ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಮಗಳ ಮದುವೆಯ ಹಿಂದಿನ ದಿನ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ನಿಲ್ಲಬಾರದು ಎಂದು ಕುಟುಂಬಸ್ಥರು ಮಗಳಿಗೆ ವಿಷಯ ತಿಳಿಸದೆ ಮದುವೆ ಮುಗಿಸಿದ್ದಾರೆ. ಮದುವೆ ನಂತರ ಮಗಳಿಗೆ ತಂದೆಯ ಸಾವಿನ ಸುದ್ದಿ ತಿಳಿದು ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು (ಜ.20): ವರ್ಷಗಳ ಕಾಲ ಮಗಳನ್ನು ಜೋಪಾನವಾಗಿ ಸಾಕಿ, ವಿದ್ಯಾಭ್ಯಾಸ ನೀಡಿ ಆಕೆಗೊಂದು ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡುವ ಸಂಭ್ರಮವನ್ನು ಯಾವ ತಂದೆಯೂ ಕೂಡ ತಪ್ಪಿಸಿಕೊಳ್ಳಲಾರ. ಮಗಳ ಮದುವೆಯಲ್ಲಿ ಅಪ್ಪನಷ್ಟು ಭಾವುಕನಾಗುವ ವ್ಯಕ್ತಿ ಮತ್ತೊಬ್ಬನಿಲ್ಲ. ಮಗಳಿಗೂ ಹಾಗೆ, ಮದುವೆ ಮನೆಯಲ್ಲಿ ಬೇರೆಲ್ಲರ ಮುಖಕ್ಕಿಂತ ತನ್ನ ಅಪ್ಪನ ಮುಖವನ್ನು ನೋಡಬೇಕು ಎನ್ನುವ ಬಯಕೆಯೇ ಹೆಚ್ಚಿರುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯನ್ನು ನೋಡಿದರೆ ಕಣ್ಣು ತೇವವಾಗದೇ ಇರದು. ಮಗಳ ಮದುವೆಯ ಖುಷಿಯಲ್ಲಿದ್ದ ಅಪ್ಪ, ಮದುವೆಯ ಹಿಂದಿನ ದಿನವೇ ರಸ್ತೆ ಅಪಘಾತದಲ್ಲಿ ತೀರಿ ಹೋಗಿದ್ದಾನೆ. ಅಪ್ಪ ಸತ್ತ ಸೂತಕವಾಗಿದ್ದರೂ, ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಮಗಳಿಗೆ ಇದನ್ನು ತಿಳಿಸದೇ ಮದುವೆ ಕಾರ್ಯವನ್ನು ಅವರ ಸಂಬಂಧಿಕರು ಮುಗಿಸಿದ್ದಾರೆ. ಮದುವೆಮುಗಿದ ಬಳಿಕವೇ ಮಗಳಿಗೆ ತನ್ನ ತಂದೆ ತೀರಿ ಹೋಗಿರುವ ವಿಚಾರ ಗೊತ್ತಾಗಿದೆ.
ಆಸ್ಪತ್ರೆಯ ಚಿತಾಗಾರದಲ್ಲಿ ಅಪ್ಪನ ಶವವಿದ್ದರೆ, ಇದ್ಯಾವುದೂ ಗೊತ್ತಿಲ್ಲದೆ ಮಗಳು ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ. ಅಪ್ಪ ಸಾವನ್ನಪ್ಪಿರುವ ವಿಚಾರ ಗೊತ್ತಿಲ್ಲದೆ ಮಗಳು ಹಸೆಮಣೆ ಏರಿದ್ದಾರೆ. ಮಗಳ ಮದುವೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಅಪ್ಪ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದ. ಇದನ್ನು ಮದುವೆ ಆಗಲಿದ್ದ ಆತನ ಮಗಳಿಗೆ ಹಾಗೂ ಪತ್ನಿಗೆ ತಿಳಿಸದೇ ಇಡೀ ಮದುವೆ ಸಮಾರಂಭವನ್ನು ಮುಗಿಸಿದ್ದಾರೆ.
ಚೀಲದ ಪಾಪಣ್ಣನವರ ಅವರ ಪುತ್ರ 45 ವರ್ಷದ ಚಂದ್ರು ಮೃತ ವ್ಯಕ್ತಿ. ಸೋಮವಾರ ಚಂದ್ರು ಅವರ ಪುತ್ರಿ ದೀಕ್ಷಿತಾ ಅವರ ವಿವಾಹ ನೆರವೇರಿದೆ. ಭಾನುವಾರ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು, ವಾಪಾಸ್ ಬರುವಾಗ ಅಪಘಾತಕ್ಕೆ ಈಡಾಗಿ ಸಾವು ಕಂಡಿದ್ದರು.
ಮದ್ಯಪ್ರಿಯರಿಗೆ ಶಾಕ್, ಈ 6 ಬಿಯರ್‌ಗಳ ಬೆಲೆ 10 ರಿಂದ 45 ರೂಪಾಯಿವರೆಗೆ ಏರಿಕೆ!
ಆದರೆ, ಈ ದುಃಖದ ಸುದ್ದಿಯನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಆರತಕ್ಷತೆ-ಮದುವೆಯನ್ನು ಸಂಬಂಧಿಕರು ಮುಗಿಸಿದ್ದಾರೆ. ಚಂದ್ರು ಸಾವನ್ನಪ್ಪಿದ್ದ ವಿಷಯ ಪತ್ನಿಗೂ ತಿಳಿದಿರಲಿಲ್ಲ, ಮಗಳಿಗೂ ತಿಳಿದಿರಲಿಲ್ಲ. ಮದುವೆ ಕಾರ್ಯಕ್ಕೆ ಓಡಾಡಿ ಸುಸ್ತಾಗಿ ಆಸ್ಪತ್ರೆ ಸೇರಿದ್ದಾರೆ ಎಂದು ಪತ್ನಿ ಹಾಗೂ ಮಗಳಿಗೆ ತಿಳಿಸಿದ್ದರು. ಇಂದು ಮದುವೆ ಮುಗಿದ ಬಳಿಕ ಪತ್ನಿಗೆ-ಮಗಳಿಗೆ ಕುಟುಂಬಸ್ಥರು ವಿಷಯ ಮುಟ್ಟಿಸಿದ್ದಾರೆ. ಈಗ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪತ್ನಿ-ಮಗಳ ಆಕ್ರಂದನ ಮುಗಿಲು ಮುಟ್ಟಿದೆ.
Bengaluru: ನೆಲಮಂಗಲದಲ್ಲಿ ಮತ್ತೊಂದು ಭೀಕರ ಅಪಘಾತ, ಚಲಿಸುತ್ತಿದ್ದ ಲಾರಿಯ ಅಡಿಗೆ ಸಿಲುಕಿದ ಕಾರು!

