ಚಿಕ್ಕಮಗಳೂರಿನಲ್ಲಿ, ತೀವ್ರ ಸಂಕಷ್ಟದಲ್ಲಿದ್ದ ವಿಕಲಚೇತನ ವ್ಯಕ್ತಿಯೊಬ್ಬರ 8 ಲಕ್ಷ ರೂ. ಸಾಲವನ್ನು ಮೆಗಾ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ. ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಹೆಗಡೆಯವರ ಮಾನವೀಯ ಮಧ್ಯಸ್ಥಿಕೆಯಿಂದ, ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ಸಾಲದ ಮೊತ್ತವನ್ನು ಕೇವಲ 15,000 ರೂ.ಗೆ ಇಳಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲಾಯಿತು.
ಚಿಕ್ಕಮಗಳೂರು (ಜು.13): ಕಾನೂನು ಎಂದರೆ ಕೇವಲ ನಿಯಮಗಳಲ್ಲ, ಅದರಾಚೆಗೂ ಮಿಡಿಯುವ ಮಾನವೀಯ ಹೃದಯವಿದೆ ಎಂಬುದನ್ನು ಚಿಕ್ಕಮಗಳೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಾಬೀತುಪಡಿಸಿದೆ. ಇತ್ತೀಚೆಗೆ ಆಯೋಜಿಸಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಂಗದ ಪರಮೋಚ್ಚ ಮಾನವೀಯ ನಡೆ ಅನಾವರಣಗೊಂಡಿದ್ದು, ಇಡೀ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಘಟನೆ? ಸಂಕಷ್ಟದಲ್ಲಿದ್ದ ವಿಕಲಚೇತನ
ತೀವ್ರ ದೈಹಿಕ ಅಸಮರ್ಥತೆ ಮತ್ತು ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿದ್ದ ವಿಕಲಚೇತನ ವ್ಯಕ್ತಿಯೊಬ್ಬರು ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿದ್ದ ಅವರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಬಡ್ಡಿ ಬೆಳೆಯುತ್ತಾ ಹೋಗಿ ಒಟ್ಟು ಸಾಲದ ಮೊತ್ತ ಬರೋಬ್ಬರಿ 8 ಲಕ್ಷ ರೂಪಾಯಿ ದಾಟಿತ್ತು. ಸಾಲ ವಸೂಲಾತಿಗಾಗಿ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿತ್ತು. ಇದರಿಂದಾಗಿ ಸಂತ್ರಸ್ತ ಕುಟುಂಬವು ತೀವ್ರ ಕಂಗಾಲಾಗಿತ್ತು.
ಸಂತ್ರಸ್ತನ ಬಳಿಗೇ ನಡೆದು ಬಂದ ನ್ಯಾಯಾಧೀಶರು!
ಪ್ರಕರಣದ ಸೂಕ್ಷ್ಮತೆ ಮತ್ತು ಸಾಲಗಾರನ ಕರುಣಾಜನಕ ಪರಿಸ್ಥಿತಿಯನ್ನು ಮನಗಂಡ ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿ ಸಾಲಗಾರನ ಬಳಿಗೇ ನ್ಯಾಯಾದಾನ ಮಾಡುವುದಕ್ಕೆ ತೀರ್ಮಾನಿಸಿದರು. ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಕಾನೂನು ತಂಡದ ಅಧಿಕಾರಿಗಳೊಂದಿಗೆ ನ್ಯಾಯಾಧೀಶರೇ ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂಭಾಗದ ಕಚೇರಿಗೆ ನಡೆದುಕೊಂಡು ಬಂದರು. ಸಾಲಗಾರನ ಬಳಿಯೇ ನಿಂತು ಸಮಾಲೋಚನೆ ನಡೆಸುವ ಮೂಲಕ ಸರಳತೆ ಮೆರೆದರು.
ಕಂಡ 8 ಲಕ್ಷದ ಸಾಲ 15 ಸಾವಿರಕ್ಕೆ ಸುಖಾಂತ್ಯ:
ನ್ಯಾಯಾಧೀಶರ ನೇತೃತ್ವದಲ್ಲಿ ಮಾನವೀಯ ನೆಲೆಯಲ್ಲಿ ನಡೆದ ಈ ಸೌಹಾರ್ದಯುತ ಮಾತುಕತೆಗೆ ಬ್ಯಾಂಕ್ ಅಧಿಕಾರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು. ವಿಕಲಚೇತನರ ಪರಿಸ್ಥಿತಿಗೆ ಮಿಡಿದ ಅಧಿಕಾರಿಗಳು ಬೃಹತ್ ಮೊತ್ತದ ಸಾಲವನ್ನು ಮನ್ನಾ ಮಾಡಲು ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ ಇಡೀ ಪ್ರಕರಣವು ಕೇವಲ 15,000 ರೂಪಾಯಿ ಪಾವತಿಗೆ ಇತ್ಯರ್ಥವಾಯಿತು. ಕೇವಲ ಹದಿನೈದು ಸಾವಿರ ರೂಪಾಯಿ ಪಡೆದು 8 ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಕ್ಲೋಸ್ ಮಾಡುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹೊಸ ಬದುಕಿನ ಭರವಸೆ ನೀಡಲಾಯಿತು.
ಕಣ್ಣೀರು ಒರೆಸುವ ಮಹಾ ವೇದಿಕೆ 'ಲೋಕ ಅದಾಲತ್'
ಲೋಕ ಅದಾಲತ್ ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳು ಕೇವಲ ನ್ಯಾಯಾಲಯದ ಕೇಸ್‌ಗಳನ್ನು ಇತ್ಯರ್ಥ ಪಡಿಸುವ ಕೇಂದ್ರಗಳಲ್ಲ, ಬದಲಿಗೆ ಅವು ಸಮಾಜದ ಅತ್ಯಂತ ದುರ್ಬಲ ವರ್ಗದವರ ಕಣ್ಣೀರು ಒರೆಸುವ ಮಾನವೀಯತೆಯ ಮಹಾ ವೇದಿಕೆಯಾಗಬಲ್ಲವು ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಜ್ವಲಂತ ಉದಾಹರಣೆಯಾಗಿದೆ. ನ್ಯಾಯಾಧೀಶರ ಹಾಗೂ ಬ್ಯಾಂಕ್ ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.


