ಸರ್ಕಾರ, ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ನದಿಗೆ ತಾತ್ಕಲಿಕ ಬ್ರಿಡ್ಜ್ ನಿರ್ಮಾಣ ಮಾಡಿದ ಸ್ಥಳೀಯರು
ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ಸ್ಥಳೀಯರೇ ಸರ್ಕಾರ, ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ತಾತ್ಕಲಿಕವಾಗಿ ಕಾಲುಸಂಕವನ್ನು (ಬ್ರಿಡ್ಜ್) ನಿರ್ಮಾಣ ಮಾಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.03): ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ಸ್ಥಳೀಯರೇ ಸರ್ಕಾರ, ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ತಾತ್ಕಲಿಕವಾಗಿ ಕಾಲುಸಂಕವನ್ನು (ಬ್ರಿಡ್ಜ್) ನಿರ್ಮಾಣ ಮಾಡಿದ್ದಾರೆ. ಈ ಕಾಲುಸಂಕ ಇಲ್ಲ ಅಂದ್ರೆ ಇವರಿಗೆ ಗ್ರಾಮದಿಂದ ಹೊರಗಡೆ ಬರೋಕೆ ದಾರಿಯೇ ಇಲ್ಲ. ಹಾಗಾಗೀ ನಮಗೊಂದು ತೂಗುಸೇತುವೆ ಮಾಡಿಕೊಡಿ ಅಂತಾ ಗ್ರಾಮಸ್ಥರು ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರ ಬಳಿಯೂ ಹತ್ತಾರು ವರ್ಷಗಳಿಂದ ಕೇಳುತ್ತಲೇ ಬರ್ತಿದ್ದಾರೆ. ಆದ್ರೆ ಯಾರು ಕೂಡ ಇಲ್ಲಿಯವರೆಗೂ ಈ ಜನರ ಸಮಸ್ಯೆಯನ್ನ ಪರಿಹರಿಸೋ ಮನಸ್ಸೇ ಮಾಡಿಲ್ಲ. ಈ ನದಿಯನ್ನೇ ದಾಟಿ ವಿದ್ಯಾರ್ಥಿಗಳು ಪೇಟೆಗೆ ಬಂದು ಪ್ರತಿನಿತ್ಯ ವಿದ್ಯಾಭ್ಯಾಸ ಮಾಡಬೇಕು. ಜನರು ಕೂಡ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗ್ಬೇಕು ಅಂದ್ರೂ ಇದೇ ನದಿಯನ್ನ ದಾಟಬೇಕು.
ಹಾಗಂತ ಈ ನದಿಯನ್ನ ದಾಟೋದು ಸಾಮಾನ್ಯದ ಮಾತಲ್ಲ, ಮಳೆಗಾಲದಲ್ಲಂತೂ ತುಂಗಾನದಿಯನ್ನ ದಾಟೋ ಮಾತೇ ಇಲ್ಲ ಬಿಡಿ. ಯಾಕಂದ್ರೆ ಬೇಸಿಗೆಯಲ್ಲಿಯೇ ಈ ನದಿಯ ನೀರು ಎದೆಯಮಟ್ಟಕ್ಕೆ ಇರುತ್ತೆ. ಇನ್ನೂ ಮಳೆಗಾಲದಲ್ಲಿ ತುಂಗಾನದಿಯ ಆರ್ಭಟ ಜೋರಾಗಿರುತ್ತೆ. ಆದ್ರೂ ಬೇಸಿಗೆಯಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ದಾಟಬೇಕು ಅಂದ್ರೆ ಜೀವವನ್ನ ಪಣಕ್ಕಿಟ್ಟು ಜನರು ದಾಟಬೇಕು. ಹಾಗಾಗಿಯೇ ನಮಗೊಂದು ತೂಗುಸೇತುವೆ ಮಾಡಿಕೊಡಿ ಅಂತಾ ಪರಿಪರಿಯಾಗಿ ಬೇಡಿಕೊಂಡ್ರೂ ಯಾರೂ ಕೂಡ ಕ್ಯಾರೇ ಅನ್ನಲಿಲ್ಲ. ಹಾಗಂತ ಈ ಗ್ರಾಮದ ಜನರು ಕೈ ಕಟ್ಟಿ ಕೂರಲಿಲ್ಲ, ತಾವೇ ಕಾಲುಸಂಕವೊಂದನ್ನ ನಿರ್ಮಿಸಿಕೊಂಡು ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
Chikkamagaluru: ಕಾಫಿನಾಡು ಜಿಲ್ಲೆಯ ಹೊರನಾಡು, ಶೃಂಗೇರಿಯಲ್ಲಿ ನವರಾತ್ರಿ ಸಂಭ್ರಮ
ಹತ್ತಾರು ವರ್ಷಗಳಿಂದ ಮಾಡಿದ ಮನವಿಗೆ ಕ್ಯಾರೆ ಎನ್ನದ ಜನಪ್ರತಿನಿಧಿಗಳು: ಹರೇಬಿಳಲು ಗ್ರಾಮ ತುಂಗಾ ನದಿಯ ಆಚೆಗಿರುವ ಗ್ರಾಮ. ಮಳೆಗಾಲದಲ್ಲಿ ಆ ಗ್ರಾಮದ ಸ್ಥಿತಿಯಂತೂ ಹೇಳತೀರದು. ಒಂದು ರೀತಿಯಾಗಿ ಹೊರಜಗತ್ತಿನ ಸಂಪರ್ಕವನ್ನ ಕಳೆದುಕೊಂಡು ಬದುಕಬೇಕಾದ ದಯನೀಯ ಬದುಕು ಆ ಜನರದ್ದು. ಹೀಗಾಗಿ ನಮಗೊಂದು ತೂಗುಸೇತುವೆ ಕಲ್ಪಿಸಿಕೊಡಿ ಅಂತಾ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಆ ಊರಿನ ಜನರ ಕೂಗು ನಮ್ಮನಾಳುವ ಸರ್ಕಾರಕ್ಕೆ ಮುಟ್ಟಲೇ ಇಲ್ಲ. ಹಾಗಂತ ಅವ್ರೇನು ಸುಮ್ನೆ ಕೂತಿಲ್ಲ. ಸರ್ಕಾರ, ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಆ ನದಿಗೆ ಕಾಲುಸಂಕವನ್ನ ನಿರ್ಮಿಸಿಕೊಂಡಿದ್ದಾರೆ.
ತಾವೇ ಮರದ ಕಂಬಗಳನ್ನ ತಂದು ನದಿಗೆ ಅಡ್ಡಲಾಗಿ ಹಾಕಿ ಕಳೆದ ಒಂದು ತಿಂಗಳಿಂದ ಹತ್ತಾರು ಜನರು ಶ್ರಮಪಟ್ಟು ಪುಟ್ಟದೊಂದು ಕಾಲುಸಂಕವನ್ನ ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ನಮ್ಮನಾಳುವ ಜನನಾಯಕರಿಗೆ, ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಮನಸ್ಸು ಮಾಡಿದ್ರೆ, ಇಚ್ಚಾಶಕ್ತಿ ಇದ್ರೆ ಏನ್ ಬೇಕಾದ್ರೂ ಮಾಡಬಹುದು. ನಾವೇ ಹೀಗೊಂದು ಸೇತುವೆ ನಿರ್ಮಿಸಿಕೊಳ್ಳಬಹುದು ಅಂದ್ರೆ ಸರ್ಕಾರದ ಅನುದಾನದಲ್ಲಿ ನಮ್ಮೂರಿಗೊಂದು ಶಾಶ್ವತ ತೂಗುಸೇತುವೆ ಮಾಡಿಕೊಡಲು ನಿಮಗೇನು ದಾಢಿ ಅಂತಾ ಪ್ರಶ್ನಿಸಿದ್ದಾರೆ. ಸದ್ಯ ಕಾಲುಸಂಕ ನಿರ್ಮಾಣದಿಂದ ಹರೇಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಿದಂತಾಗಿದೆ. ಈ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು, ಜನರು ಗ್ರಾಮದಿಂದ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸಾಧ್ಯವಾಗಿದೆ.
Chikkamagaluru: ನವರಾತ್ರಿ ಗೊಂಬೆಗಳಲ್ಲಿ ಮೈಸೂರು ರಾಜ ಪರಂಪರೆಯ ಅನಾವರಣ
ಶಾಶ್ವತ ಸೇತುವೆ ನಿರ್ಮಾಣಕ್ಕೆ ಒತ್ತಾಯ: ಸದ್ಯ ಕಾಲುಸಂಕವನ್ನೆನೋ ಜನರು ನಿರ್ಮಿಸಿಕೊಂಡಿದ್ದಾರೆ, ಆದ್ರೆ ಇದು ತಾತ್ಕಾಲಿಕ ಬಳಕೆಗೆ ಮಾತ್ರ. ಯಾಕಂದ್ರೆ ಮತ್ತೆ ಮಳೆಗಾಲ ಶುರುವಾಗುವ ಹೊತ್ತಿಗೆ ತುಂಗಾ ನದಿಯ ಆರ್ಭಟಕ್ಕೆ ಈ ಕಾಲುಸಂಕ ಕೊಚ್ಚಿಕೊಂಡು ಹೋಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ಹಾಗೆ ತಾತ್ಕಲಿಕವಾಗಿ ಓಡಾಡಲು ಈ ಸೇತುವೆಯನ್ನ ಮಾಡಿಕೊಂಡಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ಇತ್ತ ಗಮನಹರಿಸಿ, ಹರೇಬಿಳಲು ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಮುಕ್ತಿ ಕಾಣಿಸುವಂತಾಗಲಿ ಅನ್ನೋದು ಆಶಯವಾಗಿದೆ.