Asianet Suvarna News Asianet Suvarna News

ಚಿತ್ರದುರ್ಗ: ಮಳೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರ ಮೊಗದಲ್ಲಿ ಸಂತಸ, ಜಿಲ್ಲಾಡಳಿತಕ್ಕೆ ರೈತರ ಧನ್ಯವಾದ

ಈ ಬಾರಿ ಮಳೆಯಿಲ್ಲದೇ ಕಂಗಾಲಾಗಿರುವ ಅನ್ನದಾತರ ಸಂಕಷ್ಟ ನಿವಾರಣೆಗಾಗಿ ಆ ಜೀವನಾಡಿಯ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಿದೆ‌.

Farmers thanks to the Chitradurga District Administration grg
Author
First Published Feb 23, 2024, 8:02 PM IST

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಫೆ.23):  ಅದು ಕೋಟೆನಾಡಿನ ಜನರಿಗೆ ಜಲಪಾತ್ರೆ ಇದ್ದಂತೆ. ಮಳೆ‌ ಕೈಕೊಟ್ಟಾಗ ರೈತರ ಬದುಕಿಗೆ ಅಕ್ಷಯಪಾತ್ರೆಯಾಗಿದೆ. ಹೀಗಾಗಿ ಈ ಬಾರಿ ಮಳೆಯಿಲ್ಲದೇ ಕಂಗಾಲಾಗಿರುವ ಅನ್ನದಾತರ ಸಂಕಷ್ಟ ನಿವಾರಣೆಗಾಗಿ ಆ ಜೀವನಾಡಿಯ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಿದೆ‌. ಹಾಗಾದ್ರೆ ಆ ಅಕ್ಷಯ ಪಾತ್ರೆ ಯಾವುದು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಹೀಗೆ ಭೋರ್ಗರೆಯುತ್ತಿರುವ ಜಲಧಾರೆ. ಕಾಲುವೆ ಮೂಲಕ ಹಾಲಿನಂತೆ ಉಕ್ಕುತ್ತಿರುವ ನೀರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ. ಹೌದು, ಹಲವು ವರ್ಷಗಳಿಂದ ಮಳೆಯಿಲ್ಲದೇ ತಳಮಟ್ಟಕ್ಕೆ ಕುಸಿದಿದ್ದ ಜಲಾಶಯದ ನೀರಿನ ಮಟ್ಟ ಕಳೆದ‌ ಎರಡು ವರ್ಷ‌ ಸುರಿದ ಉತ್ತಮ‌ ಮಳೆಯಿಂದಾಗಿ ಭರ್ತಿಯಾಗಿತ್ತು. ಹೀಗಾಗಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರಿಗೆ ಈ ಜಲಾಶಯವೇ ಆಸರೆಯಾಗಿದೆ. 

ಚಿತ್ರದುರ್ಗದಲ್ಲಿ ಸಂಭ್ರಮದ ಜೋಡೆತ್ತಿನ ಗಾಡಿ ಸ್ಪರ್ಧೆ: ನಾವು ಯಾರಿಗೂ ಕಮ್ಮಿ ಇಲ್ಲ ಅಂತ ಶಕ್ತಿ ಪ್ರದರ್ಶಿಸಿದ ರೈತರು..!

ಅಡಿಕೆ ಹಾಗು ತೆಂಗಿನತೋಟ ಸೇರಿದಂತೆ ಜಮೀನಿನಲ್ಲಿನ ಬೆಳೆಗಳು ಒಣಗಿ ನಷ್ಟ‌ ಅನುಭವಿಸುವ ಆತಂಕದಲ್ಲಿದ್ದ ಅನ್ನದಾತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ತೋಟ ಉಳಿಸಿಕೊಳ್ಳೋದು ಹೇಗೆಂಬ ಭಯದಲ್ಲಿದ್ರು.ಈ ವೇಳೆ ಎಚ್ಚೆತ್ತ ಚಿತ್ರದುರ್ಗ ಜಿಲ್ಲಾಡಳಿತ ಬರದನಾಡಿನ ರೈತರ ನೆರವಿಗೆ ಧಾವಿಸಿದೆ‌. ಪ್ರಸ್ತುತ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ 117.50 ಅಡಿ ಎತ್ತರವಿದ್ದು, 18.59 ಟಿ.ಎಂ.ಸಿ ನೀರಿನ ಸಂಗ್ರಹಯಿದೆ. ಹೀಗಾಗಿ ಒಂದು ತಿಂಗಳ ಕಾಲ ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನು ಕಾಲುವೆ ಮೂಲಕ ರೈತರ ಅನುಕೂಲಕ್ಕಾಗಿ ಹರಿಸಲು ಸಮ್ಮತಿಸಿದೆ‌. ಇದರಿಂದಾಗಿ ರೈತರ ಜಮೀನುಗಳಲ್ಲಿ ಅಂತರ್ಜಲ ಕುಸಿದು ಬತ್ತಿ ಬರಿದಾಗಿದ್ದ ಕೊಳವೆಬಾವಿಗಳು ರೀಚಾರ್ಜ್ ಆಗ್ತಿವೆ. ನೀರಿನ ಅಭಾವ ಕೊಂಚ ಸುಧಾರಿಸಿದೆ ಅಂತಾರೆ ಅನ್ನದಾತರು.

ಇ‌ನ್ನು ಪ್ರತಿ ವರ್ಷ ಬರಕ್ಕೆ ಸಿಲುಕುವ ಇಲ್ಲಿನ ಅನ್ನದಾತರು, ಜಾನುವಾರುಗಳಿಗೆ ಅಗತ್ಯ ನೀರು ಬಿಡುವಂತೆ ಜಿಲ್ಲಾಡಳಿತವನ್ನು ಅಂಗಲಾಚಿದ್ರೂ ಸಹ, ಸಕಾಲಕ್ಕೆ‌‌ ಜಲಾಶಯದ ನೀರನ್ನು ಕಾಲುವೆಗೆ ಹರಿಸಲು ಮೀನಾಮೇಷ‌ ಎಣಿಸಲಾಗ್ತಿತ್ತು. ಆದರೆ ಈ ಬಾರಿ ರೈತರ‌ ಬವಣೆ ಅರಿತ‌ ಜಿಲ್ಲಾಳಡಳಿತ ಬೇಸಿಗೆ ವೇಳೆ ಸೂಕ್ತ ಸಮಯಕ್ಕೆ ನೀರನ್ನು ಹರಿಸಿ‌ದೆ. ಕಂಗಾಲಾಗಿದ್ದ ಅನ್ನದಾತರಿಗೆ ಅನುಕೂಲ‌ ಮಾಡಿದೆ. ಹೀಗಾಗಿ ಬೆಳೆ‌ ಹಾಗೂ ತೋಟಗಳನ್ನು ಉಳಿಸಿಕೊಳ್ಳಲು ನೆರವಾದ ಜಿಲ್ಲಾಡಳಿತಕ್ಕೆ ಅನ್ನದಾತರು ಧನ್ಯವಾದ ಅರ್ಪಿಸಿದ್ದಾರೆ.

ಒಟ್ಟಾರೆ ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ಕಾಲುವೆಗಳ ಮೂಲಕ ರೈತರ ಜಮೀನಿಗಳಿಗೆ ಹರಿಸಲಾಗ್ತಿದೆ. ಹೀಗಾಗಿ ಮಳೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರ ಮೊಗದಲ್ಲಿ ಸಂತಸ ಮನೆ ಮಾಡಿದೆ. 

Follow Us:
Download App:
  • android
  • ios