ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ
ಕೊಡಗಿನಲ್ಲಿ ಮಹಿಳೆಯೊಬ್ಬಳು ಮಸೀದಿಯಲ್ಲಿ ನಮಾಜ್ ಮಾಡಿದ್ದಕ್ಕೆ 25 ವರ್ಷ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ಈಗ ಆಕೆಯ ಗಂಡ ಸಾವನ್ನಪ್ಪಿದ್ದರೂ ಅಂತ್ಯಕ್ರಿಯೆಗೆ ಮಸೀದಿ ಆಡಳಿತ ಮಂಡಳಿ ಅವಕಾಶ ನೀಡುತ್ತಿಲ್ಲ.
ಕೊಡಗು (ಫೆ.23): ಜಾತಿ, ಧರ್ಮಗಳ ಕಟ್ಟುಪಾಡಿಗೆ ಬಿದ್ದು ಇಡೀ ಕುಟುಂಬಕ್ಕೆ ಬರೋಬ್ಬರಿ 25 ವರ್ಷಗಳ ಬಹಿಷ್ಕಾರ ಶಿಕ್ಷೆಯನ್ನು ಕೊಟ್ಟ ಶಾಫಿ ಜುಮ್ಮಾ ಮಸೀದಿ ಆಡಳಿತ ಮಂಡಳಿಯು, ಈಗ ಕುಟುಂಬದಲ್ಲಿ ಮಹಿಳೆಯ ಗಂಡ ತೀರಿಕೊಂಡಿದ್ದರೂ ಅವರ ಅಂತ್ಯಕ್ರಿಯೆ ಮಾಡಲೂ ಬಿಡದಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಕೊಡಗಿನ ಗುಂಡಿಗೆರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಕಳೆದ 30 ವರ್ಷಗಳ ಹಿಂದೆ ಕೇರಳದ ಕೋಜಿಕೋಡಿನ ಜುಭೇದಾ ಎಂಬ ಮಹಿಳೆ ವಿರಾಜಪೇಟೆ ಬಳಿ ಗುಂಡಿಗೆರೆ ನಿವಾಸಿ ಅಹಮ್ಮದ್ ಎಂಬುವರನ್ನು 2ನೇ ಮದುವೆಯಾಗಿದ್ದರು. ವಿವಾಹದ ಬಳಿಕ ಈ ಮಹಿಳೆ ಜುಭೇದಾ ವಿರಾಜಪೇಟೆಯಲ್ಲಿ ಮಸೀದಿಗೆ ಹೋಗಿ ನಮಾಜ್ ಮಾಡುತ್ತಿದ್ದಳು. ಇದೇ ಕಾರಣಕ್ಕೆ ಜುಭೇದಾ ಮತ್ತು ಅಹಮ್ಮದ್ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿತ್ತು. 25 ವರ್ಷ ಗ್ರಾಮದ ಯಾರನ್ನು ಮಾತನ್ನಾಡಿಸುವಂತಿಲ್ಲ. ಯಾರ ಮನೆಗೂ ಇವರ ಕುಟುಂಬ ಹೋಗುವಂತಿಲ್ಲ. ಯಾರೂ ಇವರ ಮನೆಗೆ ಬರುವಂತಿಲ್ಲ. ಒಂದು ವೇಳೆ ಯಾರಾದರೂ ಇವರನ್ನು ಮಾತನಾಡಿಸಿದರೆ 5000 ರೂ. ದಂಡ ವಿಧಿಸಲಾಗುತ್ತಿತ್ತು. ಜೊತೆಗೆ, ಗ್ರಾಮದಲ್ಲಿ ಅಂಗಡಿಗೆ ಹೋಗಿ ಕನಿಷ್ಠ ಒಂದು ಬೆಂಕಿ ಪೊಟ್ಟಣ ಕೂಡ ತರುವಂತಿಲ್ಲ ಎಂಬ ನಿಯಮ ವಿಧಿಸಲಾಗಿತ್ತು.
