ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿ ಬೆಟ್ಟಗಳಲ್ಲಿ ಅಪರೂಪದ ನೀಲಕುರಿಂಜಿ ಹೂವು ಅರಳಿದೆ ಎಂಬ ಸುಳ್ಳು ವೀಡಿಯೋ ನಂಬಿ ಪ್ರವಾಸಿಗರು ಬಂದು ನಿರಾಶರಾಗುತ್ತಿದ್ದಾರೆ. ವಾಸ್ತವದಲ್ಲಿ ಅಲ್ಲಿ ಅರಳಿರುವುದು ಪ್ರತಿ ವರ್ಷ ಬಿಡುವ 'ಗುರಿಂಜೆ' ಹೂವುಗಳಾಗಿವೆ.

ಚಿಕ್ಕಮಗಳೂರು (ಅ.3): ಜಿಲ್ಲೆಯ ಪ್ರಸಿದ್ಧ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಬೆಟ್ಟಗಳಲ್ಲಿ ಅಪರೂಪದ 'ನೀಲಕುರಿಂಜಿ' (Neelakurinji) ಹೂವುಗಳು ಕಣ್ಮನ ಸೆಳೆಯುವಂತೆ ಅರಳಿವೆ ಎಂಬ ಗಾಳಿ ಸುದ್ದಿಗೆ ಮರುಳಾಗಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ನೂರಾರು ಪ್ರವಾಸಿಗರು ತೀವ್ರ ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ. ಸೋಶಿಯಲ್‌ ಮಿಡಿಯಾದಲ್ಲಿ ಹಳೆಯ ವೀಡಿಯೋಗಳನ್ನು ಪ್ರಸ್ತುತ ಹರಿಬಿಡಲಾಗುತ್ತಿದ್ದು, ಇದನ್ನು ನಂಬಿ ಪ್ರವಾಸಿಗರು ಬೆಟ್ಟಗುಡ್ಡಗಳಿಗೆ ದಂಡೆತ್ತಿ ಬರುತ್ತಿದ್ದಾರೆ. ಆದರೆ, ಈ ವರ್ಷ ಬೆಟ್ಟಗಳಲ್ಲಿ ಅಂತಹ ಯಾವುದೇ ಬೃಹತ್ ಮಟ್ಟದ ನೀಲಕುರಿಂಜಿ ಹೂವುಗಳ ಸಮೃದ್ಧವಾಗಿ ಅರಳಿಲ್ಲ ಎಂದು ಅರಣ್ಯಾಧಿಕಾರಿಗಳು ಹಾಗೂ ಸಸ್ಯಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ.

ಪರ್ವತದ ಇಳಿಜಾರಿನುದ್ದಕ್ಕೂ ನೇರಳೆ ಬಣ್ಣದ ಹೂವುಗಳ ರತ್ನಗಂಬಳಿ ಹಾಸಿರುವುದನ್ನು ನೋಡಲು ಬಂದ ಪ್ರವಾಸಿಗರಿಗೆ ನಿರಾಶೆಯಾಗುತ್ತಿದ್ದರೆ, ಇನ್ನೊಂದೆಡೆ ಇದ್ದಕ್ಕಿದ್ದಂತೆ ಹೆಚ್ಚಿದ ಪ್ರವಾಸಿಗರ ದಟ್ಟಣೆಯಿಂದಾಗಿ ಪರಿಸರ ಸೂಕ್ಷ್ಮ ಪ್ರದೇಶಗಳಾದ ಶೋಲಾ ಅರಣ್ಯ ಹಾಗೂ ಹುಲ್ಲುಗಾವಲುಗಳ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ. ಅಧಿಕೃತ ಮೂಲಗಳಿಂದ ಮಾಹಿತಿ ದೃಢಪಡಿಸಿಕೊಂಡ ನಂತರವೇ ಪ್ರವಾಸ ಕೈಗೊಳ್ಳುವಂತೆ ತಜ್ಞರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

"ವೀಡಿಯೋ ನೋಡಿ ಬಂದೆವು, ಇಲ್ಲಿ ಏನೂ ಇಲ್ಲ!":

