ಹಾಸನ: ಪ್ಲಾಸ್ಟಿಕ್ ಬಳಸಿದ್ದಕ್ಕೆ ಹಣ್ಣಿನ ಅಂಗಡಿ ತೆರವು
ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೂ ಕೆಲವು ದಿನ ಪೇಪರ್ ಬ್ಯಾಗ್ ಬಳಸಿ, ಮತ್ತೆ ಪ್ಲಾಸ್ಟಿಕ್ ಬಳಸೋ ವ್ಯಾಪಾರಸ್ಥರಿಗೆ ಹಾಸನ ನಗರಸಭೆ ಆಯುಕ್ತರು ಶಾಕ್ ನೀಡಿದ್ದಾರೆ. ಎಚ್ಚರಿಕೆ ನೀಡಿದ ಮೇಲೂ ಪ್ಲಾಸ್ಟಿಕ್ ಬಳಸಿದ ಅಂಗಡಿಯನ್ನು ತೆರವುಗೊಳಿಸಲಾಗಿದೆ.
ಹಾಸನ(ಜು.27): ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಅನೇಕ ಬಾರಿ ಸೂಚಿಸಿದ್ದರೂ ಮತ್ತೆ ಬಳಕೆ ಮಾಡಿದ್ದರಿಂದ ದಂಡ ವಿಧಿಸಲಾಗಿತ್ತು. ದಂಡ ಕಟ್ಟದ ಕಾರಣ ನಗರದ ಕಟ್ಟಿಮಾರುಕಟ್ಟೆಯಲ್ಲಿ ಇರುವ ಹಣ್ಣಿನ ಅಂಗಡಿಯನ್ನು ನಗರಸಭೆ ತೆರವುಗೊಳಿಸಿದೆ.
ನಗರಸಭೆ ಆಯುಕ್ತ ಪರಮೇಶ್ ಆದೇಶದ ಮೇರೆಗೆ ಬೆಳ್ಳಂಬೆಳಗ್ಗೆ ಅನ್ವರ್ ಎಂಬುವರ ಹಣ್ಣುಗಳನ್ನೆಲ್ಲ ನಗರಸಭೆ ತಮ್ಮ ವಾಹನದಲ್ಲಿ ತುಂಬಿಕೊಂಡು ವಶಪಡಿಸಿಕೊಳ್ಳಲಾಯಿತು. ಆದರೆ, ವಾಪಸ್ ಹಣ್ಣುಗಳನ್ನು ಕೊಡುವಂತೆ ವ್ಯಾಪಾರಿಗಳು ನಗರಸಭೆಯಲ್ಲಿ ಮನವಿ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ರು:
ಕಟ್ಟಿನಕೆರೆ ಮಾರುಕಟ್ಟೆ, ಮೂನ್‌ಲೈಟ್ ಬಾರ್ ಮುಂಭಾಗ ರಸ್ತೆ ಬದಿಯಲ್ಲಿ ಇಡಲಾಗಿರುವ ಅನ್ವರ ಎಂಬುವರ ಹಣ್ಣಿನ ಅಂಗಡಿಯನ್ನು ನಗರಸಭೆ ಬಂದ್ ಮಾಡಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಹಣ್ಣಿನ ಅಂಗಡಿಗೆ ನಗರಸಭೆ ಆಯುಕ್ತರು ಬಂದು 2 ಕೆಜಿ ದಾಳಿಂಬೆ ಹಣ್ಣನ್ನು ಖರೀದಿ ಮಾಡಿದರು. ಆಗ ಅವರಿಗೆ ಪ್ಲಾಸ್ಟಿಕ್ ಕವರ್‌ನಲ್ಲಿಯೇ ಹಾಕಿ ಕೊಡಲಾಗಿತ್ತು. ಈ ವೇಳೆ ವ್ಯಾಪಾರಿ ಅನ್ವರ್ ಎಂಬುವರಿಗೆ ಬುದ್ಧಿವಾದ ಹೇಳಲಾಗಿತ್ತು.
