ಚಿತ್ರದುರ್ಗದಲ್ಲಿ ಆರು ವರ್ಷಗಳ ಕಾಲ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಪ್ರೇಮಿಗಳಿಬ್ಬರ ನಡುವಿನ ವಿವಾದ ಬೀದಿಗೆ ಬಂದಿದೆ. ತನ್ನ ಪ್ರೇಯಸಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆ ಎಂದು ಆರೋಪಿಸಿ ಪ್ರಿಯಕರ ರವಿಕುಮಾರ್ ಆಕೆಯ ಮನೆಯ ಮುಂದೆ ಧರಣಿ ನಡೆಸಿದ್ದಾನೆ.

ಚಿತ್ರದುರ್ಗ (ಫೆ.07): ಕೋಟೆನಾಡು ಚಿತ್ರದುರ್ಗದಲ್ಲಿ ಪ್ರೇಮ ಪ್ರಹಸನವೊಂದು ಬೀದಿಗೆ ಬಂದಿದ್ದು, ಪ್ರೀತಿಸಿ ವಂಚಿಸಿದ ಆರೋಪದಡಿ ಪ್ರೇಯಸಿಯ ಮನೆಯ ಮುಂದೆ ಪ್ರಿಯಕರನೋರ್ವ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ. 6 ವರ್ಷಗಳ ಕಾಲ ಒಂದೇ ಮನೆಯಲ್ಲಿ ಜೀವನ ನಡೆಸಿ, ಈಗ ಕಾರಣವಿಲ್ಲದೇ ಕೈಕೊಟ್ಟು ಬೇರೊಬ್ಬನ ಜೊತೆ ಮದುವೆಗೆ ಸಿದ್ಧಳಾಗಿದ್ದಾಳೆ ಎಂದು ಆರೋಪಿಸಿ ಯುವಕನೋರ್ವ ರಂಪಾಟ ನಡೆಸಿದ್ದಾನೆ.

Add Asianetnews Kannada as a Preferred SourcegooglePreferred

ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮಾಳಪ್ಪನಹಟ್ಟಿಯಲ್ಲಿ ಈ ಘಟನೆ ನಡೆದಿದೆ. ರವಿಕುಮಾರ್ ಎಂಬಾತನೇ ತನ್ನ ಪ್ರೇಯಸಿ ಯುವತಿ ಎಂಬುವವರ ಮನೆಯ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದ ಯುವಕ.

ರವಿಕುಮಾರ್ ಆರೋಪವೇನು?

ರವಿಕುಮಾರ್ ಮತ್ತು ಯುವತಿ ಇಬ್ಬರೂ ಬೆಂಗಳೂರಿನಲ್ಲಿ ಒಟ್ಟಿಗೆ ಬಿ.ಇ (BE) ಹಾಗೂ ಎಂ.ಟೆಕ್ (M.Tech) ವ್ಯಾಸಂಗ ಮಾಡಿದ್ದರು. ಬಳಿಕ ಇಬ್ಬರೂ ಒಂದೇ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಪರಿಣಾಮವಾಗಿ ಕಳೆದ 6 ವರ್ಷಗಳಿಂದ ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ವಾಸವಿದ್ದೆವು (Live-in relationship) ಎಂದು ರವಿಕುಮಾರ್ ಹೇಳಿಕೊಂಡಿದ್ದಾರೆ. 'ಆದರೆ, ಈಗ ಯಾವುದೇ ಬಲವಾದ ಕಾರಣವಿಲ್ಲದೇ ಆಕೆ ನನಗೆ ಕೈಕೊಟ್ಟಿದ್ದಾಳೆ. ನನ್ನನ್ನು ದೂರವಿಟ್ಟು ಬೇರೊಬ್ಬ ಯುವಕನ ಜೊತೆ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾಳೆ ಎಂದು ರವಿಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ನಾನು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಪ್ರಕರಣ ಕೋರ್ಟ್‌ನಲ್ಲಿದ್ದರೂ, ತೀರ್ಪು ಬರುವ ಮುನ್ನವೇ ಆಕೆ ಮತ್ತು ಆಕೆಯ ಮನೆಯವರು ಮದುವೆ ಮಾಡಲು ಮುಂದಾಗಿದ್ದಾರೆ. ಪ್ರೇಯಸಿ ತೇಜಸ್ವಿನಿ ಹಾಗೂ ಆಕೆಯ ಕುಟುಂಬಸ್ಥರು ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯುವತಿ ಪೋಷಕರ ಸ್ಪಷ್ಟನೆ

ಇತ್ತ ರವಿಕುಮಾರ್ ಆರೋಪಗಳನ್ನು ಯುವತಿ ಪೋಷಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 'ರವಿಕುಮಾರ್ ನಡತೆ ಸರಿಯಿಲ್ಲ. ಆತನಿಗೆ ಬೇರೆ ಬೇರೆ ಹುಡುಗಿಯರ ಜೊತೆ ಸಂಪರ್ಕವಿದೆ. ಆತನ ವರ್ತನೆಯಿಂದ ಬೇಸತ್ತು ನಮ್ಮ ಮಗಳು ದೂರವಾಗಿದ್ದಾಳೆ. ಈಗ ಬೇಕೆಂದೇ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಿ, ನಮ್ಮ ಕುಟುಂಬದ ಮಾನ ಹರಾಜು ಹಾಕಲು ಮನೆ ಮುಂದೆ ಬಂದು ಹೈಡ್ರಾಮಾ ಮಾಡುತ್ತಿದ್ದಾನೆ' ಎಂದು ಪೋಷಕರು ಕಿಡಿಕಾರಿದರು.

ಈಗಾಗಲೇ ಈ ವಿಷಯ ಕೋರ್ಟ್ ಅಂಗಳದಲ್ಲಿದೆ. ಇದೇ ತಿಂಗಳು 28ರಂದು (ಫೆಬ್ರವರಿ 28) ವಿಚಾರಣೆ ಇದೆ. ನಾವು ಏನೇ ಉತ್ತರಿಸುವುದಿದ್ದರೂ ಕೋರ್ಟ್‌ನಲ್ಲೇ ಉತ್ತರಿಸುತ್ತೇವೆ. ಅದನ್ನು ಬಿಟ್ಟು ಹೀಗೆ ಮನೆ ಮುಂದೆ ಬಂದು ಗಲಾಟೆ ಮಾಡುವುದಲ್ಲ. ಈತನ ಧರಣಿ ಮತ್ತು ರಂಪಾಟದ ವಿರುದ್ಧ ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ' ಎಂದು ಯುವತಿಯ ಪೋಷಕರು ಎಚ್ಚರಿಸಿದ್ದಾರೆ. ಸದ್ಯ ಮಾಧ್ಯಮಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದು, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರೇಮಿಗಳಿಬ್ಬರ ಖಾಸಗಿ ವಿಚಾರ ಈಗ ಬೀದಿ ರಂಪಾಟವಾಗಿ ಮಾರ್ಪಟ್ಟಿರುವುದು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.