ಬೆಳ್ತಂಗಡಿಯ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಬಳಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯು ಭಾರಿ ಮಳೆಗೆ ಕೊಚ್ಚಿಹೋಗಿದೆ. ಇದರಿಂದಾಗಿ ಗುರಿಪಳ್ಳ, ನಡ, ಇಂದಬೆಟ್ಟು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಉಜಿರೆ, ಬೆಳ್ತಂಗಡಿ ಮತ್ತು ಮುಂಡಾಜೆಗೆ ತೆರಳಲು ಕಿಲೋಮೀಟರ್‌ಗಟ್ಟಲೆ ಸುತ್ತು ಬಳಸಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.
ಮಂಗಳೂರು: ಉಜಿರೆ - ಗುರಿಪಳ್ಳ ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಸೋಮವಾರ ಸುರಿದ ಭಾರಿ ಮಳೆಗೆ ಮತ್ತೆ ಕೊಚ್ಚಿ ಹೋಗಿ ಗುರಿಪಳ್ಳ, ನಡ, ಇಂದಬೆಟ್ಟು, ಪಡ್ಪು ಮೊದಲಾದ ಪರಿಸರದ ಸಾವಿರಾರು ಕುಟುಂಬಗಳು ಸುತ್ತು ಬಳಸಿನ ರಸ್ತೆಗಳಲ್ಲಿ ಸಂಚರಿಸುವುದು ಮತ್ತೊಮ್ಮೆ ಅನಿವಾರ್ಯವಾಗಿದೆ.
ಈ ಹಿಂದೆ ಜೂ.9ರಂದು ಸುರಿದ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿ ಅದೇ ಸ್ಥಳದಲ್ಲಿ ಮತ್ತೆ ತಾತ್ಕಾಲಿಕ ಸೇತುವೆ ನಿರ್ಮಿಸಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಜಿಲ್ಲಾಧಿಕಾರಿ ಇಲ್ಲಿ ಸಂಚಾರಕ್ಕೆ ನಿಷೇಧ ಹೇರಿದ್ದರು. ವಾಹನಗಳ ಓಡಾಟ ಯಥಾ ಪ್ರಕಾರ ನಡೆಯುತ್ತಿತ್ತು. ಆದರೆ ಇದೀಗ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ವಾಹನ ಸಂಚಾರ ಅಸಾಧ್ಯವಾಗಿದೆ.
ಹಳ್ಳದ ಹಳೇ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ
ಅಂಬಡಬೆಟ್ಟು ಎಂಬಲ್ಲಿ ಹರಿಯುವ ಹಳ್ಳದ ಹಳೇ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಬಹು ವರ್ಷದ ಬೇಡಿಕೆಯಾದ ಇಲ್ಲಿನ ಕಿರು ಸೇತುವೆಗೆ ಸುಮಾರು ಎರಡು ವರ್ಷದ ಹಿಂದೆ ಅನುಮೋದನೆ ದೊರಕಿತ್ತು. 2.50 ಕೋಟಿ ರು. ವೆಚ್ಚದ ಈ ಕಿರು ಸೇತುವೆಗೆ ಫೆ.10ರಂದು ಶಿಲಾನ್ಯಾಸ ನೆರವೇರಿ, ಏ.16ರಂದು ಕಾಮಗಾರಿ ಆರಂಭವಾಯಿತು. ಇದೀಗ ನೂತನ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕ್ಯೂರಿಂಗ್ ಅವಧಿ ಬಾಕಿ ಇದ್ದು ಮುಂದಿನ 15 ರಿಂದ 20 ದಿನಗಳಲ್ಲಿ ಹೊಸ ಸೇತುವೆ ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇದೆ.
ಬದಲಿ ಮಾರ್ಗ
ಸದ್ಯ ನೂರಾರು ಕುಟುಂಬಗಳು ಸುತ್ತು ಬಳಸಿನ ರಸ್ತೆ ಬಳಸುವುದು ಅನಿವಾರ್ಯವಾಗಿದೆ -ಬದಲಿ ರಸ್ತೆ- ಉಜಿರೆ ಕಡೆ ಸಂಚರಿಸುವವರು ಪಡ್ಪು, ಸುರ್ಯ ಮೂಲಕ 10 ಕಿ.ಮೀ. ಸುತ್ತಿ ಬಳಸಿ, ಬೆಳ್ತಂಗಡಿ ಕಡೆ ಸಂಚರಿಸುವವರು ಕೇಳ್ತಾಜೆ ಅಥವಾ ಇಂದಬೆಟ್ಟು ಮೂಲಕ ಸುಮಾರು 25 ಕಿ.ಮೀ. ಸುತ್ತಿ ಬಳಸಿ ಮುಂಡಾಜೆ ಕಡೆ ಸಂಚರಿಸುವವರು ಬೊಳ್ಳೂರು ಬೈಲು ಮೂಲಕ 15ಕಿ.ಮೀ. ಹೆಚ್ಚುವರಿಯಾಗಿ ಸುತ್ತಿ ಪ್ರಯಾಣಿಸಬೇಕಾಗಿದೆ.


