ಕೋನಾಪುರ ಗ್ರಾಮದ ಸುತ್ತಮುತ್ತ ಶಿಲಾಯುಗದ ಕಾಲಘಟ್ಟದ ಕುರುಹುಗಳು ಪತ್ತೆಯಾಗಿವೆ. ರೇಖಾ ಚಿತ್ರಗಳು, ಬೃಹತ್ ಸಮಾಧಿಗಳು ಮತ್ತು ಸಂಗೀತ ಕಲ್ಗುಳಿಗಳನ್ನು ಇತಿಹಾಸ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇವುಗಳನ್ನು ಸಂರಕ್ಷಿಸುವುದು ಅವಶ್ಯಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಸುತ್ತಲಿನಲ್ಲಿ ಇತಿಹಾಸ ಸಂಶೋಧಕರ ತಂಡವು ಶಿಲಾಯುಗದ ಕಾಲಘಟ್ಟದ್ದ ಹಲವು ಕುರುಹುಗಳನ್ನು ಪತ್ತೆ ಮಾಡಿದೆ.

ಕಲ್ಲಿನ ಆಯುಧಗಳಿಂದ ಕುಟ್ಟಿ ರೇಖಾಚಿತ್ರ

ದೇವಸಮುದ್ರ ಹೋಬಳಿಯ ಗಡಿ ಗ್ರಾಮವಾಗಿರುವ ಕೋನಾಪುರ ಗ್ರಾಮವು ಗುಡ್ಡಗಳ ತಪ್ಪಲಿನಲ್ಲಿದ್ದು ಕೂಡ್ಲಿಗಿ ಮತ್ತು ಸಂಡೂರು ತಾಲೂಕುಗಳನ್ನು ಅಂಟಿಕೊಂಡಿದೆ. ಗ್ರಾಮದ ದಕ್ಷಿಣ ದಿಕ್ಕಿನಲ್ಲಿ ಕಿ.ಮೀ ದೂರದಲ್ಲಿರುವ ಕೊರ್ಲು (ಸೊಪ್ಪು) ಬೆಟ್ಟದ ಅಕ್ಷರ ಗುಂಡಿನಲ್ಲಿ ಗೂಳಿ ಚಿತ್ರ, ನೃತ್ಯ ಮಾಡುತ್ತಿರುವ ನವಿಲುಗಳ ಚಿತ್ರ, ಮುಖಾಮುಖಿಯಾಗಿ ಕಾದಾಡುತ್ತಿರುವ ಗೂಳಿಗಳು, ಎರಡು ಆನೆಗಳು ಮತ್ತು ಪಕ್ಷಿಗಳ ಚಿತ್ರಗಳನ್ನು ಕೆತ್ತಿರುವ ರೇಖಾ ಚಿತ್ರಗಳು ಪತ್ತೆಯಾಗಿದ್ದು ರೇಖಾ ಚಿತ್ರಗಳು ಬಳಕೆಯಲ್ಲಿದ್ದ ಕಾಲ ಘಟ್ಟದಲ್ಲಿ ಕಲ್ಲಿನ ಆಯುಧಗಳಿಂದ ಕುಟ್ಟಿ ಕೆತ್ತಲಾಗಿದೆ.

ಇವು ಕ್ರಿ.ಪೂ 2,000ಕ್ಕೂ ಹಳೆಯದ್ದಾಗಿವೆ ಎಂದು ಸಂಶೋಧನೆ ನೇತೃತ್ವ ವಹಿಸಿರುವ ಬಳ್ಳಾರಿ ಸರ್ಕಾರಿ ವಾಣಿಜ್ಯ ಕಾಲೇಜಿನ ಇತಿಹಾಸ ಉಪನ್ಯಾಸಕ ಓಬಯ್ಯ ಹಾಲಸಾಗರ ಅವರ ಹೇಳಿದ್ದಾರೆ.

ಗೋಲಾಕಾರದ ಗುಣಿ

ಇದರೊಟ್ಟಿಗೆ ಗುಂಡುಗಳ ಮೇಲ್ಬಾಗದಲ್ಲಿ ಗೋಲಾಕಾರದ ಗುಣಿಗಳನ್ನು ಹೊಂದಿರುವ ಕಲ್ಲುಳನ್ನು ಪತ್ತೆ ಹಚ್ಚಲಾಗಿದೆ. ಒಂದು ಬಂಡೆ ಮೇಲೆ ದೊಡ್ಡ ರುಬ್ಬುವ ಆಕೃತಿ ಕಲ್ಲು ಮತ್ತು 15 ಸಂಗೀತ ಕಲ್ಗುಳಿಗಳು ಬಂಡ್ಲು ಬೆಟ್ಟ ಸಮೀಪದ ಬೃಹತ್ ಸಮಾಧಿಯ ಮೇಲೆ 10 ಚಿಕ್ಕ ಕಲ್ಗುಳಿಗಳು, ಸಮೀಪದ ವೀರಗಲ್ಲಿನ ಮೇಲೆ 9 ಕಲ್ಗುಳಿಗಳು ಕಂಡುಬಂದಿವೆ.