ಇನ್ನು ಮುಂದೆ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕುವುದಿಲ್ಲ ಕ್ಷಮಿಸಿ ಸರ್ ಎಂದು ಹೇಳಿದ್ದರು. ಆದರೂ ಮತ್ತೆ ಮತ್ತೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದ್ದರಿಂದ ಈ ವೇಳೆ ನಗರಸಭೆ ಆರೋಗ್ಯಾಧಿಕಾರಿ ಆದೀಶ್‌ಗೆ ಕರೆ ಮಾಡಿ, ಈ ಅಂಗಡಿ ಎಲ್ಲ ಹಣ್ಣುಗಳನ್ನು ತುಂಬಿ ನಗರಸಭೆಗೆ ವಶಪಡಿಸಿಕೊಳ್ಳಲು ಸೂಚನೆ ನೀಡಿದಲ್ಲದೇ, ಏನಾದರೂ ಕ್ರಮಕೈಗೊಳ್ಳದಿದ್ದರೇ ನಿನ್ನ ಮೇಲೆ ಕ್ರಮ ಜರುಗಿಸುವುದಾಗಿ ಸೂಚಿಸಿದ್ದರು. ನಂತರ ಅನ್ವರ್, 17ನೇ ವಾರ್ಡ್‌ನ ನಗರಸಭೆ ಸದಸ್ಯ ಮದನ್ ಅವರನ್ನು ಕರೆದುಕೊಂಡು ಆಯುಕ್ತರ ಬಳಿ ಕರೆದುಕೊಂಡು ಬಂದರು. ಆಗ ಇನ್ನು ಮುಂದೆ ಪ್ಲಾಸ್ಟಿಕ್ ಕವರ್‌ನಲ್ಲಿ ಕೊಡಬೇಡ ಎಂದು ಎಚ್ಚರಿಕೆ ನೀಡಿದರು.
ಲಂಚ ಆರೋಪ:
ಬೆಳಗ್ಗೆ ಆರೋಗ್ಯಾಧಿಕಾರಿ ಆದೀಶ್ ಕುಮಾರ್ ಅಂಗಡಿ ಬಳಿ ಬಂದು 10 ಸಾವಿರ ರು. ಕೊಡು ಇಲ್ಲವಾದರೇ, ಅಂಗಡಿ ತೆರವು ಮಾಡಲು ನಗರಸಭೆ ಆಯುಕ್ತರು ಹೇಳಿದ್ದಾರೆ. ಇಲ್ಲವಾದರೇ ನನ್ನನ್ನು ಕೆಲಸದಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ವರ್ತಕ ಅನ್ವರ್ ಆರೋಪಿಸಿದ್ದಾರೆ.
40 ರಿಂದ 50 ಸಾವಿರ ರು. ನಷ್ಟ:
ಶುಕ್ರವಾರ ಬೆಳಗ್ಗೆ 5ಗಂಟೆಗೆ ಏಕಾಏಕಿ ನನ್ನ ಅಂಗಡಿಯ ಹಣ್ಣುಗಳನ್ನೆಲ್ಲ ತುಂಬಿಕೊಂಡು ಹೋಗಿದ್ದಾರೆ. ಇದ್ದ ಹಣ್ಣುಗಳೆಲ್ಲ ಹಾಳಾಗಿ ಸುಮಾರು 40 ರಿಂದ 50 ಸಾವಿರ ರು. ನಷ್ಟವಾಗಿದೆ. ನನಗೆ ಸಾಲ ನೀಡಿದವರಿಗೆ ಹೇಗೆ ಹಣ ಕೊಡುವುದು. ಕಳೆದ ಮೂರು ದಿನಗಳ ಹಿಂದೆ 15 ಸಾವಿರ ರು. ಖರ್ಚು ಮಾಡಿ ಅಂಗಡಿ ದುರಸ್ತಿ ಮಾಡಲಾಗಿತ್ತು. ಇದಕ್ಕೆಲ್ಲ ಯಾರು ಹೊಣೆ ಎಂದು ಹಣ್ಣಿನ ಅಂಗಡಿ ಮಾಲೀಕ ಅನ್ವರ್ ತಮ್ಮ ಅಳಲು ತೋಡಿಕೊಂಡರು.
