ಕೊರೋನಾ ಭೀತಿ: ಚರ್ಚ್‌, ಮಸೀದಿ ಬಂದ್‌, ದೇಗುಲಗಳು ಓಪನ್‌

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿರಲು ಧಾರ್ಮಿಕ ಮುಖಂಡರ ನಿರ್ಧಾರ| ಉಡುಪಿಯ ಕೃಷ್ಣಮಠದಲ್ಲಿ ಈ ತಿಂಗಳಾಂತ್ಯದವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡದಿರುವುದಕ್ಕೆ ನಿರ್ಧಾರ| ಜೂ.13ರ ನಂತರ ಅಥವಾ ಮಾಸಾಂತ್ಯದಲ್ಲಿ ಚರ್ಚ್‌ಗಳನ್ನು ತೆರೆಯುವುದಕ್ಕೆ ಯೋಚನೆ| ಮಸೀದಿಗಳನ್ನು ಯಾವಾಗ ತೆರೆಯಬೇಕು ಎಂಬ ಬಗ್ಗೆ ಆಯಾ ಮಸೀದಿಗಳ ಸಮಿತಿಗಳೇ ನಿರ್ಧಾರ|

Church Masjid not Open in Udupi district

ಉಡುಪಿ(ಜೂ.08): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇನ್ನೂ ಕೆಲವು ದಿನಗಳ ಕಾಲ ಉಡುಪಿ ಜಿಲ್ಲೆಯ ಮಸೀದಿ ಮತ್ತು ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿಲು ಉಭಯ ಧರ್ಮೀಯರ ಮುಖಂಡರು ನಿರ್ಧರಿಸಿದ್ದಾರೆ. ಆದರೆ ದೇವಸ್ಥಾನಗಳು ಮಾತ್ರ ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದ್ದ ದೇವಸ್ಥಾನ, ಚರ್ಚು, ಮಸೀದಿಗಳನ್ನು ಇಂದಿನಿಂದ (ಸೋಮವಾರ) ತೆರೆದು ಭಕ್ತರ ಪ್ರಾರ್ಥನೆಗೆ ಅವಕಾಶ ನೀಡುವುದಕ್ಕೆ ಸರ್ಕಾರ ಅನುಮತಿಸಿದೆ.
ಜಿಲ್ಲಾ ಮುಸ್ಲಿಂ ಒಕ್ಕೂಟ ಶನಿವಾರ ಸಭೆ ಸೇರಿದ್ದು, ಸರ್ಕಾರದ ಮಂದಿನ ಮಾರ್ಗದರ್ಶಿ ಸೂತ್ರಗಳನ್ನು ಪರಿಶೀಲಿಸಿ ಮಸೀದಿಗಳನ್ನು ತೆರೆಯುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದೆ. ಅದೇ ರೀತಿ ಮೂಳೂರಿನ ಜಿಲ್ಲಾ ಕೇಂದ್ರ ಮಸೀದಿಯು ಜೂ.30ರ ವರೆಗೆ ತೆರೆಯದಿರಲು ನಿರ್ಧರಿಸಿದೆ. ಉಡುಪಿ ನಗರದ ಮಧ್ಯದಲ್ಲಿರುವ ಜಾಮೀಯ ಮಸಿದಿಯು ಮುಂದಿನ ಪರಿಸ್ಥಿತಿ ಅವಲೋಕಿಸಿ, ಸದ್ಯ ಕೆಲವು ದಿನ ತೆರೆಯದಿರಲು ನಿರ್ಧರಿಸಿದೆ.

ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಸಭಾಪತಿ

ಭಾನುವಾರ ನಡೆದ ಜಿಲ್ಲಾ ಸುನ್ನಿ ಸಂಯುಕ್ತ ಜಮಾತ್‌ ಸಭೆಯಲ್ಲಿ ಇಂದಿನಿಂದ ಮಸೀದಿಗಳನ್ನು ತೆರೆಯಲು ನೀಡುವ ಅನುಮತಿ ಸ್ವಾಗತಿಸಲಾಗಿದೆ. ಆದರೆ ಮಸೀದಿಗಳನ್ನು ಯಾವಾಗ ತೆರೆಯಬೇಕು ಎಂಬ ಬಗ್ಗೆ ಆಯಾ ಮಸೀದಿಗಳ ಸಮಿತಿಗಳೇ ನಿರ್ಧರಿಸಲಿ ಎಂದು ಸೂಚಿಸಿದೆ.

13ರವರೆಗೆ ಚರ್ಚ್‌ ತೆರೆಯಲ್ಲ:

ಉಡುಪಿ ಧರ್ಮಪ್ರಾಂತ್ಯದ ಚರ್ಚ್‌ಗಳು ಸೋಮವಾರ ತೆರೆಯದಿರುವುದಕ್ಕೆ ನಿರ್ಧರಿಸಲಾಗಿದೆ. ಸೋಮವಾರ ಎಲ್ಲ ಚರ್ಚುಗಳ ಧರ್ಮಗುರುಗಳ ಸಭೆ ನಡೆಸಲಾಗುತ್ತದೆ. ನಂತರ ಯಾವಾಗ ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುತ್ತದೆ. ಜೂ.13ರ ನಂತರ ಅಥವಾ ಮಾಸಾಂತ್ಯದಲ್ಲಿ ಚರ್ಚ್‌ಗಳನ್ನು ತೆರೆಯುವುದಕ್ಕೆ ಯೋಚಿಸಲಾಗುತ್ತಿದೆ ಎಂದು ಧರ್ಮಪ್ರಾಂತ್ಯ ತಿಳಿಸಿದೆ.

ದೇವಸ್ಥಾನಗಳು ಸಿದ್ಧ

ಉಡುಪಿಯ ಕೃಷ್ಣಮಠದಲ್ಲಿ ಈ ತಿಂಗಳಾಂತ್ಯದವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡದಿರುವುದಕ್ಕೆ ನಿರ್ಧರಿಸಲಾಗಿದೆ. ಆದರೆ ಜಿಲ್ಲೆಯ ಅತೀ ದೊಡ್ಡ ಮುಜರಾಯಿ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ, ಅಲ್ಲದೇ ಅನೆಗುಡ್ಡೆ, ಕುಂಬಾಶಿ, ಅಂಬಲಪಾಡಿ, ಕಡಿಯಾಳಿ ಇತ್ಯಾದಿಗಳಲ್ಲಿ ಸೋಮವಾರದಿಂದಲೇ ನಿರ್ಬಂಧಗಳೊಂದಿಗೆ ತೆರೆಯಲು ಸಿದ್ಧತೆಗಳನ್ನು ನಡೆಸಲಾಗಿದೆ.

Latest Videos
Follow Us:
Download App:
  • android
  • ios