ಇವು ಶಿಲಾಯುಗ ಕಾಲದಲ್ಲಿ ಅಂದರೆ ಕ್ರಿ.ಪೂ. 30000 1200ನೇ ಸಾಲಿನಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ಗ್ರಾಮಕ್ಕೆ ಹೆದ್ದಾರಿಗೆ ಹೊಂದಿಕೊಂಡಿರುವ ಸಮಿಪದ ಬಂಡ್ಲು ಬೆಟ್ಟ ಬಳಿ ಬೃಹತ್ ಶಿಲಾಯುಗ ಕಾಲದ ಸಮಾಧಿ ಇದ್ದು, ಇದು 6 ಮೀಟರ್ ಉದ್ದ. 5 ಮೀಟರ್ ಅಗಲ ಮತ್ತು 18.1 ಮೀಟರ್ ಸುತ್ತಳತೆ ಹೊಂದಿದೆ. ಇದು ಅವನತಿಯ ಹಂತದಲ್ಲಿದೆ. ಇದೇ ರೀತಿಯ ಹಲವು ಶಿಲಾಯುಗ ಕಾಲಘಟ್ಟದ ಸಣ್ಣ ಸಮಾಧಿಗಳು ಗ್ರಾಮದ ಬಳಿ ಇದ್ದು, ಅವೂ ಅವನತಿಯತ್ತ ಸಾಗಿವೆ. ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮೂಲೆ ಭಾಗದಲ್ಲಿರುವ ಕಾರಣ ಈ ಗ್ರಾಮಕ್ಕೆ ಕೋನಾಪುರ ಎಂದು ಅಥವಾ ಹಿಂದೆ ಬಹಳ ಹಿಂದೆ ಅಂಧ್ರಪ್ರದೇಶದಿಂದ ಕೋಣಗಳ ಸಹಾಯದಿಂದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಎಳೆತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಾರಣಕ್ಕಾಗಿಯೋ ಗ್ರಾಮಕ್ಕೆ ಕೋನಾಪುರ ಎಂಬ ಹೆಸರು ಬಂದಿರಬಹುದು ಎಂದು ಉಪನ್ಯಾಸಕ ಬೊಮ್ಮಣ್ಣ ತಿಳಿಸಿದ್ದಾರೆ.

ಇಲ್ಲಿ ಸಿಕ್ಕಿರುವ ವಸ್ತುಗಳ ಬಗ್ಗೆ ಇತಿಹಾಸ ತಜ್ಞ ಗಂಗಾವತಿಯ ಶರಣಬಸಪ್ಪ ಕೋಲಾಕಾರ್ ಮತ್ತು ಧಾರವಾಡದ ರು.ಮಾ. ಷಡಕ್ಷರಯ್ಯ ಅವರ ಗಮನಕ್ಕೆ ತರಲಾಗಿದೆ. ಇವು ನೂತನ ಶಿಲಾಯುಗ ಅಥವಾ ಆದಿ ಚಾರಿತ್ರಿಕ ಕಾಲಘಟ್ಟದ್ದಾಗಿರುವ ಸಾಧ್ಯತೆಯಿದೆ ಎಂದು ಶರಣಬಸಪ್ಪ ಅವರು ಹೇಳಿದ್ದರೆ ಆಗಿನ ಕಾಲದ ಪರಿಸರ, ಮಾನವನ ಜೀವನ ಶೈಲಿ, ವನ್ಯಜೀವಿಗಳ ಜತೆಗಿನ ಬಾಂಧವ್ಯ ಮತ್ತು ಅವುಗಳ ಪರಿಚಯವನ್ನು ಕಲಾಕೃತಿಗಳ ಮೂಲಕ ಮುಂದಿನ ತಲೆ ಮಾತಿಗೆ ಪರಿಚಯ ಮಾಡುವಂತೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾಗಿ ಅವರು ಹೇಳಿದರು.---

ಕೋನಾಪುರ ಸುತ್ತಮುತ್ತ ಸಾಕಷ್ಟು ಪ್ರಾಗೈತಿಹಾಸಿಕ ಕುರುಹುಗಳು ಇದ್ದು ಸರ್ಕಾರ ಇವುಗಳ ಸಂರಕ್ಷಣೆಗೆ ಮುಂದಾಗಬೇಕು.ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ವಾಗಬೇಕು.

-ಬೊಮ್ಮಣ್ಣ, ಉಪನ್ಯಾಸಕ, ಕೋನಾಪುರ.

ಕೋನಾಪುರ ಬಳಿ ಸಿಕ್ಕಿರುವ ಅಂಶಗಳನ್ನು ಈಚೆಗೆ ಬೀದರ್‌ನ ಭಾಲ್ಕಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಸಂಶೋಧಕರ 40ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳದಲ್ಲಿ ಪ್ರಸ್ತಾವ ಮಾಡಿ ವಿವರಿಸಲಾಗಿದೆ.

-ಓಬಯ್ಯ ಹಾಲಸಾಗರ, ಉಪನ್ಯಾಸಕ, ಬಳ್ಳಾರಿ