ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ 7 ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಚಿಕ್ಕಮಗಳೂರು (ಆ.29): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಜಿಲ್ಲೆಯ ಒಟ್ಟು 7 ತಾಲ್ಲೂಕುಗಳಲ್ಲಿ ಒಂದು ದಿನದ ಮಟ್ಟಿಗೆ (ಆ.30 ಶನಿವಾರ) ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದ ಪ್ರಕಾರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಮತ್ತು ಕಳಸ ತಾಲ್ಲೂಕುಗಳಲ್ಲಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ ರಜೆ ಇರಲಿದೆ. ಇದರ ಜೊತೆಗೆ, ಚಿಕ್ಕಮಗಳೂರು ತಾಲ್ಲೂಕಿನ ಕಸಬಾ, ಅಂಬಳೆ, ಆಲ್ದೂರು, ವಸ್ತಾರೆ, ಖಾಂಡ್ಯ, ಆವತಿ, ಮತ್ತು ಜಾಗರ ಹೋಬಳಿಗಳಿಗೂ ರಜೆ ಅನ್ವಯಿಸಲಿದೆ. ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ-ಲಕ್ಕವಳ್ಳಿ ಹೋಬಳಿ ವ್ಯಾಪ್ತಿಯ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆ ಮತ್ತು ಗಾಳಿಯ ಅಬ್ಬರ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಜೆ ಘೋಷಿಸಿರುವ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನದಿಗಳು ಮತ್ತು ತೊರೆಗಳು ತುಂಬಿ ಹರಿಯುತ್ತಿವೆ. ಸಾರ್ವಜನಿಕರು ಯಾವುದೇ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಪರಿಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ರಜೆ ನೀಡಲಾಗಿರುವ ಎಲ್ಲಾ ಶಾಲೆಗಳು ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರೆ ಸಾರ್ವತ್ರಿಕ ರಜಾ ದಿನಗಳಂದು ಸರಿದೂಗಿಸಬೇಕು ಎಂದು ತಿಳಿಸಿದ್ದಾರೆ.
ರಜೆ ಘೋಷಣೆ ಮಾಡಿದ ಪ್ರದೇಶಗಳ ವಿವರ
ತಾಲೂಕು ರಜೆ ಅನ್ವಯ ಪ್ರದೇಶ | |||
| ಕ್ರಮ ಸಂಖ್ಯೆ | ತಾಲೂಕು | ರಜೆ ಅನ್ವಯ ಪ್ರದೇಶ | 30-8-2025ರ ಶನಿವಾರ ರಜೆ ಅನ್ವಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಾತ್ರ ರಜೆ |
| 1 | ಚಿಕ್ಕಮಗಳೂರು | ಕಸಬಾ, ಅಂಬಳೆ, ಆವತಿ, ಜಾಗರ, ವಸ್ತಾರೆ, ಆಲ್ಲೂರು, ಖಾಂಡ್ವ ಹೋಬಳಿ ವ್ಯಾಪ್ತಿ | |
| 2 | ಕೊಪ್ಪ | ಇಡೀ ತಾಲೂಕು | |
| 3 | ಕಳಸ | ಇಡೀ ತಾಲೂಕು | |
| 4 | ಮೂಡಿಗೆರೆ | ಇಡೀ ತಾಲೂಕು | |
| 5 | ಶೃಂಗೇರಿ | ಇಡೀ ತಾಲೂಕು | |
| 6 | ನರಸಿಂಹರಾಜಪುರ | ಇಡೀ ತಾಲೂಕು | |
| 7 | ತರೀಕೆರೆ | ಲಕ್ಕವಳ್ಳಿ, ಲಿಂಗದಹಳ್ಳಿ ಹೋಬಳಿ ವ್ಯಾಪ್ತಿ | |
