Chikkamagaluru: ಕಲುಷಿತಗೊಂಡು ಅಪವಿತ್ರವಾಗುತ್ತಿದೆ ಪವಿತ್ರ ಕಲ್ಲತ್ತಿಗಿರಿ ಕ್ಷೇತ್ರ
ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಕಲ್ಲತ್ತಿಗಿರಿ ಜಲಪಾತ ಹಾಗೂ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಬರುವ ಭಕ್ತರು ಹಾಗೂ ವಾರಾಂತ್ಯದ ದಿನಗಳಲ್ಲಿ ಬರುವ ಕೆಲ ಪ್ರವಾಸಿಗರಿಂದ ಕ್ಷೇತ್ರ ಅಪವಿತ್ರವಾಗುತ್ತಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.31): ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಕಲ್ಲತ್ತಿಗಿರಿ ಜಲಪಾತ ಹಾಗೂ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಬರುವ ಭಕ್ತರು ಹಾಗೂ ವಾರಾಂತ್ಯದ ದಿನಗಳಲ್ಲಿ ಬರುವ ಕೆಲ ಪ್ರವಾಸಿಗರಿಂದ ಕ್ಷೇತ್ರ ಅಪವಿತ್ರವಾಗುತ್ತಿದೆ. ದೇವಸ್ಥಾನ ಹಾಗೂ ಫಾಲ್ಸ್ ಗೆ ಬರುವ ಪ್ರವಾಸಿರು ಪುಣ್ಯ ಕ್ಷೇತ್ರದಲ್ಲಿ ಬಟ್ಟೆ ಬರೆ ಎಸೆದು ಅಪವಿತ್ರ ಸ್ಥಳವನ್ನಾಗಿ ಮಾಡುವುದರ ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ಹಾಳುಗೆಡವುತ್ತಿರುವುದು ಸ್ಥಳೀಯರು ಹಾಗೂ, ಪರಿಸರಾಸಕ್ತ ಆಕ್ರೋಶಕ್ಕೆ ಕಾರಣವಾಗಿದೆ.
ಅಪವಿತ್ರವಾಗುತ್ತಿದೆ ಪವಿತ್ರ ಕಲ್ಲತ್ತಿಗಿರಿ ಕ್ಷೇತ್ರ:
ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕಲ್ಲತ್ತಿಗಿರಿ ಪುಣ್ಯಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವೇ ಇದೆ. ರಾಮಾಯಣ ಕಾಲದದಿಂದಲೂ ಕೂಡಾ ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿರುವ ಈ ಕಲ್ಲತ್ತಿಗಿರಿಗೆ ಅದರದ್ದೇ ಆದ ಮಹತ್ವವಿದ್ದು ಇಲ್ಲಿ ಹರಿಯುವ ಜಲಪಾತವು ಪರಿಸರ ಸೂಕ್ಷ್ಮ ಶೋಲಾ ಅರಣ್ಯಪ್ರದೇಶದಲ್ಲಿ ಹುಟ್ಟಿ ಹರಿಯುವ ಮೂಲಕ ಲಕ್ಷಾಂತರ ಜೀವರಾಶಿಗಳು ಸೇರಿದಂತೆ ಸಸ್ಯರಾಶಿಗಳಿಗೆ ನೀರುಣಸುವುದರ ಜೊತೆಗೆ ಸಾವಿರಾರು ಎಕರೆ ಪ್ರದೇಶಗಳಿಗೆ ನೀರುಣಸುತ್ತಿದೆ. ಒಂದು ಕಡೆ ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ಸ್ಥಳವಾಗಿದ್ದರೆ ಮತ್ತೊಂದೆಡೆ ರೈತಾಪಿ ಜನರ ಜೀವನಾಡಿಯಾಗಿದೆ. ಇಂತಹ ಸುದೀರ್ಘ ಇತಿಹಾಸ ಹೊಂದಿರುವ ಕಲ್ಲತ್ತಿಗಿರಿ ಪುಣ್ಯ ಕ್ಷೇತ್ರ ಧಾರ್ಮಿಕ ನಂಬಿಕೆಗೂ ಕೂಡಾ ಅಷ್ಟೇ ಹೆಸರುವಾಸಿಯಾಗಿದ್ದು. ರಾಜ್ಯದ ನಾನಾ ಭಾಗಗಳಿಂದ ದೇವರ ಉತ್ಸವ ಮೂರ್ತಿಗಳನ್ನು ತಂದು ಇಲ್ಲಿನ ಪುಣ್ಯ ಜಲದಲ್ಲಿ ಸ್ವಚ್ಛ ಮಾಡಿ ಪುಣ್ಯ ಮಾಡಿಸುವುದರ ಜೊತೆ, ಇಲ್ಲಿನ ಜಲಪಾತದ ನೀರಿನಲ್ಲಿ ಮಿಂದೆದ್ದು ಹೋದರೆ ತಮ್ಮ ಪಾಪ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಆಳವಾಗಿ ಬೇರೂರಿದೆ.
