ಬೇಲೂರಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಓಡಿಸಿದ್ದ ಆನೆಗಳ ಗುಂಪಿನಿಂದ ತಪ್ಪಿಸಿಕೊಂಡ ಒಂಟಿ ಗಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಈ ಸಲಗವು ಕುಮ್ಕಿ ಆನೆಗಳಿಗೂ ಸವಾಲಾಗಿ ಪರಿಣಮಿಸಿದ್ದು, ಕಾರ್ಯಾಚರಣೆಯಲ್ಲಿ ಶ್ವಾನ ಹಾಗೂ ಡ್ರೋನ್ ಬಳಸಲಾಗುತ್ತಿದೆ.
ಚಿಕ್ಕಮಗಳೂರು: ಬೇಲೂರಿನಿಂದ ಚಿಕ್ಕಮಗಳೂರು ಜಿಲ್ಲೆಗೆ ಓಡಿಸಿದ್ದ ಆನೆಗಳ ಪೈಕಿ ಒಂಟಿ ಸಲಗವೊಂದು ಗುಂಪಿನಿಂದ ತಪ್ಪಿಸಿಕೊಂಡಿದ್ದು, ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ. ಒಂಟಿ ಸಲಗವನ್ನು ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯು 6 ಕುಮ್ಕಿ ಆನೆಗಳ ಬೆವರಿಸಿಳಿಸಿದೆ.
ಬೇಲೂರಿಂದ ಚಿಕ್ಕಮಗಳೂರಿಗೆ ಓಡಿಸುವಾಗ ಘಟನೆ
ಸುಮಾರು 20 ವರ್ಷದ ಗಂಡಾನೆ ಸೆರೆಗೆ ತೆರಳಿದ್ದ 6 ಕುಮ್ಕಿ ಆನೆಗಳ ಪೈಕಿ ಅಯ್ಯಪ್ಪ ಎಂಬ ಆನೆಯನ್ನು ಒಂಟಿ ಸಲಗ ಹಿಮ್ಮೆಟಿಸಿ ಅಡವಿಗಟ್ಟಿತು. ಪರಿಣಾಮ ಅದರ ಮೇಲೆ ಕುಳಿತಿದ್ದ ಮಾವುತ ನೆಲಕ್ಕೆ ಬಿದ್ದು ಗಾಯಗೊಂಡರು. ಬಳಿಕ ಜ್ಯೂನಿಯರ್ ಅರ್ಜುನ ಆನೆಯ ಸಹಾಯದಿಂದ ಅಯ್ಯಪ್ಪನನ್ನು ಮರಳಿ ಕರೆತರಲಾಯಿತು. ಸಲಗದ ಚಾಣಾಕ್ಷ ಚಲನವಲನ ಹಾಗೂ ಆಕ್ರಮಣಕಾರಿ ವರ್ತನೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹರಸಾಹಸ ಪಡುವಂತಾಗಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ಮುತ್ತಾವರ ಕ್ಯಾಂಪ್ನಿಂದ ಕರೆತಂದಿದ್ದ ಸುಗ್ರೀವ, ಅಯ್ಯಪ್ಪ, ಮಾಣಿಕ್ಯ, ಸಾಗರ್, ಭೀಷ್ಮ ಹಾಗೂ ಜ್ಯೂನಿಯರ್ ಅರ್ಜುನ ಸೇರಿದಂತೆ 6 ಕುಮ್ಕಿ ಆನೆಗಳ ನೆರವಿನಿಂದ ಮುತ್ತಾವರ ಸಮೀಪದ ನಲ್ಲೂರು ಗುಡ್ಡದಲ್ಲಿ ಕಾರ್ಯಾಚರಣೆ ನಡೆಯಿತು.
ಎಪಿಸಿಸಿಎಫ್ ಮನೋಜ್ ರಾಜನ್ ಮಾರ್ಗದರ್ಶನದಲ್ಲಿ ಐವರು ನುರಿತ ಪಶು ವೈದ್ಯರು ಹಾಗೂ ಅರವಳಿಕೆ ತಜ್ಞರಾದ ರಮೇಶ್, ವಾಸೀಮ್, ಆದರ್ಶ್ ಮತ್ತು ವಿನಾಯಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆ ವೇಳೆ ಕಾಡಾನೆ ಪೊದೆಗಳೊಳಗೆ ಸೇರಿಕೊಂಡು ಸಿಬ್ಬಂದಿಗೆ ಕಾಣಿಸಿಕೊಳ್ಳದೆ ಕಣಾಮುಚ್ಚಾಲೆ ಆಡಿದೆ. ಡ್ರೋನ್ ಕ್ಯಾಮೆರಾ ಮೂಲಕ ಅದರ ಚಲನವಲನ ಗಮನಿಸಿದರೂ ಪೊದೆಗಳಿಂದ ಹೊರಬರದ ಕಾರಣ ಅರವಳಿಕೆ ಮದ್ದು ನೀಡಲು ಸಾಧ್ಯವಾಗಲಿಲ್ಲ.
ಇದೇ ವೇಳೆ ಕಾಡಾನೆ ಮತ್ತಯು ಕುಮ್ಕಿ ಆನೆಗಳ ಮುಖಾಮುಖಿ ವೇಳೆ ರೆಂಬೆಯೊಂದು ಅರವಳಿಕೆ ತಜ್ಞರ ಭುಜಕ್ಕೆ ಬಡಿಯಿತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಬಳಿಕ ಡಾಗ್ ಸ್ಕ್ವಾಡ್ ನೆರವಿನಿಂದ ಸಲಗ ಇರುವ ಸ್ಥಳ ಪತ್ತೆ ಕಾರ್ಯ ಆರಂಭಿಸಲಾಯಿತು. ಆನೆಗಳು ನಿರಂತರವಾಗಿ ಸ್ಥಳ ಬದಲಿಸುತ್ತಿದ್ದರಿಂದ ಇದೂ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತು.
ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ
ಚಿಕ್ಕಮಗಳೂರು ನಗರದ ಮತ್ತಾವರ ಅರಣ್ಯ ಪ್ರದೇಶದಲ್ಲಿ ಕಳೆದ 15- 16 ದಿನಗಳಿಂದ ಕೃಷಿ ಬೆಳೆಗಳಿಗೆ ಹಾನಿ ಮಾಡುತ್ತಿದ್ದ ಸುಮಾರು 20 ವರ್ಷದ ಒಂಟಿ ಗಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಮುಖ್ಯ ವನ್ಯ ಜೀವಿ ಸಂರಕ್ಷಣಾಧಿಕಾರಿ (ಸಿಡಬ್ಲ್ಯುಎಲ್) ಆದೇಶದಂತೆ ಆನೆ ಸೆರೆಹಿಡಿಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿಕ್ಕೋಡು ಶಿಬಿರದಿಂದ ಆರು ಕುಮ್ಕಿ ಆನೆಗಳನ್ನು ಕರೆಸಿಕೊಂಡು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಕಾರ್ಯಾಚರಣೆ ಆರಂಭಿಸ ಲಾಗಿದೆ. ಆದರೆ ಸಲಗ ಸಂಪೂರ್ಣವಾಗಿ ದಟ್ಟ ಅರಣ್ಯದೊಳಗೆ ಪ್ರವೇಶಿಸಿದ್ದು, ಡ್ರೋನ್ ಕ್ಯಾಮೆರಾಗಳಿಗೂ ಪತ್ತೆ ಯಾಗಿಲ್ಲ. ಕಡಿದಾದ ಪ್ರದೇಶ ಹಾಗೂ ದಟ್ಟ ಪೊದೆಗಳಿಂದ ಕುಮ್ಕಿ ಆನೆಗಳನ್ನು ಒಳಗೆ ಕರೆದೊಯ್ಯುವುದೂ ಕಷ್ಟವಾಗಿದೆ. ಸತತ 4 ಗಂಟೆಗಳ ಕಾಲ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ಹಂತದಲ್ಲಿ ಸಲಗ ಪತ್ತೆಯಾದರೂ, ಅಲ್ಲಿ ಅರವ ಳಿಕೆ ಮದ್ದು ನೀಡಿದರೆ ಆನೆಯನ್ನು ಸುರಕ್ಷಿತವಾಗಿ ಹೊರಗೆ ಕರೆತರುವುದು ಕಷ್ಟ ಹಾಗಾಗಿ ಆ ಪ್ರಯತ್ನ ಮಾಡಿಲ್ಲ ಎಂದು ಮನೋಜ್ ರಾಜನ್ ತಿಳಿಸಿದರು.
ಸಲಗ ಕಾರ್ಯಾಚರಣೆಗೆ ಈಶ ಹೆಸರಿನ ಶ್ವಾನ
ಸಲಗದ ಚಲನವಲನ ಪತ್ತೆಹಚ್ಚಲು ವಿಶೇಷ ತರಬೇತಿ ಪಡೆದ 'ಈಶ' ಹೆಸರಿನ ಶ್ವಾನ ಕರೆಸಿದ್ದು. ಇದರಿಂದ ಸುಮಾರು 100 ಮೀ. ದೂರದವರೆಗೂ ಆನೆಯ ಇರುವಿಕೆ ಪತ್ತೆಹಚ್ಚಲು ಸಹಕಾರಿಯಾಗಲಿದೆ. ಶುಕ್ರವಾರ ಸಂಜೆ ಮತ್ತೊಮ್ಮೆ ಕಾರ್ಯಾ ಚರಣೆ ನಡೆಸಲಾಗುವುದು. ಯಶಸ್ಸು ಸಿಗದಿದ್ದರೆ ಶನಿವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಗುವುದು. ಹೆಚ್ಚುವರಿ ಯಾಗಿ 'ಏಕಲವ್ಯ' ಹೆಸರಿನ ಮತ್ತೊಂದು ಕುಮ್ಕಿ ಆನೆಯನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ಮನೋಜ್ ರಾಜನ್ ಮಾಹಿತಿ ನೀಡಿದ್ದಾರೆ.
ಎನ್.ಆರ್.ಪುರದಲ್ಲೂ ಆನೆ ಸೆರೆಗೆ ಸಿದ್ಧತೆ
ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ಸೆರೆ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕುಮ್ಕಿ ಆನೆಗಳನ್ನು ಎನ್.ಆರ್.ಪುರಕ್ಕೆ ಕಳುಹಿಸುವ ಸಾಧ್ಯತೆಯಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಎನ್.ಆರ್.ಪುರದಲ್ಲೂ ಮತ್ತೊಂದು ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಬೇಕಿದೆ. ವಾರದ ಹಿಂದೆ ಎನ್.ಆರ್.ಪುರದಲ್ಲಿ ರೈತನೊಬ್ಬನ ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆಹಿಡಿವ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮನೋಜ್ ರಾಜನ್ ತಿಳಿಸಿದರು.













