ಒಬ್ಬ ವಕೀಲನಿಗೆ ಹೊಡೆದ್ರೆ, 100 ಪೊಲೀಸರ ಕೊಲೆ ಮಾಡ್ತೀವೆಂದ ಹಿರಿಯ ವಕೀಲರಿಂದ ಬೇಷರತ್ ಕ್ಷಮೆ!
ಒಬ್ಬ ವಕೀಲನ ಮೇಲೆ ಹಲ್ಲೆ ಮಾಡಿದರೆ 100 ಪೊಲೀಸರನ್ನು ಕೊಲೆ ಮಾಡುವುದಾಗಿ ಹೇಳಿದ್ದ ವಕೀಲರು ತಪ್ಪನ್ನು ಎಚ್ಚೆತ್ತುಕೊಂಡು ಬೇಷರತ್ ಕ್ಷಮೆ ಕೇಳಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಜಯಪುರ (ಡಿ.06): ಚಿಕ್ಕಮಗಳೂರಿನಲ್ಲಿ ಯುವ ವಕೀಲನ ಮೇಲೆ ಪೊಲೀಸರು ಹಲ್ಲೆ ಮಾಡಿದ ಪ್ರಕರಣವನ್ನು ವಿರೋಧಿಸಿ ವಿಜಯಪುರದಲ್ಲಿ ಮಂಗಳವಾರ (ಡಿ.5ರಂದು) ನಡೆದ ಜಿಲ್ಲಾ ಮಟ್ಟದ ವಕೀಲರ ಪ್ರತಿಭಟನೆಯ ವೇಳೆ ಒಬ್ಬ ವಕೀಲನ ಮೇಲೆ ಹಲ್ಲೆ ಮಾಡಿದರೆ 100 ಪೊಲೀಸರನ್ನು ಕೊಲೆ ಮಾಡುವುದಾಗಿ ಹೇಳಿದ್ದ ವಕೀಲರು 24 ಗಂಟೆಗಳು ಕಳೆಯುವುದರೊಳಗೆ ತಮ್ಮ ತಪ್ಪನ್ನು ಎಚ್ಚೆತ್ತುಕೊಂಡು ಬೇಷರತ್ ಕ್ಷಮೆ ಕೇಳಿ ವಿಡಿಯೋ ಹಂಚಿಕೊಂಡಿದ್ದಾರೆ.
ಚಿಕ್ಕಮಗಳೂರಿನ ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಕೀಲರಿಮದ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ಇದರ ಭಾಗವಾಗಿ ವಿಜಯಪುರ ನಗರದಲ್ಲಿಯೂ ವಕೀಲರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಗಾಂಧಿ ವೃತ್ತದ ಬಳಿ ಪ್ರತಿಭಟನಾ ಮೆರವಣಿಗೆ ಹೊರಟಾದ ಹಿರಿಯ ವಕೀಲ ಸುಭಾಷ ಛಾಯಾಗೋಳ ಅವರು ಮೈಕ್ ಹಿಡಿದುಕೊಂಡು ಭಾಷಣ ಮಾಡುತ್ತಾ, ಪೊಲೀಸರು ಒಬ್ಬ ವಕೀಲನ ಮೇಲೆ ಹಲ್ಲೆ ಮಾಡಿದರೆ, 100 ಪೊಲೀಸರನ್ನು ಕೊಲೆ ಮಾಡುತ್ತೇವೆ ಎಂದು ಹೇಳಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದರು.
ಸಿಎಂ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಗೆ ಐಸಿಸ್ ನಂಟು, ತನಿಖೆ ನಡೆಸುವಂತೆ ಅಮಿತ್ ಶಾಗೆ ಯತ್ನಾಳ್ ಪತ್ರ
ಆದರೆ, ವಕೀಲ ಸುಭಾಷ್ ಛಾಯಾಗೋಳ ಅವರ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಬುಧವಾರ (ಡಿ.6ರಂದು) ಭಾಷಣದ ವೇಳೆ ಭಾವೇದ್ವೇಗಕ್ಕೆ ಒಳಗಾಗಿ ಹಾಗೂ ನಾಲಿಗೆ ತಪ್ಪಿ ಪೊಲೀಸರ ವಿರುದ್ಧವಾಗಿ ಹೇಳಿಕೆ ನೀಡಿದ್ದೇನೆ. ಇದರಿಂದ ಪೊಲೀಸರ ಮನಸ್ಸಿಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಿಬಿಡಿ ಎಂದು ವಕೀಲ ಸುಭಾಷ ಛಾಯಾಗೋಳ ಅವರು ವಿಡಿಯೋ ಮಾಡಿ ಮಾಧ್ಯಮಗಳು ಹಾಗೂ ವಕೀಲರ ಗುಂಪುಗಳಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಈಗ ತಮ್ಮ ತಪ್ಪನ ಅರಿವಾಗಿದೆ, ನಾನು ಸ್ಲಿಪ್ ಆಫ್ ಟಂಗ್ ನಲ್ಲಿ ಪೊಲೀಸರಿಗೆ ಮಾತನಾಡಿದ್ದು ವಿಷಾದನೀಯ. ಪೊಲೀಸ್ ಇಲಾಖೆಗೆ ನೋವಾಗಿದ್ದಲ್ಲಿ ನಾನು ಅವರಿಗೆ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರನ್ನು ಹತ್ಯೆ ಮಾಡುವುದಾಗಿ ಭಾಷಣ ಮಾಡಿದ್ದ ವಕೀಲ ಸುಭಾಷ್ ಛಾಯಾಗೋಳ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಎಂದು ಹೇಳಲಾಗುತ್ತಿದೆ. ಆದರೆ, ಈಗ ಬೇಷರತ್ ಕ್ಷಮೆಯಾಚನೆ ಮಾಡಿರುವ ವಕೀಲರು ಇನ್ನು ಮುಂದಾದರೂ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರಿಂದಲೇ ದಿಢೀರ್ ಪ್ರತಿಭಟನೆ, ದಾಂಧಲೆ ಮಾಡಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ!
ಪ್ರತಿಭಟನೆ ವೇಳೆ ವಕೀಲರು ಹೇಳಿದ್ದೇನು?
ವಕೀಲರ ಮೇಲೆ ಹಲ್ಲೆ ಮಾಡಿದ್ದಕ್ಕೆ ಇಡೀ ರಾಜ್ಯದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಅದೇ ರೀತಿ ಇನ್ನುಮೇಲೆ ಯಾರಾದರೂ ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಿದರೆ ನಾವು 100 ಪೊಲೀಸರನ್ನು ಕೊಲೆ ಮಾಡುವಂತಹ ಕೆಲಸ ಮಾಡುತ್ತೇವೆ. ಯಾಕಪ್ಪಾ ಅಂದರೆ ಇದು ಪೊಲೀಸರ ರಾಜ್ಯವಲ್ಲ, ವಕೀಲರ ರಾಜ್ಯವೆಂದು ಹೇಳಿದರು.