ರೀಮಂತ ಮಕ್ಕಳಿಗೆ ಅನ್‌ಲೈನ್‌ನಲ್ಲಿ ತರಗತಿ ನಡೆಸಿ, ನಮ್ಮ ಬಡಮಕ್ಕಳಿಗೆ ಈ ರೀತಿ ತೊಂದರೆ ಕೊಡುವುದು ಎಷ್ಟುಸರಿ? ಎಂದು ಪೋಷಕ ವಸಂತ ಪ್ರಶ್ನಿಸಿದ್ದಾರೆ.

ಎಂಟು ಕಿಲೋ ಮೀಟರ್‌ ನಡೆದ ವಿದ್ಯಾರ್ಥಿಗಳು

ಜಾರ್ಕಳದಿಂದ ಕಾರ್ಕಳಕ್ಕೆ ಎಂಟು ಕಿ.ಮೀ. ದೂರದಿಂದ ನಡೆದುಕೊಂಡು ಬಂದಿದ್ದೇವೆ. ಮತ್ತೆ ಎಂಟು ಕಿ.ಮೀ. ದೂರ ನಡೆದುಕೊಂಡು ಹೋಗಬೇಕು. ಒಬ್ಬ ತರಕಾರಿ ಗೂಡ್ಸ್‌ ವಾಹನದಲ್ಲಿ ಬಂದಿದ್ದಾನೆ. ವಾಪಾಸ್‌ ಮನೆಗೆ ಹೋಗಲು ವಾಹನ ಸಿಗುತ್ತೋ ಗೊತ್ತಿಲ್ಲ ಎಂದು ತರಗತಿಗೆ ಹಾಜರಾದ ಕೆಲವು ವಿದ್ಯಾರ್ಥಿಗಳು ತಮ್ಮ ಕಷ್ಟವನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಅದೇಶದಂತೆ ಮಕ್ಕಳನ್ನು ತರಗತಿಗೆ ಕರೆಸಿಕೊಳ್ಳದಂತೆ ನಾವು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದೇವೆ. ಕರೆಸಿಕೊಂಡು ಏನಾದರು ಸಮಸ್ಯೆ ಆದರೆ ಅದಕ್ಕೆ ನೇರ ಹೊಣೆ ಮುಖ್ಯೋಪಾಧ್ಯಾಯರೇ ಆಗಿರುತ್ತಾರೆ ಎಂದು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌ ತಿಳಿಸಿದ್ದಾರೆ.

ಕಳ್ಳ ದಾರೀಲಿ ರಾಜ್ಯಕ್ಕೆ ಬರುತ್ತಿರುವ ಜನರು: ಕೊರೋನಾ ಸೋಂಕು ಹರಡುವ ಆತಂಕ..!

ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಲು ಅಧಿಕಾರ ನೀಡಿದವರು ಯಾರು ಎಂಬುದು ಗೊತ್ತಿಲ್ಲ. ಶಾಲೆ ತೆರೆದು ತರಗತಿ ನಡೆಸಲು ಇನ್ನು ಸರ್ಕಾರದಿಂದ ಯಾವುದೇ ಆದೇಶ, ಅನುಮತಿ ಬಂದಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

-ಬಿ. ಸಂಪತ್‌ ನಾಯಕ್‌