ಅಫ್ಘಾನಿಸ್ತಾನದಲ್ಲಿ ಇಬ್ಬರು ಅಪರಾಧಿಗಳಿಗೆ ಸಾರ್ವಜನಿಕರೆದುರೇ ಮರಣದಂಡನೆ ನೀಡಿದ ತಾಲಿಬಾನ್
ಆದ್ದರಿಂದ ಕಳೆದ 25 ವರ್ಷಗಳಿಂದ ಈ ಕುಟುಂಬ ಚಿತ್ರಹಿಂಸೆ ಅನುಭವಿಸುತ್ತಲೇ ಜೀವನವನ್ನು ಸವೆಸಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ 25 ವರ್ಷದ ಬಹಿಷ್ಕಾರ ಶಿಕ್ಷೆ ಪೂರ್ಣಗೊಂಡಿದ್ದು, ಮಹಿಳೆಯ ಇಬ್ಬರು ಮಕ್ಕಳು 78 ಸಾವಿರ ರೂ. ಹಣವನ್ನು ಕಟ್ಟಿ ಮಸೀದಿಗೆ ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಆದರೆ, ಎರಡು ವರ್ಷಗಳ ಹಿಂದೆ ಯಾವುದೇ ಮಾಹಿತಿ ನೀಡದೆ ಮಸೀದಿಯ, ಮಹಿಳೆಯ ಮಕ್ಕಳ ಸದಸ್ಯತ್ವ ರದ್ದುಗೊಳಿಸಲಾಗಿದೆ. ಆ ಮೂಲಕ ಮತ್ತೆ ಶಾಫಿ ಜುಮ್ಮಾ ಮಸೀದಿ ಜಮಾಹತ್‌ನಿಂದ ಮಹಿಳೆ ಹಾಗೂ ಆಕೆಯ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಹಾಕಿತ್ತು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಜುಬೇದಾಳ ಗಂಡ ಅಹಮದ್‌ಗೆ ಮೊನ್ನೆ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಅಹಮ್ಮದ್ ಮೃತಪಟ್ಟಿದ್ದರು. ಈಗ ಅವರ ಅಂತ್ಯಕ್ರಿಯೆಯಲ್ಲೂ ಮನೆಯವರು ಭಾಗವಹಿಸದಂತೆ ಶಾಫಿ ಜುಮ್ಮಾ ಮಸೀದಿ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಬಹಿಷ್ಕಾರ ಹಾಕಿದ್ದಾರೆ. ಇನ್ನು ಅಹಮದ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಸೀದಿಗೆ ಹೋಗಿ ತಂದೆಯ ಶವದ ಮುಂದೆ ಪ್ರಾರ್ಥನೆ ಮಾಡಲು ಬಿಡದೆ ಬೈದು ಕಳುಹಿಸಿದ್ದಾರೆ.
ತಮ್ಮನ್ನು ಗ್ರಾಮದಿಂದ ಬಹಿಷ್ಕಾರ ಹಾಕಿರುವ ಬಗ್ಗೆ ಮಹಿಳೆಯ ಮಗ ರಶೀದ್ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಕೂಡ ಮಾನವೀಯತೆಗೂ ಕ್ರಮವನ್ನು ಕೈಗೊಂಡಿಲ್ಲ. ಜಿಲ್ಲಾ ವಕ್ಫ್ ಬೋರ್ಡಿಗೂ ದೂರು ನೀಡಿದರೂ, ಯಾರಿಂದಲೂ ಇದುವರೆಗೆ ನ್ಯಾಯ ಸಿಗಲಿಲ್ಲ. ಈಗ ತಂದೆ ಸಾವನ್ನಪ್ಪಿದರೂ ಅವರ ಅಂತ್ಯಕ್ರಿಯೆ ನಡೆಸಲು ಬಿಡದ ಹಿನ್ನೆಲೆಯಲ್ಲಿ ನಿನ್ನೆ ಮತ್ತೊಮ್ಮೆ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜೊತೆಗೆ, ಕುಟುಂಬ ಸದಸ್ಯರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ವಿವಾಹಿತೆ ಮಹಿಳೆ ಅನುಮಾನಾಸ್ಪದ ಸಾವು; ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನೇ ಕೊಂದನಾ?
ಮೃತ ಅಹಮದ್ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಹೀಗಾಗಿ, ಅಹಮದ್ ಅವರ ಮೊದಲ ಹೆಂಡತಿ ಮನೆಯವರು ಬಂದು ನಿಮಗೆ ಗ್ರಾಮದಿಂದ ಬಹಿಷ್ಕಾರವಿದ್ದು, ಅಹಮದ್‌ನ ಮೃತದೇಹವನ್ನು ನಾವೇ ಕೊಂಡೊಯ್ದು ವಿಧಿ ವಿಧಾನಗಳ ಅನುಸಾರ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಬಲವಂತವಾಗಿ ಮೃತದೇಹ ಕೊಂಡೊಯ್ದಿದ್ದಾರೆ. ಜೊತೆಗೆ, 2ನೇ ಪತ್ನಿ ಜುಭೇದಾ ಹಾಗೂ ಆಕೆಯ ಮಕ್ಕಳಿಗೆ ಗ್ರಾಮದೊಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಇಲ್ಲಿ ಮುಖ್ಯವಾಗಿ ಮೃತ ಅಹಮದ್ ಮೊದಲ ಹೆಂಡತಿಯ ಮನೆಯವರೇ ಮಸೀದಿ ಆಡಳಿತ ಮಂಡಳಿಯ ಪ್ರಮುಖ ಪದಾಧಿಕಾರಿಗಳಾಗಿದ್ದು, ಆಸ್ತಿ ಹೊಡೆಯುವ ಉದ್ದೇಶದಿಂದ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.