ಚಿತ್ರದುರ್ಗ(ಮೇ.02): ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಖುದ್ದು ಖರೀದಿಸುವಂತೆ ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಚಿಕ್ಕಗೊಂಡನಹಳ್ಳಿ, ಗೊಲ್ಲರಹಟ್ಟಿ, ರಾಯಣ್ಣನಹಳ್ಳಿ, ಯಳವರ್ತಿ, ಚಿಪ್ಪಿನಕೆರೆ, ಮುದ್ದಾಪುರ, ಕೂನಬೇವು, ಮಾಡನಾಯಕನಹಳ್ಳಿ ಸೇರಿ ಕಸಬಾ ಹೋಬಳಿಯ ಐದುನೂರಕ್ಕೂ ಹೆಚ್ಚು ರೈತರು ಬೇಸಿಗೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿದ ಪರಿಣಾಮ ಎಲ್ಲರೂ ಮನೆಯಂಗಳದಲ್ಲಿ ಚೀಲಗಳ ಹಾಗೆಯೇ ಇಟ್ಟುಕೊಂಡಿದ್ದಾರೆ. ಸಾವಿರಾರು ಚೀಲ ಹಾಗೆಯೇ ಕೊಳೆತು ಹೋಗುತ್ತಿದೆ.

ಒಂದೇ ದಿನ 6 ಹೊಸ ಕೇಸ್‌: ಮಗು ಸೇರಿ 8 ಜನಕ್ಕೆ ಸೋಂಕು!

ಈರುಳ್ಳಿ ಕೊಳ್ಳಲು ಹಳ್ಳಿಗಳಿಗೆ ಬರುವ ದಲ್ಲಾಳರು ಕ್ವಿಂಟಾಲಿಗೆ 250 ರಿಂದ 300 ರು. ಕಿಮ್ಮತ್ತು ಕಟ್ಟುತ್ತಿದ್ದಾರೆ. ಒಂದು ಚೀಲ ಈರುಳ್ಳಿ ಬೆಳೆಯಲು ಕನಿಷ್ಠ ಐದು ನೂರು ರು. ಖರ್ಚು ಬರುತ್ತಿದ್ದು, ಹಾಕಿದ ಬಂಡವಾಳವೂ ವಾಪಸ್‌ ಬರದಂತಾಗಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ಮಾರುಕಟ್ಟೆಯಲ್ಲೂ ದರ ಕುಸಿದಿದ್ದು, ಅಲ್ಲಿಗೆ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆಯೂ ಗಿಟ್ಟುತ್ತಿಲ್ಲ.

ನಿವೃತ್ತ ಯೋಧನ ಮನೆಯಲ್ಲಿ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ

ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸಬೇಕು. ತೋಟಗಾರಿಕೆ ಇಲಾಖೆ ಮೂಲಕ ಈರುಳ್ಳಿ ಖರೀದಿಸಿ ರೈತರಿಗೆ ಸೂಕ್ತ ದರ ಒದಗಿಸಿಕೊಡಬೇಕು. ಈರುಳ್ಳಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ರೈತ ಸಂಘದ ಜಿಲ್ಲಾ ಘಟದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ ಬಾಬು, ಮುದ್ದಾಪುರ ನಾಗರಾಜ್‌ , ಕರಿಸಿದ್ದಪ್ಪ, ಕೆ.ಟಿ ನಾಗೇಂದ್ರಪ್ಪ , ತಿಪ್ಪೇಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.