ಕಳ್ಳ ದಾರೀಲಿ ರಾಜ್ಯಕ್ಕೆ ಬರುತ್ತಿರುವ ಜನರು: ಕೊರೋನಾ ಸೋಂಕು ಹರಡುವ ಆತಂಕ..!
ತಮಿಳುನಾಡಿಂದ ಕಳ್ಳ ದಾರೀಲಿ ರಾಜ್ಯಕ್ಕೆ ಬರುತ್ತಿರುವ ಜನರು| ವ್ಯಾಪಾರ, ಉದ್ಯೋಗ, ಬಂಧು ಬಾಂಧವರನ್ನು ಭೇಟಿ ಮಾಡುವ ನೆಪದಲ್ಲಿ ಸಾಗರೋಪಾದಿಯಲ್ಲಿ ಬರುತ್ತಿರುವ ಜನರು| ರಾಷ್ಟ್ರೀಯ ಹೆದ್ದಾರಿ ಅತ್ತಿಬೆಲೆ ಗಡಿ ಮೂಲಕ ಅಧಿಕೃತವಾಗಿ ಪ್ರವೇಶಿಸುತ್ತಿರುವ ಜನರು|
ಆನೇಕಲ್(ಮೇ.23): ಕೊರೋನಾ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗಿದ್ದು, ರಾಜ್ಯದಲ್ಲೂ ಸೋಂಕು ಹರಡುವ ಆತಂಕ ಸೃಷ್ಟಿಯಾಗಿದೆ.
"
ವ್ಯಾಪಾರ, ಉದ್ಯೋಗ, ಬಂಧು ಬಾಂಧವರನ್ನು ಭೇಟಿ ಮಾಡುವ ನೆಪದಲ್ಲಿ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅತ್ತಿಬೆಲೆ ಗಡಿ ಮೂಲಕ ಅಧಿಕೃತವಾಗಿ ಕೆಲವರು ಪ್ರವೇಶಿಸುತ್ತಾರೆ. ಹಳ್ಳಿಗಳ ಮಾರ್ಗದಿಂದ, ಹಳ್ಳ ಕೊಳ್ಳಗಳನ್ನು ದಾಟಿ ರಾಜ್ಯದೊಳಕ್ಕೆ ದಾಂಗುಡಿ ಇಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ತಪಾಸಣೆ, ಕ್ವಾರಂಟೈನ್ ನಂತಹ ಕಠಿಣ ಕ್ರಮಗಳಿಂದ ತಪ್ಪಿಸಿಕೊಳ್ಳಲು ಬಳ್ಳೂರು, ಬಿಳಿನೀರು ಕುಂಟೆ, ಸೋಲೂರು ಮುಖಾಂತರ ಆನೇಕಲ್ ಪ್ರವೇಶಿಸಿ ಅಲ್ಲಿಂದ ಬಸ್ ಹಿಡಿದು ತಮ್ಮ ಗಮ್ಯ ತಲುಪುತ್ತಾರೆ.
ಲಾಕ್‌ಡೌನ್ ನಂತರ ಕೆಲಸಕ್ಕೆ ಹಾಜರ್: ಕಂಪನಿಯಲ್ಲಿ ಕೆಲಸದ ವೇಳೆ ಕಾರ್ಮಿಕ ಮಹಿಳೆ ಸಾವು
ಗ್ರಾಮಸ್ಥರು ಮಣ್ಣು ಅಗೆದು ರಸ್ತೆಗೆ ಅಡ್ಡಲಾಗಿ ಸುರಿದರೂ, ಮುಳ್ಳು ಕಬ್ಬಿಣದ ಬೇಲಿಯನ್ನು ದಾರಿಗೆ ಅಡ್ಡಲಾಗಿ ಇಟ್ಟರೂ ಅದನ್ನು ಸರಿಸಿ ರಾಜಾರೋಷವಾಗಿ ಬರುತ್ತಾರೆ. ತಾಲೂಕು ಆಡಳಿತವನ್ನೂ ಯಾಮಾರಿಸಿ ನುಸುಳುವವರು ಹೆಚ್ಚಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಇರುವ ಕೈಗಾರಿಕೆಗಳಲ್ಲಿ ಬಹುತೇಕರು ನೆರೆಯ ಹೊಸೂರಿನಿಂದಲೇ ಬರುತ್ತಿದ್ದು, ಇವರೂ ಸಹ ಕಳ್ಳದಾರಿಯನ್ನೇ ಬಳಸುತ್ತಿದ್ದಾರೆ ಎಂಬ ಆರೋಪವಿದೆ.
ಗಡಿ ಗ್ರಾಮಗಳಲ್ಲಿ ಕಣ್ಗಾವಲು ಇಟ್ಟಿದ್ದು ಯಾರು ಗಡಿ ದಾಟಿ ಪ್ರವೇಶಿಸುತ್ತಿಲ್ಲ. ಗಡಿ ಭಾಗದಲ್ಲಿ ಆಳವಾದ ಕಂದಕವನ್ನು ತೋಡಿದ್ದು ಯಾರೂ ಗುಂಡಿಯನ್ನು ದಾಟಿ ಬರಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಮಹದೇವಯ್ಯ ಹೇಳಿದ್ದಾರೆ.