ಚಿಕ್ಕಮಗಳೂರಿನಲ್ಲಿ 38 ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆಗಾರರು, ಕಾರ್ಮಿಕರಲ್ಲಿ ಆತಂಕ ಮೂಡಿಸಿವೆ. ಆನೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ವಿರೋಧ ಹಾಗೂ ಅರಣ್ಯ ಇಲಾಖೆಯ ಕಾರ್ಯಾಚರಣೆ ಕುತೂಹಲ ಮೂಡಿಸಿದೆ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮಿತಿ ಮೀರಿದೆ. ಬೇಲೂರು ಭಾಗದಿಂದ ಮೂಡಿಗೆರೆ ಕಡೆಗೆ ಬಂದಿರುವ ಬರೋಬ್ಬರಿ 38 ಕಾಡಾನೆಗಳು ಇದೀಗ ಗೋಣಿಬೀಡು ಹೋಬಳಿಯ ಸುತ್ತಮುತ್ತಲಿನ ಕಾಫಿ ತೋಟಗಳಲ್ಲೇ ಬೀಡುಬಿಟ್ಟಿವೆ. ನಾಲ್ಕು ತಂಡಗಳಾಗಿ ಚದುರಿರುವ ಕಾಡಾನೆಗಳ ಹಿಂಡಿನಿಂದ ಬೆಳೆಗಾರರು, ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ.

ಬೇಲೂರಿನಿಂದ ಮೂಡಿಗೆರೆ ಕಡೆಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು

ಕಾಫಿ ತೋಟಗಳಲ್ಲೇ ಬೀಡುಬಿಟ್ಟಿರುವ ಗಜಪಡೆ

ಬೇಲೂರು ಭಾಗದಿಂದ ಬಂದಿರುವ ಬರೋಬ್ಬರಿ 38 ಕಾಡಾನೆಗಳು ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಸುತ್ತಮುತ್ತ ಸಂಚರಿಸುತ್ತಿವೆ. 2 ತಂಡಗಳಾಗಿ ವಿಭಜನೆಯಾಗಿರುವ ಆನೆಗಳು ಕಾಫಿ ತೋಟಗಳಲ್ಲೇ ವಾಸ್ತವ್ಯ ಹೂಡಿವೆ. ಬಾರದಹಳ್ಳಿ, ತುದಿಯಾಲ, ಹೊರಟ್ಟಿ, ನಂದೀಪುರ, ಮೂಡಸಸಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ಆತಂಕ ಹೆಚ್ಚಾಗಿದೆ.ಇನ್ನೊಂದೆಡೆ ಕಾಫಿ ಕೊಯ್ಲಿನ ಸಮಯದಲ್ಲೇ ಕಾಡಾನೆಗಳ ಉಪಟಳ ಹೆಚ್ಚಾಗಿರುವುದು ಬೆಳೆಗಾರರನ್ನು ಕಂಗೆಡಿಸಿದೆ.

ಕಾಫಿ ಕೊಯ್ಲಿನ ಸಮಯದಲ್ಲೇ ಬೆಳೆಗಾರರಿಗೆ ಎದುರಾದ ಸಂಕಷ್ಟ

ಇದು ಕಾಫಿನಾಡು ಚಿಕ್ಕಮಗಳೂರಿನ ಸದ್ಯದ ಪರಿಸ್ಥಿತಿ

ತೋಟಗಳಲ್ಲಿ ಆನೆಗಳ ಸಂಚಾರದಿಂದ ಬೆಳೆ ಹಾನಿಯಾಗಿದ್ದು, ಕಾರ್ಮಿಕರು ಹಾಗೂ ಬೆಳೆಗಾರರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ಹಿಮ್ಮೆಟ್ಟಿಸಿ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಚಿಕ್ಕಮಗಳೂರು ಡಿಎಫ್‌ಒ ಬೋರಯ್ಯ ತಿಳಿಸಿದ್ದಾರೆ.