ಇಂತದ್ದರ ನಡುವೆ ಇಲ್ಲಿಗೆ ಬರುವ ಕೆಲವರು ಮೂಡನಂಬಿಕೆಯ ಹೆಸರಲ್ಲಿ ತಮ್ಮ ಹಳೆಯ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುವುದರಿಂದ ಇಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವುದರ ಜೊತೆಗೆ ಪುಣ್ಯ ಕ್ಷೇತ್ರ ಮಲಿನವಾಗುತ್ತದೆ ಎಂದು ಧಾರ್ಮಿಕವಾಗಿ ನಂಬಿಕೆ ಉಳ್ಳವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಒತ್ತಾಯ:
ಇಂತಹ ಪರಿಸರ ಸೂಕ್ಷ್ಮ ಹಾಗೂ ಪವಿತ್ರ ಪುಣ್ಯಸ್ಥಳಗಳ ಸಂರಕ್ಷಣೆ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಆದ್ಯ ಕರ್ತವ್ಯವಾಗಿರುವುದರಿಂದ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಿ ಇದನ್ನು ಸಂರಕ್ಷಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಉದ್ದೇಶದಿಂದ ಹಾಗೂ ಧಾರ್ಮಿಕ ನಂಬಿಕೆಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಔಷಧೀಯ ಸಸ್ಯ ಸಂಕುಲದ ಉಳಿವಿಗೆ ಶ್ರಮಿಸುವ ಕೆಲಸ ಮಾಡಲಿ ಎಂಬುದು ಜನರ ಆಶಯವಾಗಿದೆ.
ಅರಣ್ಯ ಇಲಾಖೆಗೆ ಕಾಡ್ಗಿಚ್ಚು ಆತಂಕ: ಬೆಂಕಿ ಹರಡುವಿಕೆ ತಡೆಗೆ ಹಳೆಯ ಅಸ್ತ್ರವೇ ಗತಿ
ಕಲ್ಲತ್ತಿಗಿರಿಗೆ ಬರುವ ಪ್ರವಾಸಿಗರ ಬಳಿ ಪ್ರವೇಶ ಶುಲ್ಕ ಸೇರಿದಂತೆ ಸುರಕ್ಷತೆಯ ದೃಷ್ಟಿಯಿಂದ ನಿರ್ಮಿಸಿರುವ ಚೆಕ್‌ಪೋಸ್ಟ್ನಲ್ಲಿ ಪ್ರವೇಶ ಶುಲ್ಕ ಪಡೆಯುವುದನ್ನು ಬಿಟ್ಟರೆ ಯಾವುದೇ ರೀತಿಯಿಂದಲೂ ಇಲ್ಲಿಗೆ ಬರುವ ಪ್ರವಾಸಿಗರ ಲಗೇಜುಗಳನ್ನು ಪರೀಕ್ಷೆ ಮಾಡುವುದಾಗಲೀ ಅಥವಾ ಮದ್ಯ, ಮಾದಕ ವಸ್ತುಗಳ ಸಾಗಾಣೆಯನ್ನು ತಡೆಯುವ ಕೆಲಸಕ್ಕೆ ಮುಂದಾಗುತ್ತಿಲ್ಲ ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರು ಯಾವುದೇ ಭಯವಿಲ್ಲದೆ ಮದ್ಯ, ಮಾದಕ ವಸ್ತುಗಳನ್ನು ಕೊಂಡೊಯ್ದು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ ಎಂದು ಸ್ಥಳೀಯರು ಹಾಗೂ ಪರಿಸರಾಸಕ್ತರು ಆರೋಪಿಸಿದ್ದಾರೆ. ಅಲ್ಲದೆ ಇಲ್ಲಿನ ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಖಾಯಂ ಆಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವುದರ ಜೊತೆಗೆ ರಾತ್ರಿ ಪಾಳೆಯ ಗಸ್ತನ್ನು ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Chikkamagaluru: ಶಾಸಕರೇ ಉದ್ಘಾಟಿಸಬೇಕೆಂದು ಬೀಗ ಹಾಕಿದ್ದ 3 ಕೋಟಿಯ ಕಾಂಕ್ರೀಟ್ ರಸ್ತೆ ಢಮಾರ್!
ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲು ಆಗ್ರಹ:
ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಪ್ರವಾಸೋದ್ಯಮದಲ್ಲಿ ತನ್ನದೇ ಮಹತ್ವ ಹೊಂದಿರುವ ಐತಿಹಾಸಿಕ ಪುಣ್ಯಕ್ಷೇತ್ರ ಕಲ್ಲತ್ತಿಗಿರಿ ಪುಣ್ಯಕ್ಷೇತ್ರವನ್ನು ಹೆಸರಿಗಷ್ಟೇ ಪುಣ್ಯಕ್ಷೇತ್ರ, ಪ್ರವಾಸಿ ಸ್ಥಳವೆಂದು ಘೋಷಣೆ ಮಾಡಲಾಗಿದ್ದು, ಇದುವರೆಗೂ ಇಲ್ಲಿ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡುವಂತಹ ಕೆಲಸಗಳನ್ನು ಪ್ರವಾಸೋದ್ಯಮ ಇಲಾಖೆ, ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಂದಾಗಲೀ ಮಾಡಲು ಕನಿಷ್ಠ ಆಸಕ್ತಿ ತೋರದೇ ಇರುವುದು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಿವಾಸಿಗಳನ್ನು ಕೆರಳಿಸಿದೆ.