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ನೇರಳೆ ಹೂವುಗಳನ್ನು ಕಣ್ತುಂಬಿಕೊಳ್ಳಲು ಮೈಸೂರಿನಿಂದ ಗೆಳೆಯರೊಂದಿಗೆ ಬಂದಿದ್ದ ಅರ್ಜುನ್ ಎಂಬ ಪ್ರವಾಸಿಗರು ತಮ್ಮ ಬೇಸರ ವ್ಯಕ್ತಪಡಿಸಿ, "ಸೋಶಿಯಲ್ ಮೀಡಿಯಾದಲ್ಲಿದ್ದ ಒಂದು ವೀಡಿಯೋ ನಮ್ಮನ್ನು ತಪ್ಪುದಾರಿಗೆಳೆಯಿತು. ನಮಗೆ ಈ ಭಾಗಕ್ಕೆ ಬರುವ ಯಾವುದೇ ಯೋಜನೆಯಿರಲಿಲ್ಲ, ಕೇವಲ ನೀಲಕುರಿಂಜಿ ಹೂವುಗಳನ್ನು ನೋಡಲೆಂದೇ ಬಂದಿದ್ದೆವು. ಆದರೆ ಇಲ್ಲಿಗೆ ಬಂದಾಗ ನಿರಾಶೆಯಾಯಿತು, ಮುಂದಿನ ಬಾರಿ ಪ್ರಯತ್ನಿಸುತ್ತೇವೆ" ಎಂದಿದ್ದಾರೆ.

ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಿಂದ ಗಿರಿಕಂಡದ ಗಾಳಿಕೆರೆಗೆ ಹೋಗುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಒಂದೊಂದು ಗಿಡಗಳಲ್ಲಿ ಕೆಲವೇ ಕೆಲವು ನೀಲಿ ಹೂವುಗಳು ಬಿಡಿಬಿಡಿಯಾಗಿ ಅರಳಿವೆಯೇ ಹೊರತು, ಇಡೀ ಬೆಟ್ಟ ಪ್ರದೇಶವನ್ನು ಆವರಿಸಿಲ್ಲ.

ನೀಲಕುರಿಂಜಿ ಅರಳುವುದು 12 ವರ್ಷಗಳಿಗೊಮ್ಮೆ ಮಾತ್ರ!

ವೈಜ್ಞಾನಿಕವಾಗಿ Strobilanthes kunthiana ಎಂದು ಕರೆಯಲ್ಪಡುವ ನೀಲಕುರಿಂಜಿ ಸಸ್ಯವು 12 ವರ್ಷಗಳಿಗೊಮ್ಮೆ ಮಾತ್ರ ಸಂಪೂರ್ಣವಾಗಿ ಅರಳುತ್ತದೆ. 2022 ರಲ್ಲಿ ಈ ಬೆಟ್ಟಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೀಲಕುರಿಂಜಿ ಹೂವುಗಳು ಅರಳಿ ಇಡೀ ಪರ್ವತ ಪ್ರದೇಶವನ್ನು ನೇರಳೆ ಮಯವಾಗಿಸಿದ್ದವು. ಮತ್ತೆ ಅದೇ ಪ್ರಮಾಣದಲ್ಲಿ ಈ ಅಪರೂಪದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಪ್ರವಾಸಿಗರು ಇನ್ನು ಬರೋಬ್ಬರಿ 8 ವರ್ಷಗಳ ಕಾಲ ಕಾಯಲೇಬೇಕಾಗಿದೆ.

ಕೆಲವು ಕಿಡಿಗೇಡಿಗಳು ಬಿಡಿ ಗಿಡಗಳಲ್ಲಿ ಅರಳಿದ ಹೂವುಗಳನ್ನು ವೀಡಿಯೋ ಮಾಡಿ, ಅದಕ್ಕೆ ಹಳೆಯ ವೀಡಿಯೋಗಳನ್ನು ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರುವುದರಿಂದ ಈ ಗೊಂದಲ ನಿರ್ಮಾಣವಾಗಿದೆ. ಚಂದ್ರದ್ರೋಣ ಶ್ರೇಣಿಯಲ್ಲಿ ಬೀಡುಬಿಟ್ಟಿರುವ ಪರಿಸರವಾದಿಗಳು ಹಾಗೂ ಸಸ್ಯಶಾಸ್ತ್ರ ಸಂಶೋಧಕರ ಬಳಿ ಬರುವ ಪ್ರವಾಸಿಗರು ಹೂವುಗಳು ಎಲ್ಲಿವೆ ಎಂದು ವಿಚಾರಿಸುತ್ತಿದ್ದಾರೆ, ಆದರೆ ಅವರಿಗೆ ತೋರಿಸಲು ಅಲ್ಲಿ ಯಾವುದೇ ಹೂವುಗಳಿಲ್ಲ.