ತುಮಕೂರು: ಡಿಸಿ ಕಾಲಿಗೆ ಬಿದ್ದ ಫುಟ್‌ಪಾತ್ ವ್ಯಾಪಾರಿಗಳು
ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳಲಿಲ್ಲ:
ನಗರಸಭೆ ಆಯುಕ್ತ ಬಿ.ಎ. ಪರಮೇಶ್ ಮಾತನಾಡಿ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿರುವ ಅನ್ವರ್ ಎಂಬುವರ ಹಣ್ಣಿನ ಅಂಗಡಿಯಲ್ಲಿ ಪ್ಲಾಸ್ಟಿಕ್ ಬಳಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ನಾನೇ ಖುದ್ದಾಗಿ ವ್ಯಾಪಾರ ಮಾಡಿದಾಗ ತಿಳಿದು ಬಂದಿದೆ. ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಮತ್ತೆ ಮತ್ತೆ ಪ್ಲಾಸ್ಟಿಕ್ ಬಳಸುತ್ತಿದ್ದರು. ಅದಕ್ಕೆ ದಂಡ ವಿಧಿಸಲು ನಗರಸಭೆ ಸೂಚನೆ ಮೇರೆಗೆ ಆರೋಗ್ಯಾಧಿಕಾರಿ ಆದೀಶ್ ಕುಮಾರ್ 10 ಸಾವಿರ ರು. ಗಳನ್ನು ಕೇಳಿದ್ದಾರೆ ಅಷ್ಟೆಎಂದರು.
ನಗರಸಭೆ ಆರೋಗ್ಯಾಧಿಕಾರಿ ಆದೀಶ್ ನಗರಸಭೆ ಆಯುಕ್ತರೆ ಎರಡು ಬಾರಿ ಅನ್ವರ್ ಎಂಬುವರ ಅಂಗಡಿಗೆ ಹೋಗಿ ಹಣ್ಣು ಖರೀದಿ ಮಾಡಿದಾಗ ಪ್ಲಾಸ್ಟಿಕ್‌ನಲ್ಲಿ ಕೊಡಲಾಗಿತ್ತು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಕ್ಕ-ಪಕ್ಕದ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಇದ್ದುದರಿಂದ ನಾನೇ ದಂಡ ವಿಧಿಸಿದ್ದು, ಅನ್ವರ್‌ಗೆ ಅನೇಕ ಬಾರಿ ದಂಡ ಕಟ್ಟುವ ಬಗ್ಗೆ ಸಲಹೆ ಕೊಡಲಾಗಿದ್ದರೂ ಹಣ್ಣಿನ ಅಂಗಡಿಯವರು ಸ್ಪಂದಿಸಲಿಲ್ಲ. ನಗರಸಭೆ ಕಮಿಷನರ್ ನಿರ್ದೇಶನದಂತೆ ಶುಕ್ರವಾರ ಬೆಳಿಗ್ಗೆ ಹಣ್ಣಿನ ಅಂಗಡಿಯನ್ನು ತೆರವು ಮಾಡಲಾಗಿದೆ ಎಂದರು. ನಾನು 10 ಸಾವಿರ ರು. ಹಣವನ್ನು ಲಂಚ ಕೇಳಿಲ್ಲ. ಆಯುಕ್ತರ ಸೂಚನೆಯಂತೆ ದಂಡ ಮಾತ್ರ ಕೇಳಿರುವುದು. ಲಂಚ ಕೇಳಿರುವುದು ನಿಜವಾದರೆ ನನ್ನ ಕೆಲಸಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದರು.