ಸಿಎಂ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಗೆ ಐಸಿಸ್ ನಂಟು, ತನಿಖೆ ನಡೆಸುವಂತೆ ಅಮಿತ್ ಶಾಗೆ ಯತ್ನಾಳ್ ಪತ್ರ
ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ವಿಜಯಪುರದ ಮೌಲ್ವಿ ತನ್ವೀರ್ ಪೀರಾಗೆ ಐಸಿಸ್ ನಂಟು ಇದ್ದು, ಈ ಬಗ್ಗೆ ತನಿಖೆ ಮಾಡುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಬೆಂಗಳೂರು (ಡಿ.6): ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾಗಿದ್ದು ಇನ್ನಷ್ಟು ದೊಡ್ಡ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ವಿಶ್ವದ ಅತ್ಯಂತ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಹಾಗೂ ಭಯೋತ್ಪಾದಕರ ಬಗ್ಗೆ ಅನುಕಂಪ ತೋರಿಸುವ ವ್ಯಕ್ತಿಯ ಜೊತೆ ವೇದಿಕೆ ಹಂಚಿಕೊಂಡಿದ್ದರು ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಇದಕ್ಕೆ ಮುಸ್ಲಿಂ ಮೌಲ್ವಿಗಳು ಈ ಬಗ್ಗೆ ಯತ್ನಾಳ್ ಸಾಕ್ಷಿ ನೀಡಬೇಕು ಎಂದು ಮಾಧ್ಯಮಗಳ ಮೂಲಕ ಒತ್ತಾಯ ಮಾಡಿದಾಗ, ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಅವರ ಮೇಲೆ ಯತ್ನಾಳ್ ಆರೋಪಿಸಿದ್ದರು. ತನ್ವೀರ್ ಪೀರಾಗೆ ವಿದೇಶಿ ನಂಟು ಇದೆ. ವಿದೇಶದಿಂದ ಭಾರತಕ್ಕೆ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಾರೆ. ಅದಲ್ಲದೆ, ಭಯೋತ್ಪಾದಕರಿಗೆ ನೆರವು ನೀಡುವ ಸಂಸ್ಥೆಗಳ ಜೊತೆ ನಂಟು ಹೊಂದಿದ್ದಾರೆ ಎಂದು ಆರೋಪ ಮಾಡಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ನಾನು ನಿಮ್ಮ ಗಮನಕ್ಕೆ ತರುವ ವಿಚಾರವೇನೆಂದರೆ, ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅವರು ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್ ಪರ ಅನುಕಂಪ ಹೊಂದಿರುವ ಮೌಲ್ವಿ ತನ್ವೀರ್ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ಮಧ್ಯಪ್ರಾಚ್ಯದಲ್ಲಿ ಅವರು ಮೂಲಭೂತವಾದಿ ಸಂಘಟನೆಗಳನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿದೆ. ಇನ್ನೂ ಅಚ್ಚರಿಯ ವಿಚಾರವೇನೆಂದರೆ, ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅವರನ್ನು ಪೀರಾ ಭೇಟಿ ಮಾಡಿರುವುದು ಇದು ಮೊದಲೇನೆಲ್ಲ. ಈಗಾಗಲೇ ಹಲವು ಬಾರಿ ಇವರಿಬ್ಬರು ಭೇಟಿಯಾಗಿದ್ದಾರೆ.
ದೇಶದಲ್ಲಿ ದ್ವೇಷದ ಮಾತಾವರಣ ನಿರ್ಮಾಣ ಮಾಡಬೇಕು ಎನ್ನುವ ದೃಷ್ಟಿಯಿಂದ ತನ್ವೀರ್ ಪೀರಾ ಮುಸ್ಲಿಂ ದೇಶಗಳಿಂದ ಹಣಕಾಸು ನೆರವು ಪಡೆಯುತ್ತಿದ್ದಾರೆ. ಈ ಬಗ್ಗೆ ನನಗೆ ಕೆಲವೊಂದು ಮಾಹಿತಿಗಳೂ ಇವೆ. ತಮ್ಮ ಆಪ್ತ ಭದ್ರತೆ ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳ ಎಚ್ಚರಿಕೆಯನ್ನೂ ಮೀರಿ, ಪೀರಾನನ್ನು ಭೇಟಿಯಾಗಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಬರೆದಿದ್ದಾರೆ.
Breaking: ಐಸಿಸ್ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ, ದಾಖಲೆ ಬಿಡುಗಡೆ ಮಾಡಿದ ಯತ್ನಾಳ್!
ನಾನು ನಿಮಗೆ ಮನವಿ ಮಾಡುತ್ತಿರುವುದೇನೆಂದರೆ, ಕೇಂದ್ರದ ಅಧಿಕಾರಿಗಳು ತನ್ವೀರ್ ಪೀರಾ ಅವರನ್ನು ವಿಚಾರಣೆ ಮಾಡಬೇಕು. ಐಸಿಸ್ ನಾಯಕರನ್ನು ಭೇಟಿಯಾಗಿರುವುದರ ಹಿಂದಿನ ಉದ್ದೇಶವೇನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಪ್ರಯಾಣಕ್ಕೆ ಹಣ ಎಲ್ಲಿಂದ ಬರುತ್ತದೆ ಎನ್ನುವುದನ್ನೂ ತನಿಖೆ ಮಾಡಬೇಕು. ಅವರ ಫಂಡಿಂಗ್ ಮ್ಯಾನೇಜರ್ ಯಾರು? ಸಿದ್ಧರಾಮಯ್ಯ ಅವರನ್ನು ಬಹಳ ಬಾರಿ ಭೇಟಿಯಾಗಿರುವುದರ ಹಿಂದಿನ ಉದ್ದೇಶವೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಇದು ರಾಷ್ಟ್ರೀಯ ಭದ್ರತೆಯ ವಿಚಾರವಾಗಿರುವ ಕಾರಣ, ಈ ಪ್ರಕರಣವನ್ನು ಎನ್‌ಐಎ ತನಿಖೆ ಮಾಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.