ಚಿಕ್ಕಮಗಳೂರಿನ ಬೀರೂರು ಪಟ್ಟಣದಲ್ಲಿ, ಮಕ್ಕಳ ಬೇಸಿಗೆ ರಜೆ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪತ್ನಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಸಣ್ಣ ಮನಸ್ತಾಪವು ಇಬ್ಬರು ಮಕ್ಕಳನ್ನು ತಬ್ಬಲಿ ಮಾಡಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಏ.29): ಸಣ್ಣದೊಂದು ಕೌಟುಂಬಿಕ ವಿಚಾರ ತಾರಕಕ್ಕೇರಿ ಪೊಲೀಸ್ ಅಧಿಕಾರಿಯ ಪತ್ನಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಫಿನಾಡಿನಲ್ಲಿ ಸಂಭವಿಸಿದೆ. ಮಕ್ಕಳ ಬೇಸಿಗೆ ರಜೆಯ ವಿಚಾರಕ್ಕೆ ಶುರುವಾದ ಗಲಾಟೆ, ಕೊನೆಯಲ್ಲಿ ಮನೆಯೊಡತಿಯ ಪ್ರಾಣವನ್ನೇ ಬಲಿಪಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳ ನಡುವೆ ನಡೆದ ಆ ಕಿರಿಕ್ ಏನು ? ಈ ಕುರಿತು ಒಂದು ವರದಿ ಇಲ್ಲಿದೆ ..

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಕರ್ತವ್ಯನಿರತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರ ಪತ್ನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೀರೂರು ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ತಿಪ್ಪೇಶ್ ಅವರ ಪತ್ನಿ ಪದ್ಮ (34) ಎಂಬುವವರೇ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ದುರ್ದೈವಿ. ಮೂಲತಃ ತುಮಕೂರು ಜಿಲ್ಲೆಯವರಾದ ಪದ್ಮ ಮತ್ತು ದಾವಣಗೆರೆ ಮೂಲದ ತಿಪ್ಪೇಶ್ ಅವರು ಈ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಸುಖ ಸಂಸಾರ ನಡೆಸುತ್ತಿದ್ದ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಊರಿಗೆ ಕರೆದುಕೊಂಡು ಹೋಗಲಿಕ್ಕೆ ಒಪ್ಪದ ಗಂಡ

ಇನ್ನು ಈ ಭೀಕರ ದುರಂತಕ್ಕೆ ಮಕ್ಕಳ ಬೇಸಿಗೆ ರಜೆಯ ವಿಚಾರವೇ ಮುಖ್ಯ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮಕ್ಕಳಿಗೆ ಶಾಲಾ ರಜೆ ಇರುವುದರಿಂದ ಅವರನ್ನು ತಮ್ಮೂರಿನ ಕಡೆಗೆ ಕರೆದುಕೊಂಡು ಹೋಗುವಂತೆ ಅಥವಾ ಕಳಿಸಿಕೊಡುವಂತೆ ಪದ್ಮ ಅವರು ಪತಿಯ ಬಳಿ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ, ಇದೇ ವಿಚಾರವಾಗಿ ದಂಪತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪತಿಯು ಮಕ್ಕಳನ್ನು ಊರಿಗೆ ಕಳಿಸಲು ಒಪ್ಪಲಿಲ್ಲ ಎಂಬ ಆಕ್ರೋಶ ಪದ್ಮ ಅವರಲ್ಲಿ ಮನೆಮಾಡಿತ್ತು.

ಅಂತರ್ಜಾತಿ ವಿವಾಹವಾಗಿದ್ದ ಜೋಡಿ

ಇನ್ನು ಪತಿಯ ನಿರ್ಧಾರದಿಂದ ತೀವ್ರವಾಗಿ ಮನನೊಂದಿದ್ದ ಪದ್ಮ ಅವರು, ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 12 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ ಜಾತಿ ಮದುವೆಯಾಗಿದ್ದ ಜೋಡಿಯಲ್ಲಿ ನಡೆದ ಸಣ್ಣ ಮನಸ್ತಾಪವೊಂದು ಸಾವಿನಲ್ಲಿ ಅಂತ್ಯವಾಗಿದೆ. ಇದರಿಂದಾಗಿ ಇಬ್ಬರು ಪುಟಾಣಿ ಮಕ್ಕಳು ಅಮ್ಮನನ್ನ ಕಳೆದುಕೊಂಡಿದ್ದಾರೆ. ಈ ಘಟನೆ ಸಂಬಂಧ ಅಪ್ಪನೂ ಕೂಡ ಪೊಲೀಸ್ ವಿಚಾರಣೆಗೆಂದು ಜೈಲಿಗೆ ಹೋದಲ್ಲಿ ಅನಾಥವಾಗುತ್ತಾರೆ.

ಸದ್ಯ ಪದ್ಮ ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲೇ ಇತ್ತು. ಅವರ ತವರು ಮನೆಯವರು ಸ್ಥಳಕ್ಕೆ ಆಗಮಿಸಿದ ನಂತರ ಶವವನ್ನು ಇಳಿಸಲಾಯಿತು. ಘಟನೆ ಸ್ಥಳಕ್ಕೆ ಸೋಕೋ ತಜ್ಞರು ಆಗಮಿಸಿ ಪರಿಶೀಲನೆ ನಡೆಸಲಾಯಿತು. ಪ್ರೀತಿಸಿ ಹಸೆಮಣೆ ಏರಿದ್ದ ದಂಪತಿಗಳ ನಡುವೆ ಸಣ್ಣ ವಿಚಾರಕ್ಕೆ ಶುರುವಾದ ಕಲಹವೊಂದು ಇಬ್ಬರು ಮಕ್ಕಳನ್ನು ತಾಯಿಯಿಲ್ಲದಂತೆ ಮಾಡಿದ್ದು, ಇಡೀ ಜನರ ತೀವ್ರ ವಿಷಾದಕ್ಕೆ ಕಾರಣವಾಗಿದೆ. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.