ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಕೆಲವು ದಿನಗಳವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದೆ.

ಬೆಂಗಳೂರು (ಆ.29): ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಬುಧವಾರದಿಂದ ಮಳೆ ಚುರುಕುಗೊಂಡಿದ್ದು, ಗುರುವಾರವೂ ವಿವಿಧೆಡೆ ಮುಂದುವರೆದಿದೆ. ಆ.29 ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ. ಮುಂದುವರೆದು ಆ.30 ಮತ್ತು 31ಕ್ಕೆ ಆರೆಂಜ್‌ ಅಲರ್ಟ್‌, ಸೆ.1ರಿಂದ ಸೆ.4 ವರೆಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಿದೆ.

ಉಳಿದಂತೆ ಆ.29ಕ್ಕೆ ಬೆಳಗಾವಿ, ಬೀದರ್‌, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್‌ ಮತ್ತು ಹಾಸನ, ವಿಜಯಪುರ, ಯಾದಗಿರಿ ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆ.31ರ ವರೆಗೆ ಸಾಧಾರಾಣ ಮಳೆ ಮುಂದುವರೆಯಲಿದೆ. ಆ ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಕ್ಯಾಸಲ್‌ರಾಕ್‌ ನಲ್ಲಿ ಅತಿ ಹೆಚ್ಚು 20 ಸೆಂ.ಮೀ. ಮಳೆಯಾಗಿದೆ.

ಗೇರುಸೊಪ್ಪ 17, ಹೊನ್ನಾವರ 14, ಅಂಕೋಲಾ 13, ಮಂಗಳೂರು ವಿಮಾನ ನಿಲ್ದಾಣ, ಕದ್ರಾ ಹಾಗೂ ಕಾರವಾರದಲ್ಲಿ ತಲಾ 12, ಜೇವರ್ಗಿ, ಔರಾದ್‌ದಲ್ಲಿ ತಲಾ 11, ಜೋಯಿಡಾ 11, ಯಡ್ರಾಮಿ, ಸುಳ್ಯ, ಸಿದ್ದಾಪುರ, ಶಕ್ತಿನಗರ ಮಂಕಿ, ಮಣಿ, ಕುಮಟಾ, ಕಾರ್ಕಳ, ಬೀದರ್‌, ಬಂಟ್ವಾಳದಲ್ಲಿ ತಲಾ 9, ಉಡುಪಿ, ಕುಂದಾಪುರದಲ್ಲಿ ತಲಾ 8, ಉಪ್ಪಿನಂಗಡಿ, ನಾರಾಯಣಪುರ, ಗದಗ ಹಾಗೂ ಧರ್ಮಸ್ಥಳದಲ್ಲಿ ತಲಾ 7 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.