ಇನ್ನು ಕಾಡಾನೆಗಳ ಮುಂದಿನ ನಡೆ ಏನು? ಅವುಗಳನ್ನು ಎಲ್ಲಿಗೆ ಸ್ಥಳಾಂತರಿಸಬೇಕು? ಎಂಬ ವಿಚಾರವಾಗಿ ಮೂಡಿಗೆರೆಯಲ್ಲಿ ಬೆಳೆಗಾರರು ಹಾಗೂ ರೈತರ ಸಭೆ ನಡೆಯಿತು. ಸಭೆಗೆ ಡಿಎಫ್‌ಒ ಬೋರಯ್ಯ ಕೂಡ ಆಗಮಿಸಿದ್ದರು. ಆದರೆ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಕೆಲವರು ಕಾಡಾನೆಗಳನ್ನು ಬಂದ ದಾರಿಯಲ್ಲೇ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದರೆ, ಮತ್ತೊಂದು ಗುಂಪು ತತ್ಕೊಳ ಮೀಸಲು ಅರಣ್ಯಕ್ಕೆ ಆನೆಗಳನ್ನು ಬಿಡಬಾರದು ಎಂದು ಆಗ್ರಹಿಸಿದೆ.

ಸದ್ಯ ಆನೆಗಳನ್ನು ಬಲವಂತವಾಗಿ ಡ್ರೈವ್ ಮಾಡುವುದಿಲ್ಲ. ಅವು ನೈಸರ್ಗಿಕವಾಗಿ ಸಾಗುವಂತೆ ನೋಡಿಕೊಳ್ಳಲಾಗುವುದು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಕಾಡಾನೆಗಳ ಸ್ಥಳಾಂತರದ ವಿಚಾರವಾಗಿ ಮತ್ತೊಂದು ಸಂಘರ್ಷ ಶುರುವಾಗಿದೆ. ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಮುತ್ತೋಡಿ ಪ್ರದೇಶಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವುದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮುತ್ತೋಡಿ ಸಮೀಪ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ನೋಡಿಕೊಂಡು ಮೂಡಿಗೆರೆ ಬಂದ್‌ಗೆ ಕರೆ ನೀಡಲಾಗುವುದು. ರಸ್ತೆ ತಡೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಆನೆಗಳನ್ನು ಡ್ರೈವ್ ಮಾಡುವ ಸಂದರ್ಭದಲ್ಲಿ ನಾವೇ ಅಡ್ಡ ನಿಂತು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ. ಪ್ರಾಣ ಹೋದರೂ ಲೆಕ್ಕಿಸುವುದಿಲ್ಲ ಎಂಬ ಆಕ್ರೋಶದ ಮಾತುಗಳನ್ನೂ ಪ್ರತಿಭಟನಾಕಾರರು ಆಡಿದ್ದಾರೆ.

ಒಂದೆಡೆ ಕಾಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಆನೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ಅರಣ್ಯ ಇಲಾಖೆಯ ಮುಂದಿನ ನಡೆ ಏನು ಎಂಬ ಕುತೂಹಲವೂ ಹೆಚ್ಚಾಗಿದೆ.

ಇನ್ನು ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಆನೆಗಳು ಸಂಚರಿಸುವ ಪ್ರದೇಶಗಳಲ್ಲಿ ತೋಟದ ಕೆಲಸಕ್ಕೆ ತೆರಳದಂತೆ, ಪಟಾಕಿ ಸಿಡಿಸದಂತೆ, ಕಲ್ಲು ತೂರದಂತೆ ಹಾಗೂ ಕೋಲಿನಿಂದ ಹೊಡೆಯದಂತೆ ಮನವಿ ಮಾಡಿದೆ. ಕಾಡಾನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದೆ.

ಒಟ್ಟಿನಲ್ಲಿ 38 ಕಾಡಾನೆಗಳ ವಿಚಾರದಲ್ಲಿ ಕಾಫಿನಾಡು ಮೂಡಿಗೆರೆಯಲ್ಲಿ ಆತಂಕ, ಆಕ್ರೋಶ ಮತ್ತು ಅನಿಶ್ಚಿತತೆ ಮನೆಮಾಡಿದೆ. ಕಾಡಾನೆಗಳಿಗೂ ಸುರಕ್ಷತೆ ಇರಬೇಕು, ಗ್ರಾಮಸ್ಥರ ಜೀವ ಮತ್ತು ಜೀವನೋಪಾಯಕ್ಕೂ ಭದ್ರತೆ ಸಿಗಬೇಕು. ಈ ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಅರಣ್ಯ ಇಲಾಖೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಈಗಿನ ಪ್ರಶ್ನೆ. (ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು)

YouTube video player