ಪೊಲೀಸರಿಂದಲೇ ದಿಢೀರ್ ಪ್ರತಿಭಟನೆ, ದಾಂಧಲೆ ಮಾಡಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ!
ಪೊಲೀಸ್ ಠಾಣೆಯೊಳಗೆ ನುಗ್ಗಿ ದಾಂಧಲೆ ಮಾಡಿರುವ ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಟೌನ್ ಸ್ಟೇಷನ್ ಎದುರು ಪೊಲೀಸರು ಶನಿವಾರ ರಾತ್ರಿ ಧರಣಿ ನಡೆಸಿದರು. ಬಳಿಕ ಮೆರವಣಿಗೆಯಲ್ಲಿ ಹೊರಟು ಹನುಮಂತಪ್ಪ ವೃತ್ತದಲ್ಲಿ ರಾತ್ರಿ 10 ಗಂಟೆಯ ವೇಳೆಗೆ ರಸ್ತೆ ತಡೆ ನಡೆಸಿದರು.
ಚಿಕ್ಕಮಗಳೂರು (ಡಿ.3) : ಪೊಲೀಸ್ ಠಾಣೆಯೊಳಗೆ ನುಗ್ಗಿ ದಾಂಧಲೆ ಮಾಡಿರುವ ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಟೌನ್ ಸ್ಟೇಷನ್ ಎದುರು ಪೊಲೀಸರು ಶನಿವಾರ ರಾತ್ರಿ ಧರಣಿ ನಡೆಸಿದರು. ಬಳಿಕ ಮೆರವಣಿಗೆಯಲ್ಲಿ ಹೊರಟು ಹನುಮಂತಪ್ಪ ವೃತ್ತದಲ್ಲಿ ರಾತ್ರಿ 10 ಗಂಟೆಯ ವೇಳೆಗೆ ರಸ್ತೆ ತಡೆ ನಡೆಸಿದರು.
ಕಾನೂನು ಪ್ರಕಾರ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಅವರ ರಕ್ಷಣೆಗೆ ಇಲಾಖೆಯ ಅಧಿಕಾರಿಗಳು ಬರಬೇಕು. ನಮ್ಮ ದೂರನ್ನು ತೆಗೆದುಕೊಂಡು ವಕೀಲರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ಡಿಕೆಶಿ ವಕೀಲರೇ ಈಗ ಸರ್ಕಾರದ ಅಡ್ವೋಕೇಟ್ ಜನರಲ್: ಎಂ.ಪಿ.ರೇಣುಕಾಚಾರ್ಯ ಟೀಕೆ
ರಾತ್ರಿ ಪೊಲೀಸರು ಟೌನ್ ಸ್ಟೇಷನ್ ಎದುರು ಧರಣಿ ಆರಂಭಿಸುತ್ತಿದ್ದಂತೆ ಇದೇ ಪ್ರಕರಣದಲ್ಲಿ ಅಮಾನತು ಗೊಂಡಿರುವ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು, ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಧರಣಿ ನಡೆಸಿದರು. ಈ ಪ್ರತಿಭಟನೆ ಕಾವೇರುತ್ತಿದ್ದಂತೆ ಸಾರ್ವಜನಿಕರು ಸಾಥ್ ನೀಡಿದರು.
ರಾತ್ರಿ 9. 30ರ ವೇಳೆಗೆ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟೌನ್ ಪೊಲೀಸ್ ಠಾಣೆಯಲ್ಲಿಯೇ ಇದ್ದ ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ ಅವರು ಹೊರಗೆ ಹೋಗುತ್ತಿದ್ದಂತೆ ಪೊಲೀಸರು ಹಾಗೂ ಸಾರ್ವಜನಿಕರು ಮಾರ್ಕೆಟ್ ರಸ್ತೆಯ ಮೂಲಕ ಕೆ.ಎಂ. ರಸ್ತೆಗೆ ತೆರಳಿ ಅಲ್ಲಿಂದ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಪ್ರತಿಭಟನೆ ಕ್ಷಣ ಕ್ಷಣಕ್ಕೂ ಕಾವೇರುತ್ತಿತ್ತು. ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸದೆ ಹೋದರೆ ಸೋಮವಾರ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಗಳಲ್ಲಿನ ಸಿಬ್ಬಂದಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಟುಂಬಸ್ಥರು; ಗುರುವಾರದ ಘಟನೆಯ ನಂತರ ಅಮಾನತ್ತಾದ ಪೊಲೀಸರು ಕುಟುಂಬಸ್ಥರ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ವಿಚಾರದಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಹೊರಹಾಕಿದ್ದಾರೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಹೈಕೋರ್ಟ್ ಮಾಹಿತಿ ಪಡೆದು ಮಂಗಳವಾರದ ಒಳಗೆ ವರದಿ ಹಾಗೂ ಕ್ರಮದ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ರಕ್ಷಣೆ ನೀಡೋ ಪೊಲೀಸರಿಗೆ ರಕ್ಷಣೆ ಇಲ್ಲ ಎಂದು ಅಳಲು ತೋಡಿ ಕೊಂಡಿರುವ ಕುಟುಂಬಸ್ಥರು ಅವರಿಗೆ ಹೆಚ್ಚು ಕಮ್ಮಿಯಾದರೆ ಹೊಣೆ ಯಾರು, ನಮ್ಮ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.
ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಪ್ರೀತಂ ಮೇಲೆ ಈ ಹಿಂದೆಯೇ ಅಲ್ಲೂರು ಠಾಣೆಯಲ್ಲಿ ಗಲಾಟೆ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಎರಡು ಕೇಸುಗಳು ದಾಖಲಾಗಿವೆ. ಅವರು ತುಂಬಾ ದುಡುಕಿನ ಮನುಷ್ಯ. ಮೊನ್ನೆ ನಗರ ಠಾಣೆಯಲ್ಲಿಯೂ ಅವರೇ ಮೊದಲು ಪೊಲೀಸರ ಮೇಲೆ ಕೈ ಮಾಡಿದ್ದಾರೆ. ಪೊಲೀಸರು ಅವರ ಮೇಲೆ ಹಲ್ಲೆ ಮಾಡಿಲ್ಲ. ಅವರೇ ಹೊರಗೆ ಹೋದ ನಂತರ ಕೈ ಮತ್ತು ಹೊಟ್ಟೆಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸಂವಿಧಾನ ಭಾರತೀಯರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುತ್ತದೆ: ನ್ಯಾ.ಉಮಾ ಅಭಿಮತ
ಪೊಲೀಸರು ಹಾಗಾದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಬೇಡವೆ ? ಹೆಲ್ಮಟ್ ಹಾಕಿಲ್ಲ ಎಂದು ಕೇಳಿದ್ದು ತಪ್ಪಾ? ವಕೀಲರಿಗೆ ನ್ಯಾಯ ಕೇಳಲು ಬಾರ್ ಕೌನ್ಸಿಲ್, ನ್ಯಾಯಾಲಯ ಎಲ್ಲಾ ಇದೆ. ಆದರೆ ಪೊಲೀಸರಿಗೆ ಅನ್ಯಾಯವಾದರೆ ಯಾರೂ ಕೇಳುವವರು ಇಲ್ಲವಾ ? ಪೊಲೀಸರು ಹಗಲು ರಾತ್ರಿಯೆನ್ನದೇ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ರಕ್ಷಣೆ ನೀಡುವವರು ಯಾರೂ ಎಂದು ಕುಟುಂಬಸ್ಥರು ಪ್ರಶ್ನಿಸಿದರು.