ದಾಖಲೆಗಳ ಪ್ರಕಾರ, 2006 ರಲ್ಲಿ ಈ ಬೆಟ್ಟಗಳು ಸಂಪೂರ್ಣವಾಗಿ ನೀಲಕುರಿಂಜಿಯಿಂದ ಆವೃತವಾಗಿದ್ದವು. ತದನಂತರ 2022 ರಲ್ಲಿ ಮಾಣಿಕ್ಯಧಾರ ಜಲಪಾತ ರಸ್ತೆ, ಸೀತಾಳಯ್ಯನಗಿರಿ ಹಾಗೂ ಕವಿಕಲ್ ಮಠದ ಬಳಿ ಅರಳಿತ್ತು. 2021 ರಲ್ಲಿ ಸೀತಾಳಯ್ಯನಗಿರಿಯ ಕೆಲವು ಭಾಗಗಳಲ್ಲಿ ಹಾಗೂ 2020 ರಲ್ಲಿ ಮೂಡಿಗೆರೆ ತಾಲೂಕಿನ ದೇವರ ಬೆಟ್ಟದಲ್ಲಿ ಭಾಗಶಃ ಅರಳಿತ್ತು.

ಅರಳಿರುವುದು ನೀಲಕುರಿಂಜಿ ಅಲ್ಲ, 'ಗುರಿಂಜೆ' ಹೂವು!

ಪ್ರಸ್ತುತ ಗಾಳಿಕೆರೆ ರಸ್ತೆಯಲ್ಲಿ ಅರಳಿರುವುದು ನೀಲಕುರಿಂಜಿ ಅಲ್ಲ, ಬದಲಾಗಿ 'ಗುರಿಂಜೆ' (Gurige) ಹೂವು ಎಂದು ನಿಸರ್ಗ ಪ್ರೇಮಿಗಳು ಸ್ಪಷ್ಟಪಡಿಸಿದ್ದಾರೆ. ವೈಜ್ಞಾನಿಕವಾಗಿ Strobilanthes heyneana Nees ಎಂದು ಕರೆಯಲಾಗುವ ಈ ಗುರಿಂಜೆ ಸಸ್ಯವು ಪ್ರತಿ ವರ್ಷವೂ ಅರಳುತ್ತದೆ. ಪ್ರಸ್ತುತ ಅರಳಿದ್ದ ಗುರಿಂಜೆ ಹೂವುಗಳು ಕೂಡ ಈಗ ಬಾಡಲು ಆರಂಭಿಸಿವೆ. ನೀಲಕುರಿಂಜಿ ಹುಡುಕಿಕೊಂಡು ಬಂದ ಪ್ರವಾಸಿಗರು ಈ ಗುರಿಂಜೆ ಹೂವುಗಳನ್ನೇ ನೋಡಿ ಹಿಂತಿರುಗುತ್ತಿದ್ದಾರೆ. "ನೀಲಕುರಿಂಜಿ ಅರಳಿದೆ ಎಂಬ ವೀಡಿಯೋ ನೋಡಿ ನಾನೂ ಬಂದಿದ್ದೆ. ಆದರೆ ಇಲ್ಲಿರುವುದು ನೀಲಕುರಿಂಜಿ ಅಲ್ಲ. ಇದು ಪ್ರತಿ ವರ್ಷವೂ ಅರಳುವ Strobilanthes heyneana Nees (ಗುರಿಂಜೆ) ಹೂವು" ಎಂದು ಪ್ರಕೃತಿ ತಜ್ಞ ಮಧು ಕುಮಾರ್ ತಿಳಿಸಿದ್ದಾರೆ.